ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಂದೂರು ಸೇತುವೆ ನಿರ್ಮಾಣ ನಾಟಕವೇ?

ವಿಸ್ತೃತ ಯೋಜನಾ ವರದಿ ನೀಡದ ಹೆದ್ದಾರಿ ಇಲಾಖೆಯ ಅಧಿಕಾರಿಗಳು l ಅನುಮಾನ ಹುಟ್ಟಿಸಿರುವ ನಡೆಗಳು
Last Updated 22 ಮಾರ್ಚ್ 2018, 12:54 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಅಂಬಾರಗೋಡ್ಲು–ಕಳಸವಳ್ಳಿ ನಡುವೆ ₹ 600 ಕೋಟಿ ವೆಚ್ಚದಲ್ಲಿ ಸೇತುವೆ ಕಾಮಗಾರಿಗೆ ಕಳೆದ ಫೆ.19ರಂದು ಕೇಂದ್ರ ಸರ್ಕಾರದ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇದರಿಂದಾಗಿ ಹಲವು ದಶಕಗಳ ಸೇತುವೆ ಕಾಮಗಾರಿ ಕನಸು ನನಸಾಗುವ ಭರವಸೆ ತಾಲ್ಲೂಕಿನ ಜನರಲ್ಲಿ ಮೂಡಿತ್ತು. ಆದರೆ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಸೇತುವೆ ಶಂಕುಸ್ಥಾಪನೆ ಸಮಾರಂಭ ರಾಜಕೀಯ ಗಿಮಿಕ್‌ ಇರಬಹುದೇ ಎನ್ನುವ ಅನುಮಾನ ಕಾಡುತ್ತಿದೆ.

2009ನೇ ಸಾಲಿನಲ್ಲೇ ರಾಜ್ಯ ಸರ್ಕಾರ ಮೊದಲ ಬಾರಿಗೆ ಸೇತುವೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ₹ 164 ಕೋಟಿ ಮೀಸಲಿಟ್ಟಿತ್ತು. 2011ನೇ ಸಾಲಿನಲ್ಲಿ ಸೇತುವೆಗೆ ಶಂಕುಸ್ಥಾಪನೆ ಕೂಡ ನೆರವೇರಿತ್ತು. ಆದರೆ ನಂತರ ಸೇತುವೆ ನಿರ್ಮಾಣ ಕಾಮಗಾರಿ ಆರಂಭಕ್ಕೆ ಅಗತ್ಯವಾದ ಹಣವನ್ನು ಸರ್ಕಾರ ಬಿಡುಗಡೆ ಮಾಡಲೇ ಇಲ್ಲ. ಹೀಗಾಗಿ ಸೇತುವೆ ಕಾಮಗಾರಿ ವಿಷಯ ನನೆಗುದಿಗೆ ಬಿದ್ದಿತ್ತು.

ಸಾಗರ ನಗರದ ಶಿವಪ್ಪನಾಯಕ ವೃತ್ತದಿಂದ ಆವಿನಹಳ್ಳಿ, ಹುಲಿದೇವರಬನ ಮಾರ್ಗವಾಗಿ ಶರಾವತಿ ಹಿನ್ನೀರನ್ನು ದಾಟಿ ಕೊಲ್ಲೂರು ಸಮೀಪದ ಮರಕುಟುಕದವರೆಗೆ 80 ಕಿ.ಮೀ. ಹೆದ್ದಾರಿ ನಿರ್ಮಿಸಲು 2016ರ ಆಗಸ್ಟ್‌ನಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸುವಂತೆ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿತ್ತು. ಆದರೆ ಈವರೆಗೂ ಯಾವುದೇ ಕಂಪನಿ ಡಿಪಿಆರ್‌ ಸಲ್ಲಿಸಲು ಮುಂದೆ ಬಂದಿಲ್ಲ.

ಈ ನಡುವೆ ಕಳೆದ ಫೆ.19ರಂದು ಸೇತುವೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿದ ನಂತರ ಹೆದ್ದಾರಿ ಇಲಾಖೆಯಿಂದ ಮತ್ತೊಮ್ಮೆ ಡಿಪಿಆರ್‌ಗಾಗಿ ಪ್ರಕಟಣೆ ಹೊರಡಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಧ್ಯಮದವರಿಗೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

ಡಿಪಿಆರ್‌ನ ಪ್ರತಿ ಕೇಳಿದ ಮಾಧ್ಯಮದವರಿಗೆ ಸಮಾರಂಭದ ದಿನ ಅದನ್ನು ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಸಮಾರಂಭದ ದಿನ ಡಿಪಿಆರ್‌ನ ಪ್ರತಿಯನ್ನು ಇ–ಮೇಲ್‌ ಮಾಡಲಾಗುವುದು ಎಂಬ ಉತ್ತರ ಅಧಿಕಾರಿಗಳಿಂದ ಸಿಕ್ಕಿತ್ತು.

ಸಮಾರಂಭ ಮುಗಿದ ನಂತರ ಮತ್ತೆ ಹಲವು ಬಾರಿ ಮಾಧ್ಯಮದವರು ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಸಿಗಂದೂರು ಸೇತುವೆಗೆ ಸಂಬಂಧಪಟ್ಟ ಸೇತುವೆಯ ಡಿಪಿಆರ್‌ನ ಪ್ರತಿ ಪಡೆಯಲು ಸಾಧ್ಯವಾಗಿಲ್ಲ. ಸಮಾರಂಭದ ಸಂದರ್ಭದಲ್ಲಿ ಸ್ಥಳೀಯ ರಾಜಕೀಯ ಮುಖಂಡರು ಫ್ಲೆಕ್ಸ್‌ಗಳಲ್ಲಿ
ಪ್ರಚಾರ ಪಡೆದಂತೆ ಸೇತುವೆ ಕಾಮಗಾರಿಗಾಗಿ ಅಗತ್ಯವಿರುವ ₹ 600 ಕೋಟಿ ಹಣ ಬಿಡುಗಡೆಯಾಗಿದೆ ಎನ್ನುವುದು ಬೋಗಸ್‌ ಎನ್ನುವುದೀಗ ಸ್ಪಷ್ಟವಾಗಿದೆ.

ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಪ್ರಕ್ರಿಯೆಗಳನ್ನು ಪೂರೈಸದೆ, ಹಣಕಾಸಿನ ಮಂಜೂರಾತಿಯನ್ನೂ ಪಡೆಯದೆ ಕೇವಲ ರಾಜಕೀಯ ಲಾಭ ಪಡೆಯಲು ಸಮಾರಂಭ ನಡೆಸಿದ್ದಾರೆ ಎಂಬ ಅನುಮಾನಕ್ಕೆ ಈಗ ಪುಷ್ಟಿ ದೊರಕಿದೆ.

ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲಿ ಸಿಗಂದೂರು ಸೇತುವೆ ನಿರ್ಮಾಣದ ವಿಷಯಕ್ಕಿಂತ ಶಿವಮೊಗ್ಗ–ತುಮಕೂರು ಹೆದ್ದಾರಿ ಸೇರಿ ಹಲವು ಹೆದ್ದಾರಿಗಳ ನಿರ್ಮಾಣದ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾತನಾಡಿದ್ದರು. ಹೆದ್ದಾರಿ ಇಲಾಖೆ ಮೂಲಗಳ ಪ್ರಕಾರ ಆ ದಿನದ ಸಮಾರಂಭ ವಾಸ್ತವವಾಗಿ ಶಿವಮೊಗ್ಗ ನಗರದಲ್ಲಿ ನಿಗದಿಯಾಗಿತ್ತು. ಆದರೆ ನಂತರ ರಾಜಕೀಯ ಕಾರಣಗಳಿಗಾಗಿ ಅದು ತುಮರಿಗೆ ಸ್ಥಳಾಂತರಗೊಂಡಿತ್ತು.

ತುಮರಿಯಲ್ಲಿ ಕೇಂದ್ರ ಸಚಿವರು ಹೆಲಿಕಾಪ್ಟರ್‌ನಲ್ಲಿ ಬಂದು ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರಿಂದ ಆ ಭಾಗದ ಸಂತ್ರಸ್ತರು ಸೇತುವೆ ಕೆಲಸ ನಿಜಕ್ಕೂ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಇದೆ.
**
ಪತ್ರಿಕೆ ತುಣುಕುಗಳ ಬಳಸಿ ಓಲೈಕೆ

‘ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸ್ಥಳೀಯ ಮಾಧ್ಯಮದವರಿಗೆ ಕರೆ ಮಾಡಿ, ಅಂದಿನ ಸಮಾರಂಭದ ಪತ್ರಿಕಾ ವರದಿಯ ತುಣಕುಗಳನ್ನು ತರಿಸಿಕೊಂಡಿದ್ದಾರೆ. ಈ ವರದಿಗಳನ್ನು ಹೆದ್ದಾರಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತೋರಿಸಿ, ಕೇಂದ್ರ ಸಚಿವರೇ ಶಂಕುಸ್ಥಾಪನೆ ಮಾಡಿರುವುದರಿಂದ ಹೇಗಾದರೂ ಮಾಡಿ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಹಣ ಮಂಜೂರು ಮಾಡುವಂತೆ ಓಲೈಸಲು ಪ್ರಯತ್ನ ನಡೆಯುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೇ ಸ್ಪಷ್ಟಪಡಿಸಿದ್ದಾರೆ.
**
‌ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿಗೆ ಕಳೆದ ಮಾರ್ಚ್‌ 6ರಂದು ಕೇಂದ್ರದ ಉಪ ಹಣಕಾಸು ಸಮಿತಿ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಕೂಡ ನಡೆಯಲಿದೆ.
–ಪ್ರಸನ್ನ ಕೆರೆಕೈ. ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT