ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಲೀನ್ ಹೊಂಡ’ ಅಭಿಯಾನ: ಕೊಳವೆಬಾವಿಗಳಿಗೆ ಜೀವ

ಈ ಬಾರಿ ‘ಫಲಶ್ರುತಿ’ಯೊಂದಿಗೆ ಕೋಟೆನಾಡಿನಲ್ಲಿ ‘ವಿಶ್ವ ಜಲ ದಿನಾಚರಣೆ’
Last Updated 22 ಮಾರ್ಚ್ 2018, 9:27 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕಳೆದ ವರ್ಷ ಬೇಸಿಗೆಯಲ್ಲಿ ನಮ್ಮ ಮನೆ ಕೊಳವೆಬಾವಿ ಪೂರ್ತಿ ಬತ್ತಿ ಹೋಗಿತ್ತು. ಅಕ್ಟೋಬರ್‌ನಲ್ಲಿ ಮಳೆ ಬಂತು. ಹೊಂಡ ತುಂಬಿದ ಮೇಲೆ, ಬೋರ್‌ವೆಲ್‌ನಲ್ಲಿ ತನ್ನಿಂತಾನೇ ನೀರು ಬರೋದಕ್ಕೆ ಶುರುವಾಗಿದೆ...’

ನಗರದ ಕಲ್ಯಾಣಿ, ಹೊಂಡಗಳ ಆಸುಪಾಸಿನಲ್ಲಿರುವ ಹಲವು ನಿವಾಸಿಗಳ ಬಾಯಲ್ಲಿ ಇದೇ ಮಾತು. ಈ ವರ್ಷದ ಬಿರುಬೇಸಿಗೆಯಲ್ಲೂ ಕಲ್ಯಾಣಿಗಳಲ್ಲಿ ನೀರು ತುಂಬಿಕೊಂಡಿರುವುದು ಹಾಗೂ ಕೊಳವೆಬಾವಿಗಳಲ್ಲಿ ನೀರು ಬರುತ್ತಿರುವುದು, ಅವರ ಈ ಸಂತಸಕ್ಕೆ ಕಾರಣವಾಗಿದೆ.

ಇಷ್ಟಕ್ಕೂ ಕಲ್ಯಾಣಿಗಳಲ್ಲಿ ಇನ್ನೂ ನೀರು ಉಳಿದಿರಲು ಮುಖ್ಯ ಕಾರಣ, ಕಳೆದ ವರ್ಷ ನಗರಸಭೆಯ ಪೌರಕಾರ್ಮಿಕರು ಕೈಗೊಂಡ ಕಲ್ಯಾಣಿ ಅಥವಾ ಹೊಂಡಗಳನ್ನು ಸ್ವಚ್ಛಗೊಳಿಸಿದ್ದು. ಹೂಳು ತೆಗೆದ ಕಲ್ಯಾಣಿಗಳು ಆ ವರ್ಷದ ಹಿಂಗಾರಿನಲ್ಲಿ ಸುರಿದ ಮಳೆಗೆ ಭರ್ತಿಯಾಗಿ ಕೋಡಿ ಹರಿದವು. ಕಲ್ಯಾಣಿಗಳೆಲ್ಲ ತುಂಬಿ ಕೋಡಿ ಹರಿದವು. ಪೌರಕಾರ್ಮಿಕರ ಪರಿಶ್ರಮಕ್ಕೆ ಫಲ ಸಿಕ್ಕಿತು. ಹಾಗಾಗಿ ತುಂಬಿದ ಕಲ್ಯಾಣಿಗಳ ಸುತ್ತಲಿನ ಬಡಾವಣೆಗಳಲ್ಲಿ ಬತ್ತಿ ಹೋಗಿದ್ದ ಕೊಳವೆಬಾವಿಗಳಿಗೆ ಮರುಜೀವ ಬಂತು. ಈಗ ಬೇಸಿಗೆಯಲ್ಲೂ ಅವು ನೀರುಣಿಸುತ್ತಿವೆ.

ಸಿಹಿನೀರು ಹೊಂಡ: ‘ಸಿಹಿನೀರು ಹೊಂಡ ಖಾಲಿಯಾದಾಗ, ನಮ್ಮ ಮನೆಯ ಕೊಳವೆ ಬಾವಿಯಲ್ಲಿ ತುಂಬಾ ಕಡಿಮೆ ನೀರಿತ್ತು. ಕೆಲವೊಮ್ಮೆ ನೀರು ಬರುತ್ತಿರಲಿಲ್ಲ. ಹೂಳೆತ್ತಿಸಿದ ನಂತರ, ಹೊಂಡ ಮಳೆ ನೀರು ತುಂಬಿಕೊಂಡ ಮೇಲೆ ನಮ್ಮ ಮನೆ ಅಷ್ಟೇ ಅಲ್ಲ, ಸುತ್ತಲಿನ ಎಲ್ಲ ಕೊಳವೆಬಾವಿಗಳಲ್ಲೂ ಅಂತರ್ಜಲ ಹೆಚ್ಚಾಯಿತು’ ಎಂದು ನೆನಪಿಸಿಕೊಳ್ಳು­ತ್ತಾರೆ ಹೊಳಲ್ಕೆರೆ ರಸ್ತೆಯ ನಿವಾಸಿ ಎಸ್. ಬಿ.ಪ್ರಕಾಶ್.

ಹೂಳೆತ್ತಿದ ಮೇಲೆ ಹೊಂಡದಲ್ಲಿ ನೀರು ಸಂಗ್ರಹ ಪ್ರಮಾಣ ದುಪ್ಪಟ್ಟಾಗಿದೆ. ಹಾಗಾಗಿ ಈ ಬೇಸಿಗೆಯಲ್ಲಿ ಮಾತ್ರವಲ್ಲ, ಮುಂದಿನ ವರ್ಷಕ್ಕೂ ಕೊಳವೆಬಾವಿಗಳಲ್ಲಿ ನೀರು ಇರುತ್ತದೆ. ಆದರೆ, ಜನ ನೀರನ್ನು ಮಿತವಾಗಿ ಬಳಸಬೇಕು ಅಷ್ಟೇ’ ಎನ್ನುತ್ತಾರೆ ನಗರಸಭೆಯ ಮಾಜಿ ಅಧ್ಯಕ್ಷ ನಿರಂಜನಮೂರ್ತಿ.

ಗಣಪತಿ ದೇವಸ್ಥಾನದ ಬಾವಿ: ಐವತ್ತು ವರ್ಷಗಳಲ್ಲಿ ಕೇವಲ ಒಂದೇ ಒಂದು ಸಾರಿ ಹೂಳು ಎತ್ತಿದ್ದ ಎಸ್ ಪಿ ಕಚೇರಿ ರಸ್ತೆಯ ಗಣಪತಿ ದೇವಸ್ಥಾನದ ಹಿಂದಿರುವ ಬಾವಿಯನ್ನು ಈ ಬಾರಿ ನಗರಸಭೆಯಿಂದ ಹೂಳು ತೆಗೆಸಲಾಗಿತ್ತು. ಆ ಬಾವಿಯೂ ಕಳೆದ ವರ್ಷ ಭರ್ತಿಯಾಗಿತ್ತು. ‘ಬಾವಿ ಖಾಲಿಯಾಗಿ ಬಹಳ ವರ್ಷವಾಗಿತ್ತು. ನಮ್ಮ ಕೊಳವೆಬಾವಿಗಳಲ್ಲೂ ನೀರು ಖಾಲಿಯಾಗಿತ್ತು. ಕಳೆದ ವರ್ಷ ನಗರಸಭೆಯವರು ಹೂಳು ತೆಗೆಸಿದ ನಂತರ ಬಾವಿ ಸ್ವಚ್ಛವಾಯಿತು. ಮಳೆ ಬಂದು ನೀರು ತುಂಬಿಕೊಂಡಿತು. ಆಗಿನಿಂದ ಖಾಲಿಯಾಗಿದ್ದ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿವೆ. ಸುತ್ತಮುತ್ತಲಿನ ಮನೆಗಳ ಕೊಳವೆ ಬಾವಿಗಳಲ್ಲಿ ನೀರು ಮತ್ತೆ ಹೆಚ್ಚಾಗಿದೆ’ ಎಂದು ನಿವಾಸಿ ದೀಪಾ ನೆನಪಿಸಿಕೊಳ್ಳುತ್ತಾರೆ.

ಕೆಂಚಮಲ್ಲಪ್ಪನ ಹೊಂಡ: ‘ಕೆಂಚಮಲ್ಲಪ್ಪನ ಹೊಂಡದ ನೀರು ಖಾಲಿ ಮಾಡಿ ಹೂಳು ಎತ್ತಿದಾಗ, ನಮ್ಮ ಕೊಳವೆಬಾವಿ ಪೂರ್ಣ ಬತ್ತಿ ಹೋಯಿತು. ಹೋಟೆಲ್ ಕೆಲಸಕ್ಕೆ ಟ್ಯಾಂಕರ್‌ನಿಂದ ನೀರು ತರಿಸಿಕೊಂಡೆವು. ಹೂಳು ಎತ್ತಿಸಿದ ಮೇಲೆ ನೀರು ಸಂಗ್ರಹದ ಪ್ರಮಾಣ ಹೆಚ್ಚಾಯಿತು. ಈಗ ಬಾವಿ ಭರ್ತಿಯಾಗಿದೆ. ಬೋರ್‌ವೆಲ್ ರೀಚಾರ್ಜ್ ಆಗಿದೆ. ಇನ್ನೊಂದು ವರ್ಷ ಯೋಚನೆ ಇಲ್ಲ’ ಎನ್ನುತ್ತಾ ಪ್ರಜ್ವಲ್ ಹೋಟೆಲ್ ಭಾಸ್ಕರ್ ಹೊಂಡ ಹೂಳೆತ್ತಿದ ಪರಿಣಾಮವನ್ನು ಸಂತಸದಿಂದ ವಿವರಿಸುತ್ತಾರೆ.

ಅಕ್ಟೋಬರ್ 2016ರಲ್ಲಿ ಶುರುವಾಗಿತ್ತು: ಅಕ್ಟೋಬರ್ 2016ರಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮತ್ತು ಹಾಲಿ ಅಧ್ಯಕ್ಷ ಎಚ್. ಎನ್. ಗೊಪ್ಪೆ ಮಂಜುನಾಥ್ ಆರಂಭಿಸಿದ ‘ಕ್ಲೀನ್ ಹೊಂಡ’ ಅಭಿಯಾನ, ಜಲಮೂಲಗಳ ಸ್ವಚ್ಛತೆಗೊಂದು ಮಾದರಿಯಾಯಿತು. ಸಂಘ ಸಂಸ್ಥೆಗಳು ನೀಡಿದ ಸಹಕಾರ, ಸಮುದಾಯ ಸಹಭಾಗಿತ್ವಕ್ಕೊಂದು ಮಾದರಿ. ಆ ದಿನ ಕೈಗೊಂಡ ‘ಕ್ಲೀನ್ ಹೊಂಡ’ ಅಭಿಯಾನದ ಫಲಶ್ರುತಿಯಾಗಿ ಈ ವರ್ಷ ನಗರದ ಬಹುತೇಕ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಸ್ಥಿರವಾಗಿದೆ. ಆ ಫಲಶ್ರುತಿಯ ಸಂಭ್ರಮದ ಜತೆಗೆ, ಭವಿಷ್ಯದ ಜಲಜಾಗೃತಿಯೊಂದಿಗೆ ಕೋಟೆನಾಡಿನ ನಾಗರಿಕರು ಈ ವರ್ಷದ ‘ವಿಶ್ವ ಜಲದಿನ’ವನ್ನು ಆಚರಿಸಬೇಕಿದೆ.
**
‘ಹೂಳೆತ್ತುವುದರಿಂದ ಬಾವಿಯ ನೀರು ಶುದ್ಧವಾಗಿದೆ. ಈಗ ಬಾವಿ ನೀರನ್ನು ಮಲಿನವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕು
 –ದೀಪಾ, ಮುನ್ಸಿಪಲ್ ಕಾಲೊನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT