ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

343 ಗ್ರಾಮಗಳಿಗೆ ‘ಜೀವ ಜಲ ಭಾಗ್ಯ’

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ; ಗ್ರಾಮೀಣಾಭಿವೃದ್ಧಿ ವಿವಿ ಕಟ್ಟಡಕ್ಕೂ ಅಡಿಗಲ್ಲು
Last Updated 22 ಮಾರ್ಚ್ 2018, 10:13 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ 343 ಜನವಸತಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ 22ರಂದು ಗದುಗಿನಲ್ಲಿ ಚಾಲನೆ ನೀಡಲಿದ್ದಾರೆ.

ದೇಶದ ದೊಡ್ಡ ಕುಡಿವ ನೀರಿನ ಯೋಜನೆಗಳಲ್ಲಿ ಒಂದಾದ ಇದನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ₹ 1,050 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಿದೆ. ತುಂಗಭದ್ರಾ ನದಿಯಿಂದ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲ್ಲೂಕಿನ 212 ಗ್ರಾಮಗಳಿಗೆ ಹಾಗೂ ಮುಂಡರಗಿ ಪಟ್ಟಣಕ್ಕೆ ನೀರು ಪೂರೈಕೆ ಆಗಲಿದೆ. ಮಲಪ್ರಭಾ ನದಿಯಿಂದ ನರಗುಂದ, ರೋಣ, ಗಜೇಂದ್ರಗಡ ತಾಲ್ಲೂಕುಗಳ 131 ಗ್ರಾಮಗಳಿಗೆ ನೀರು ಪೂರೈಕೆಯಾಗಲಿದೆ. ಡಿಬಿಒಟಿ (ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ) ಮಾದರಿಯಲ್ಲಿ ಎಲ್‍ಆ್ಯಂಡ್‌ಟಿ ಕಂಪೆನಿ ಹಾಗೂ ತಹಲ್ ಗ್ರೂಪ್ 30 ತಿಂಗಳಲ್ಲಿ ಈ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿವೆ.

ಹಮ್ಮಗಿ, ಜಾಲವಾಡಗಿ, ಸುಗನಹಳ್ಳಿ, ಚಿಕ್ಕವಡ್ಡಟ್ಟಿ, ಹಾರೊಗೇರಿ ಸೇರಿ 8 ಕಡೆ ನೀರೆತ್ತುವ ಘಟಕ ಮತ್ತು 12 ಕಡೆ ಜಲ ಸಂಗ್ರಹಾಗಾರ ನಿರ್ಮಿಸಲಾಗಿದೆ. 890ಕಿ.ಮೀ ಉದ್ದದ ಪೈಪ್‌ಲೈನ್‌ ಅಳವಡಿಕೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 2015ರ ನವೆಂಬರ್‌ನಲ್ಲಿ ಹೊಳೆಆಲೂರ ಗ್ರಾಮದಲ್ಲಿ ಈ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ್ದರು. ಇನ್ನೆರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಜಿಲ್ಲೆಯ ಎಲ್ಲ ಜನವಸತಿಗಳಿಗೆ ಕುಡಿವ ನೀರು ಕೊಡುವುದಾಗಿ ಅಂದು ಭರವಸೆ ನೀಡಿದ್ದರು. ಈಗ ಅವರು ಯೋಜನೆ ಉದ್ಘಾಟಿಸುತ್ತಿದ್ದಾರೆ.

ಬಹುಗ್ರಾಮ ಕುಡಿವ ನೀರಿನ ಯೋಜನೆ ಜತೆಗೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ₹ 100 ಕೋಟಿ ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣಕ್ಕೂ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಸಿ.ಎಂ ಸ್ವಾಗತಕ್ಕೆ ಸಜ್ಜು 
ದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಗದಗ–ಬೆಟಗೇರಿ ಅವಳಿ ನಗರ ಸಿಂಗಾರಗೊಂಡಿದೆ. ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಗಿದೆ. ಪ್ರಮುಖ ಬೀದಿ, ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ರಸ್ತೆ ವಿಭಜಕದ ಮಧ್ಯೆ ಗಿಡ ನೆಡುವ ಕಾರ್ಯ ಬುಧವಾರ ಸಂಜೆ ಭರದಿಂದ ನಡೆಯಿತು.

ನಗರದ ಅಲ್ಲಲ್ಲಿ ಅಲಂಕಾರಿಕ ದೀಪ ಅಳವಡಿಸಲಾಗಿದೆ. ಇಲ್ಲಿನ ವಿಡಿಎಸ್‌ಟಿ ಮೈದಾನದಲ್ಲಿ ಸಾರ್ವಜನಿಕರ ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿದೆ.

ಸಾರ್ವಜನಿಕ ಕಾರ್ಯಕ್ರಮ ನಡೆಯುವ ವೇದಿಕೆ ಪಕ್ಕದಲ್ಲೇ ‘ಸಂಕಲ್ಪದಿಂದ ಸಾಕಾರದೆಡೆಗೆ’ ಶೀರ್ಷಿಕೆಯಡಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಮಳಿಗೆಗಳನ್ನು ತೆರೆಯಲಾಗಿದೆ. ₹ 38 ಲಕ್ಷ ವೆಚ್ಚದಲ್ಲಿ 6 ದಿನಗಳಲ್ಲಿ ಈ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ.

12 ಗ್ರಾಮ ಪಂಚಾಯ್ತಿಗಳು, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಗದಗ–ಬೆಟಗೇರಿ ಅವಳಿ ನಗರದಲ್ಲಿನ ಅಭಿವೃದ್ಧಿ ಕಾರ್ಯ ಬಿಂಬಿಸುವ ಚಿತ್ರ ಒಳಗೊಂಡಿರುವ 28 ಮಾಹಿತಿ ಮಳಿಗೆಗಳನ್ನು ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT