ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನಾ ಶಕ್ತಿಯೇ ಆಧಾರ’

ಮೊದಲು ಶಾಸಕನಾದ ನೆನಪು ಹಂಚಿಕೊಂಡ ಸಂತೋಷ ಲಾಡ್
Last Updated 22 ಮಾರ್ಚ್ 2018, 10:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕ್ರಿಕೆಟ್, ವ್ಯಾಪಾರ, ರಾಜಕೀಯ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಸಂಘಟನಾ ಶಕ್ತಿಯಿಂದಾಗಿ ಉಳಿದ ಎರಡನ್ನು ಬಿಟ್ಟು ರಾಜಕೀಯದಲ್ಲಿ ಮುಂದುವರಿದೆ. ನನ್ನ ರಾಜಕೀಯ ಅಸ್ತಿತ್ವಕ್ಕೆ ಅದೇ ಆಧಾರವಾಗಿದೆ. ಆ ಕಾರಣಕ್ಕಾಗಿಯೇ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಶಾಸಕನೂ ಆದೆ’

ಹೀಗೆಂದು ಕಲಘಟಗಿ ಶಾಸಕ, ಸಚಿವ ಸಂತೋಷ ಲಾಡ್‌ 2004ರಲ್ಲಿ ಮೊದಲ ಬಾರಿಗೆ ಶಾಸಕನಾದ ತಮ್ಮ ನೆನಪುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ರಾಜಕೀಯದ ಆರಂಭ ಹೂವಿನ ಹಾಸಿಗೆ ಆಗಿರಲಿಲ್ಲ. 2001ರಲ್ಲಿ ಸಂಡೂರು ಪುರಸಭೆಯ ಉಪಚುನಾವಣೆಗೆ ಮೊದಲ ಬಾರಿ ಸ್ಪರ್ಧಿಸಿದ್ದೆ. ಮೊದಲ ಯತ್ನದಲ್ಲಿಯೇ ಸೋತೆ. 2002ರಲ್ಲಿ ನಡೆದ ಪುರಸಭೆಯ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಗೆ ಸ್ಪರ್ಧಿಸಿ, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ’ ಎಂದರು.

‘ದಿವಂಗತರಾದ ರಾಮಕೃಷ್ಣ ಹೆಗಡೆ ಹಾಗೂ ಎಂ.ಪಿ. ಪ್ರಕಾಶ ಅವರ ಅನುಯಾಯಿ ಆಗಿದ್ದೆ. ಅವರೊಂದಿಗೆ ಜನತಾ ಪರಿವಾರದಲ್ಲಿದ್ದೆ. ಅಲ್ಲಿಯೇ ನನ್ನ ರಾಜಕೀಯ ಜೀವನ ಆರಂಭವಾಯಿತು. ಕುಟುಂಬವು ವ್ಯಾಪಾರ ಹಿನ್ನೆಲೆ ಹೊಂದಿದ್ದರೂ ರಾಜಕೀಯದಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಹೆಗಡೆ ಹಾಗೂ ಪ್ರಕಾಶ ಅವರ ಮಾತುಗಳಿಂದ ಆಕರ್ಷಿತನಾಗಿ ರಾಜಕೀಯಕ್ಕೆ ಬಂದೆ’ ಎಂದು ನೆನಪಿಸಿಕೊಂಡರು.

‘ನನ್ನ ಸಂಘಟನಾ ಸಾಮರ್ಥ್ಯ ಗುರುತಿಸಿ 2004ರಲ್ಲಿ ಸಂಡೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಮೊದಲ ಅವಕಾಶದಲ್ಲಿಯೇ ಜನರೂ ಆಶೀರ್ವದಿಸಿದರು. ಹಾಗಾಗಿ, ವಿಧಾನಸಭೆ ಮೆಟ್ಟಿಲೇರಿದೆ’ ಎಂದರು.

‘ರಾಜ್ಯದಲ್ಲಿ ಲಕ್ಷಾಂತರ ಜನರು ರಾಜಕೀಯ ಮಾಡುತ್ತಾರೆ. ವಿಧಾನಸಭೆ ಸದಸ್ಯನಾಗಲು ಸಾವಿರಾರು ಜನರು ಚುನಾವಣೆಗೆ ಸ್ಪರ್ಧಿಸುತ್ತಾರೆ. ಅದರಲ್ಲಿ, 224 ಮಂದಿ ಮಾತ್ರ ಆಯ್ಕೆಯಾಗುತ್ತಾರೆ. ಅದರಲ್ಲಿ ನಾನೂ ಒಬ್ಬನಾಗಿದ್ದು, ಸಂತಸ ಉಂಟು ಮಾಡಿತು’ ಎಂದು ತಮಗಾಗಿದ್ದ ಖುಷಿಯನ್ನು ವ್ಯಕ್ತಪಡಿಸಿದರು.

‘ಆಡಳಿತದ ನಡೆಯುವ ರೀತಿಯ ಬೇರೆಯೇ ಇದೆ ಎನ್ನುವುದು ಶಾಸಕನಾದ ಮೇಲೆ ಗೊತ್ತಾಯಿತು. ಶಾಸಕರು ಪತ್ರ ನೀಡಿದರೆ ಎಲ್ಲ ಕೆಲಸಗಳು ಆಗುತ್ತವೆ ಎಂದು ಬಹಳಷ್ಟು ಜನರು ಅಂದುಕೊಂಡಿದ್ದಾರೆ. ರಾಜಕೀಯದ ಆರಂಭದಲ್ಲಿ ನಾನೂ ಹಾಗೆಯೇ ಅಂದುಕೊಂಡಿದ್ದೆ. ಪತ್ರ ನೀಡಿದರೆ ಸಾಲದು. ಮಂಜೂರು ಆಗುವವರೆಗೂ ಫಾಲೋ ಅಪ್‌ ಮಾಡುತ್ತಿರಬೇಕು’ ಎಂದರು.

‘ಹಿಂದಿನ ಚುನಾವಣೆಗಳಿಗೂ, ಈಗಿನ ಚುನಾವಣೆಗಳಿಗೂ ಬಹಳ ವ್ಯತ್ಯಾಸ ಇದೆ. ಆದರ್ಶಗಳು ಹಿಂದೆ ಹೋಗಿ, ಹಣ ಸ್ವಲ್ಪ ಪ್ರಮಾಣದಲ್ಲಿ ಮುಂಚೂಣಿಗೆ ಬಂದಿದೆ. ಆದರೆ, ಇದು ಮುಂದಿನ ದಿನಗಳಲ್ಲಿ ಇರುವುದಿಲ್ಲ. ಅಭಿವೃದ್ಧಿ ವಿಷಯ ಬಂದಾಗ ಜನರೂ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ನನ್ನ ಅನಿಸಿಕೆ’ ಎಂದು ಹೇಳಿದರು.

‘ಮೂಲ ಸೌಕರ್ಯಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಿರಲಿಲ್ಲ. ಪಕ್ಕದ ಊರುಗಳಿಗೆ ನಡೆದುಕೊಂಡೇ ಹೋಗಬೇಕಾಗುತ್ತಿತ್ತು. ಈಗ ಎಲ್ಲ ಗ್ರಾಮಗಳಲ್ಲಿ ಶಾಲೆಗಳಿವೆ. ಉಚಿತ ಶಿಕ್ಷಣ ಸಿಗುತ್ತದೆ. ಬಸ್ ಪಾಸ್‌ ಉಚಿತವಿದೆ. ತಂತ್ರಜ್ಞಾನವೂ ಬಹಳ ಮುಂದುವರಿದಿದೆ’ ಎಂದರು.

‘2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದಾಗ ಸಂಡೂರು ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಯಿತು. ಹಾಗಾಗಿ, ಕಲಘಟಗಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿದ್ದೇನೆ. ಈ ಬಾರಿಯೂ ಸ್ಪರ್ಧಿಸಲಿದ್ದೇನೆ’ ಎಂದು ಹೇಳಿದರು.

ಕಲಘಟಗಿ ಕ್ಷೇತ್ರಕ್ಕೆ 2004ರ ವರೆಗೆ 11 ಚುನಾವಣೆಗಳು ನಡೆದಿದ್ದವು. ಅದರಲ್ಲಿ ಮೂರು ಬಾರಿ ಮಾತ್ರ ಕಾಂಗ್ರೆಸ್‌ ಗೆದ್ದಿತ್ತು. 1972ರಲ್ಲಿ ಕಾಂಗ್ರೆಸ್‌ ಗೆದ್ದದ್ದು ಕೊನೆ. ನಂತರದ ಏಳು ಚುನಾವಣೆಗಳಲ್ಲಿ ಜನತಾ ದಳ ಹಾಗೂ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದವು. ಸಂಘಟನೆ ಬಲದಿಂದ ಬಹಳ ವರ್ಷಗಳಿಂದ ಕಾಂಗ್ರೆಸ್ ಗೆದ್ದಿರದ ಕ್ಷೇತ್ರದಲ್ಲಿ ಆಯ್ಕೆಯಾದೆ’ ಎಂದು ನೆನಪು ಹಂಚಿಕೊಂಡರು.

ಕ್ರಿಕೆಟ್‌ ಆಟಗಾರನಾಗಿದ್ದೆ
ಬಾಲ್ಯದಲ್ಲಿ ಕ್ರಿಕೆಟ್‌ ಹುಚ್ಚಿತ್ತು. ಒಳ್ಳೆಯ ಕ್ರಿಕೆಟ್ ಆಟಗಾರನಾಗಿದ್ದೆ. 1994ರಲ್ಲಿ ತುಮಕೂರು ವಲಯದ ಕ್ರಿಕೆಟ್‌ ತಂಡದ ನಾಯಕನಾಗಿ ಆಟವಾಗಿದ್ದೇನೆ ಎಂದು ಲಾಡ್‌ ನೆನಪುಗಳನ್ನು ಹಂಚಿಕೊಂಡರು.

ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್‌, ದೊಡ್ಡ ಗಣೇಶ್‌, ಡೇವಿಡ್ ಜಾನ್ಸನ್‌ ಮುಂತಾದವರೊಂದಿಗೆ ಆಟವಾಗಿದ್ದೇನೆ. ನಂತರದಲ್ಲಿ ರಾಜಕೀಯದತ್ತ ಒಲುವು ಹೆಚ್ಚಾಗಿದ್ದರಿಂದ ಕ್ರೀಡೆಯಿಂದ ದೂರ ಉಳಿದೆ’ ಎಂದರು.
**
ರಾಜಕೀಯ ಹಾದಿ

2001 ಸಂಡೂರು ಪುರಸಭೆಗೆ ಸ್ಪರ್ಧೆ– ಸೋಲು
2002 ಸಂಡೂರು ಪುರಸಭೆಗೆ ಸ್ಪರ್ಧೆ– ಗೆಲುವು
2004 ಸಂಡೂರು ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧೆ–ಗೆಲುವು
2008 ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ– ಗೆಲುವು
2013 ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ– ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT