ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದಿಕಶಾಹಿ ದಾಳಿ ತಡೆದಿದ್ದು ಜಾನಪದ

ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಮೊಗಳ್ಳಿ ಗಣೇಶ್‌ ಅಭಿಪ್ರಾಯ
Last Updated 22 ಮಾರ್ಚ್ 2018, 12:31 IST
ಅಕ್ಷರ ಗಾತ್ರ

ಮೈಸೂರು: ಅಪಾಯಕಾರಿಯಾಗುವ ಹಂತ ತಲುಪಿದ್ದ ಬ್ರಾಹ್ಮಣ್ಯ ಹಾಗೂ ವೈದಿಕಶಾಹಿ ದಾಳಿಯನ್ನು ವ್ಯವಸ್ಥಿತವಾಗಿ ಉಪಾಯದಿಂದ ನಿಯಂತ್ರಿಸಿದ್ದು ದೇಸಿ ಮಹಾಕಾವ್ಯ ಚಳವಳಿ ಎಂದು ಸಾಹಿತಿ ಡಾ.ಮೊಗಳ್ಳಿ ಗಣೇಶ್‌ ಅಭಿಪ್ರಾಯಪಟ್ಟರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಳವಳಿ ಜಾನಪದ’ ಕುರಿತು ಮಾತನಾಡಿದರು.

‘ಬೌದ್ಧ ಧರ್ಮವನ್ನು ನಾಶಪಡಿಸಿದಂತೆ ಜಾನಪದ ಚಳವಳಿ ನಾಶ ಮಾಡುವುದು ವೈದಿಕಶಾಹಿ ವ್ಯವಸ್ಥೆಗೆ ದೊಡ್ಡ ವಿಚಾರವೇನು ಆಗಿರಲಿಲ್ಲ. ಆದರೆ, ದಮನಕ್ಕೆ ಒಳಪಟ್ಟ ಸಮುದಾಯಗಳು ವೈದಿಕಶಾಹಿ ವ್ಯವಸ್ಥೆ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿಯಲಿಲ್ಲ. ಬದಲಾಗಿ ಆ ದಾಳಿಯನ್ನು ಉಪಾಯದಿಂದ ತಡೆಗಟ್ಟಿ ದೇಶದ ಸಂಸ್ಕೃತಿಯನ್ನು ಉಳಿಸಿವೆ’ ಎಂದು ವ್ಯಾಖ್ಯಾನಿಸಿದರು.

‘ಹಿಂದುತ್ವಕ್ಕೆ ಪರ್ಯಾಯ ಎಂಬಂತೆ ತಳಜಾತಿಗಳು ದೇಶಿ ಮಹಾಕಾವ್ಯ ಚಳವಳಿ ನಿರ್ಮಾಣ ಮಾಡಿದವು. ಮಂಟೆಸ್ವಾಮಿ ಕಾವ್ಯ, ಮೈಲಾರಲಿಂಗ ಕಾವ್ಯಗಳು ಅಂಥ ವಾತಾವರಣ ಸೃಷ್ಟಿಸಿದವು. ಬಳಿಕ ಅಂಬೇಡ್ಕರ್‌ ಚಳವಳಿ, ಗಾಂಧಿ ಚಳವಳಿ ಅದಕ್ಕೆ ಪುಷ್ಟಿ ನೀಡಿದವು. ಅಂಬೇಡ್ಕರ್‌ ಹಾಗೂ ಗಾಂಧೀಜಿ ಇಬ್ಬರೂ ಸಾಂಸ್ಕೃತಿಕ ನಾಯಕರು, ಜಾನಪದ ಚಿಂತಕರು. ಗಾಂಧಿ ಜಯಂತಿ ಎಂಬುದು ದೇಶದ ಜಾನಪದ ಹಬ್ಬ ಕೂಡ. ಅಂಬೇಡ್ಕರ್‌ ಅವರದ್ದು ಬಿಡುಗಡೆ ಜಾನಪದ’ ಎಂದು ವಿವರಿಸಿದರು.

ಚಳವಳಿ ಎಂಬುದು ಸಂಚಲನ, ಪ್ರತಿರೋಧ, ಪರ್ಯಾಯ ಸೃಷ್ಟಿ. ದಮನಕ್ಕೆ ಒಳಗಾದ ಸಮುದಾಯಗಳು ಚಳವಳಿ ಭಾಗವಾಗಿ ಕಾವ್ಯ ನಿರ್ಮಿಸಿದವು. ದಲಿತ ಸಂಘರ್ಷ ಚಳವಳಿ, ರೈತ ಚಳವಳಿ ಕೂಡ ಇದಕ್ಕೆ ಉದಾಹರಣೆ ಎಂದು ಹೇಳಿದರು.

ಚಳವಳಿಯಿಂದಾಗಿ ಜಾನಪದ ಮತ್ತಷ್ಟು ವಿಸ್ತಾರವಾಗಿದೆಯೇ ಹೊರತು ನಾಶವಾಗಿಲ್ಲ. ಈ ಕಾಲಕ್ಕೆ ಅಗತ್ಯವಿಲ್ಲ ಎನಿಸಿದರೆ ಅದನ್ನು ಉಳಿಸಲು ಸಾಧ್ಯವಿಲ್ಲ. ಹಾಗೆಯೇ ಒಪ್ಪಲಾಗದ ಸಂಗತಿಗಳೂ ಜಾನಪದದಲ್ಲಿವೆ. ಸತಿ ಸಹಗಮನ ಪದ್ಧತಿ, ದೇವದಾಸಿ ಪದ್ಧತಿಯನ್ನು ಒಪ್ಪಲಾಗದು ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು ಕೂಡ ಒಂದೊಂದು ರೀತಿಯಲ್ಲಿ ಜಾನಪದ ವ್ಯವಸ್ಥೆ ಹೊಂದಿವೆ. ಅವುಗಳ ನಿರ್ದಿಷ್ಟ ಉದ್ದೇಶ ರಾಜಕೀಯ ಜಾನಪದ. ಆದರೆ, ಇದರಿಂದ ದೇಶದ ಸಾಂಸ್ಕೃತಿಕ ವ್ಯವಸ್ಥೆ ಭ್ರಷ್ಟವಾಗುತ್ತಿದೆ. ಗಾಂಧೀಜಿಯನ್ನು ಕೊಂದವರು ಕೂಡ ತಮಗೊಂದು ಜಾನಪದವಿದೆ ಎನ್ನುವ ಅಪಾಯವಿದೆ. ಅದಕ್ಕೆ ಬೌದ್ಧಿಕವಾಗಿ ಪರ್ಯಾಯ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಾಶ್ಚಿಮಾತ್ಯ ಅಧ್ಯಯನ ಕ್ರಮ ಬಿಟ್ಟು ಪರಂಪರೆ, ಚರಿತ್ರೆಯನ್ನು ಓದಬೇಕು. ಜಾನಪದ ಚೌಕಟ್ಟಿನಲ್ಲಿ ದೇಸಿ ಆಲೋಚನೆಗಳು ಬಹಳ ಮುಖ್ಯ. ನಮ್ಮ ಊರನ್ನು ನಮ್ಮ ಪೂರ್ವಿಕರ ಅರಿವಿನಿಂದ ತಿಳಿದುಕೊಳ್ಳಬೇಕೇ ಹೊರತೂ ಪಾಶ್ಚಿಮಾತ್ಯರಿಂದ ಅಲ್ಲ ಎಂದರು.

ಸಂಸ್ಥೆಯ ನಿರ್ದೇಶಕಿ ಪ್ರೊ.ಪ್ರೀತಿ ಶ್ರೀಮಂಧರ್‌ ಕುಮಾರ್‌, ಜಾನಪದ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು ಇತರರು ಇದ್ದರು.
**
ಈಗ ಡಿಜಿಟಲ್‌ ಜಾನಪದ ಎಂಬುದು ಸೃಷ್ಟಿಯಾಗಿದೆ. ಇದೊಂದು ವಿದ್ಯುನ್ಮಾನ ಕ್ರಾಂತಿ. ಈ ಮೂಲಕ ಜಾನಪದ ವೇಗವನ್ನು ಹೆಚ್ಚಿಸಿದೆ.
 –ಡಾ.ಮೊಗಳ್ಳಿ ಗಣೇಶ್‌, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT