ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಇಲ್ಲದ ದೇಶಪ್ರೇಮ ಅಪಾಯಕಾರಿ

ದ.ರಾ. ಬೇಂದ್ರೆ ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ.ಕೆ.ಎಸ್. ಶರ್ಮಾ ಅಭಿಪ್ರಾಯ
Last Updated 22 ಮಾರ್ಚ್ 2018, 9:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶಪ್ರೇಮದ ಹೆಸರಿನಲ್ಲಿ ನಡೆಯುವಷ್ಟು ಕೊಲೆ, ಅತ್ಯಾಚಾರ ಹಾಗೂ ಘರ್ಷಣೆ ಬೇರಾವ ವಿಷಯದಲ್ಲೂ ನಡೆಯುವುದಿಲ್ಲ. ಮಾನವೀಯತೆ ಇಲ್ಲದ ದೇಶಪ್ರೇಮ ಅತ್ಯಂತ ಅಪಾಯಕಾರಿ’ ಎಂದು ಡಾ. ದ.ರಾ. ಬೇಂದ್ರೆ ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ.ಕೆ.ಎಸ್. ಶರ್ಮಾ ಅಭಿಪ್ರಾಯಪಟ್ಟರು.

ಬಸವ ಶಾಂತಿ ಮಿಷನ್‌ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹುಬ್ಬಳ್ಳಿಯ ವಿಶ್ವ ಶ್ರಮ ಚೇತನ ಕ್ಯಾಂಪಸ್‌ನಲ್ಲಿ ನಡೆದ ‘ಸ್ವಾತಂತ್ರ್ಯ ಹೋರಾಟದ ಸ್ಮರಣೆಯಲ್ಲಿ ದೇಶಭಕ್ತಿ ಗೀತೆಗಳ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಕ್ತವಾಗಿ ಮಾತನಾಡುವವರನ್ನು ದೇಶದ್ರೋಹ ಆರೋಪದಡಿ ಜೈಲಿಗೆ ಕಳುಹಿಸುವುದು ದೇಶಪ್ರೇಮವಲ್ಲ. ಅದರೊಳಗೆ ವಿಶ್ವಶಾಂತಿಯು ಅಡಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಗಾಮಿ ಸಂಸ್ಕೃತಿಯನ್ನು ತೊಡೆದು ಹಾಕುವ ಅಗತ್ಯವಿದೆ’ ಎಂದು ಹೇಳಿದರು.

‘1947ರಲ್ಲಿ ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಿದ್ದನ್ನೇ ನಾವು ಸ್ವಾತಂತ್ರ್ಯ ಎಂದು ಇಂದಿಗೂ ಸಂಭ್ರಮಿಸುತ್ತಿದ್ದೇವೆ. ನೈಜ ಸ್ವಾತಂತ್ರ್ಯವು ಜನರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಸಬಲೀಕರಣದಲ್ಲಿದೆ’ ಎಂದು ಪ್ರತಿಪಾದಿಸಿದರು.

ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಮಾತನಾಡಿ, ‘ದೇಶಪ್ರೇಮ, ದೇಶವಾದದ ಬಗ್ಗೆ ಗೊಂದಲವಿದೆ. ನೆಹರೂ ಅವರು ಸೇರಿದಂತೆ ಅನೇಕ ರಾಷ್ಟ್ರ ನಾಯಕರು ಸಂಕುಚಿತ ಭಾವದ ದೇಶಭಕ್ತಿ ಬದಲಿಗೆ, ತಮ್ಮ ದೇಶವನ್ನು ಪ್ರೀತಿಸಿ ಇತರ ದೇಶಗಳನ್ನು ಗೌರವಿಸುವ ದೇಶಪ್ರೇಮವನ್ನು ಅವರು ಒಪ್ಪಿಕೊಂಡಿದ್ದರು’ ಎಂದರು.

ಶಾಸಕ ಅರವಿಂದ ಬೆಲ್ಲದ, ‘ದೇಶಪ್ರೇಮ ಇಲ್ಲದವರಿಗೆ ಪ್ರತಿಯೊಂದರಲ್ಲೂ ಲೋಪ ಎದ್ದು ಕಾಣುತ್ತದೆ. ನಾನು, ಅಂದರೆ ದೇಶ, ದೇಶ ಅಂದರೆ ನಾನು ಅಂದುಕೊಂಡರೆ ಎಲ್ಲವೂ ಸುಂದರವಾಗಿ ಗೋಚರಿಸುತ್ತದೆ. ನಿಸ್ವಾರ್ಥ ಚಿಂತನೆಗಳು ಮಾತ್ರ ನೈಜ ದೇಶಪ್ರೇಮ ಹುಟ್ಟು ಹಾಕಬಲ್ಲವು’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ‘ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಪೂರ್ವಜರ ಹೋರಾಟ ಮತ್ತು ತ್ಯಾಗದ ಫಲವಾಗಿದೆ ಎಂಬುದನ್ನು ಯುವಜನ ಅರಿತುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ವಿದ್ವಾಂಸ ಈಶ್ವರ ಬಡಿಗೇರ ಹಾಗೂ ಲೋಕಶಿಕ್ಷಣ ಟ್ರಸ್ಟ್ ಸಿಇಒ ಎ.ಸಿ. ಗೋಪಾಲ ಮಾತನಾಡಿದರು. ಬಸವ ಶಾಂತಿ ಮಿಷನ್ ಟ್ರಸ್ಟ್‌ನ ಅಧ್ಯಕ್ಷ ಮಹಾದೇವ ಹೊರಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಬಸವ ಶಾಂತಿ ಮಿಷನ್ ಟ್ರಸ್ಟಿಗಳಾದ ಮಾರ್ಕಂಡೇಯ ದೊಡಮನಿ, ಮಹಾದೇವ ಬಾಗೇವಾಡಿ, ಪ್ರೇಮಕ್ಕ ಹೊರಟ್ಟಿ ಹಾಗೂ ಡಾ. ಪ್ರಿಯಾ ಸರದೇಸಾಯಿ ಇದ್ದರು.
**
ದೇಶಭಕ್ತಿ ಗೀತೆಗಳು ಶೋಷಣೆಯ ವಿರುದ್ಧ ಜನರನ್ನು ಎಚ್ಚರಿಸಬೇಕೇ ಹೊರತು, ಮಲಗಿಸಬಾರದು. ದೌರ್ಜನ್ಯದ ವಿರುದ್ಧ ಜನರು ಸಿಡಿದೇಳುವಂತೆ ಮಾಡುವ ಶಕ್ತಿ ಹಾಡುಗಳಿಗಿದೆ.
ಪ್ರೊ.ಕೆ.ಎಸ್. ಶರ್ಮಾ,  ಅಧ್ಯಕ್ಷ, ಡಾ. ದ.ರಾ. ಬೇಂದ್ರೆ ಸಂಶೋಧನಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT