ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ಕೊಡವಿ ಪರಿಶುದ್ಧಗೊಂಡಿದೆ ಕಲ್ಕೆರೆ ಕೆರೆ

ಬಿಬಿಎಂಪಿಯಿಂದ ಜಲಮೂಲಕ್ಕೆ ಕಾಯಕಲ್ಪ * 2 ವರ್ಷಗಳಿಂದ ಕಾಮಗಾರಿ
Last Updated 22 ಮಾರ್ಚ್ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ಒಡಲು ಸೇರಿದ್ದ ಕೊಳಚೆ ನೀರನ್ನು ಕೊಡವಿ, ಶುದ್ಧನೀರನ್ನು ಶೇಖರಿಸಿಕೊಂಡಿದೆ ಬೆಂಗಳೂರು ಪೂರ್ವ ತಾಲ್ಲೂಕಿನ ಕಲ್ಕೆರೆ ಕೆರೆ. ಎರಡು ವರ್ಷಗಳವರೆಗೆ ಪರೀಕ್ಷೆಗೆ ಒಡ್ಡಿದ್ದ ಜಲಮೂಲಕ್ಕೆ ಮತ್ತೆ ಕಲುಷಿತ ನೀರು ಸೇರದಂತೆ ನೋಡಿಕೊಳ್ಳಿ ಎಂಬುದು ಅದರ ಅಂತರಂಗದ ಕೋರಿಕೆ.

ಮಲಿನಗೊಂಡಿದ್ದ ಜಲಮೂಲಕ್ಕೆ ಕಾಯಕಲ್ಪ ನೀಡುವ ಉದ್ದೇಶದಿಂದ ಬಿಬಿಎಂಪಿ ಕೆರೆ ವಿಭಾಗವು ಎರಡು ವರ್ಷಗಳ ಹಿಂದೆ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಂಡಿತ್ತು.

ಜಲಮೂಲಕ್ಕೆ ಹೊರಮಾವು, ಕಲ್ಕೆರೆ ಹಾಗೂ ಹೆಬ್ಬಾಳ, ನಾಗವಾರ ಕಡೆಗಳಿಂದ ಕೊಳಚೆ ನೀರು ಸೇರುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಹೊರಮಾವು ಭಾಗದಲ್ಲಿ 2 ಕೋಟಿ ಲೀಟರ್‌ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕವನ್ನು (ಎಸ್‌ಟಿಪಿ) ಜಲಮಂಡಳಿಯು ಸ್ಥಾಪಿಸಿದೆ. ಇಲ್ಲಿ ಪ್ರತಿದಿನ 2 ಕೋಟಿ ಲೀಟರ್‌ ತ್ಯಾಜ್ಯ ನೀರು ಶುದ್ಧೀಕರಿಸಿ ಕೆರೆಗೆ ಬಿಡಲಾಗುತ್ತಿದೆ.

ಹೆಬ್ಬಾಳ, ನಾಗವಾರ ಕಡೆಯಿಂದ ಬರುವ ರಾಜಕಾಲುವೆಯು ಕೆರೆಗೆ ಸಂಪರ್ಕ ಪಡೆಯುತ್ತದೆ. ತ್ಯಾಜ್ಯ ನೀರು ಒಡಲು ಸೇರದಂತೆ ತಡೆಯುವ ಉದ್ದೇಶದಿಂದ ಸುಮಾರು 3.5 ಕಿ.ಮೀ. ಉದ್ದದ ಪ್ರತ್ಯೇಕ ಕಾಂಕ್ರೀಟ್‌ ಚರಂಡಿಯನ್ನು ನಿರ್ಮಿಸಲಾಗಿದೆ. ಮಳೆ ನೀರು ಮಾತ್ರ ಕೆರೆಗೆ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಕಾಲುವೆಯ ನೀರು ಕಲ್ಕೆರೆ–ರಾಂಪುರ ಕೆರೆಗೆ ಸೇರುತ್ತದೆ.

ಕೆರೆಯ ಹೂಳನ್ನು ತೆರವುಗೊಳಿಸಲಾಗಿದೆ. ಸುಮಾರು 25 ಎಕರೆ ವಿಸ್ತೀರ್ಣದಲ್ಲಿ ಜೌಗು ಪ್ರದೇಶ ನಿರ್ಮಿಸಲಾಗಿದೆ. ರಾಸಾಯನಿಕಗಳಾದ ನೈಟ್ರೇಟ್‌ ಮತ್ತು ಫಾಸ್ಟೇಟ್‌ಗಳನ್ನು ಹೀರಿಕೊಳ್ಳುವ ಸಸಿಗಳನ್ನು ಇಲ್ಲಿ ಬೆಳೆಸಲಾಗಿದೆ. ಮಳೆ ನೀರು ಇಲ್ಲಿ ಸಂಗ್ರಹಗೊಂಡು ಸ್ವಾಭಾವಿಕವಾಗಿ ಶುದ್ಧೀಕರಣಗೊಳ್ಳುತ್ತದೆ. ಅಲ್ಲಿಂದ ನೀರು ಕೆರೆಯ ಒಡಲು ಸೇರುತ್ತದೆ.

ಜಲಮೂಲದ ಮಧ್ಯ ಭಾಗದಲ್ಲಿ 4 ಎಕರೆ ಹಾಗೂ ಅಂಚಿನಲ್ಲಿ 2 ಎಕರೆ ವಿಸ್ತೀರ್ಣದ ಎರಡು ನಡುಗಡ್ಡೆಗಳನ್ನು ನಿರ್ಮಿಸಲಾಗಿದೆ. ದೋಣಿ ವಿಹಾರಕ್ಕಾಗಿ ‘ಬೋಟ್‌ ಜಟ್ಟಿ’ಯನ್ನು ಕಟ್ಟಿದ್ದು, ಇದರಿಂದ ಪ್ರವಾಸಿಗರು ದೋಣಿಯಲ್ಲಿ ಹತ್ತಲು ಹಾಗೂ ಇಳಿಯಲು ಅನುಕೂಲವಾಗುತ್ತದೆ.

ವಾಯುವಿಹಾರಕ್ಕಾಗಿ 6.75 ಕಿ.ಮೀ ಉದ್ದ ಹಾಗೂ 5 ಮೀಟರ್‌ ಅಗಲದ ನಡಿಗೆ ಪಥವಿದೆ. ಕೆರೆ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಕಲ್ಯಾಣಿಯ ವ್ಯವಸ್ಥೆ ಮಾಡಲಾಗಿದೆ.

ಪಕ್ಷಿಗಳ ಕಲರವ: ಕೆರೆಯು ಪಕ್ಷಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಅವುಗಳ ಕಲರವ ಎಲ್ಲರನ್ನೂ ಸೆಳೆಯುತ್ತಿದೆ. ಬಣ್ಣದ ಕೊಕ್ಕರೆ, ಹೆಜ್ಜಾರ್ಲೆ, ನೀರುಕಾಗೆ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ಬರುತ್ತಿವೆ.

‘ಗಲೀಜು ನೀರು ಸೇರಿ ಕೆರೆ ಕೆಟ್ಟಿತ್ತು. ದುರ್ವಾಸನೆ ಬೀರುತ್ತಿದ್ದರಿಂದ ನೆಮ್ಮದಿಯಾಗಿ ವಾಸ ಮಾಡಲು ಸಾಧ್ಯವಾಗಿರಲಿಲ್ಲ. ಸೊಳ್ಳೆಗಳ ಕಾಟದಿಂದ ಕಾಯಿಲೆಗಳು ಬರುತ್ತಿದ್ದವು. ಈಗ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗಿದೆ. ಇದೇ ರೀತಿ ಉಳಿದ ಕೆರೆಗಳನ್ನು ಅಭಿವೃದ್ಧಿ ಮಾಡಬೇಕು’ ಎಂದು ವಾಯುವಿಹಾರಿ ರಮೇಶ್‌ ಒತ್ತಾಯಿಸಿದರು.

12 ಸಾವಿರ ಗಿಡ ನೆಡಲಾಗಿದೆ

ಜಲಮೂಲದ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ 12 ಸಾವಿರ ಗಿಡಗಳನ್ನು ನೆಡಲಾಗಿದೆ. ಇನ್ನೂ 3 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.

ಹೊಂಗೆ, ಬೇವು, ಅರಳಿ, ಆಲ, ನೇರಳೆ ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಗಿಡಗಳನ್ನೇ ನೆಡಲಾಗಿದೆ. ನಡುಗಡ್ಡೆಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಇದರಿಂದ ಪಕ್ಷಿಗಳಿಗೆ ಆಹಾರ ಸಿಕ್ಕಂತಾಗುತ್ತದೆ.

‘ದೋಣಿ ವಿಹಾರಕ್ಕಾಗಿ ಮನವಿ’

‘ಕಲ್ಕೆರೆ, ಕೆಂಪಾಂಬುಧಿ ಕೆರೆಗಳಲ್ಲಿ ದೋಣಿ ವಿಹಾರ ನಡೆಸುವಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ) ಮನವಿ ಮಾಡಿದ್ದೇವೆ. ಆದರೆ, ನಿಗಮದಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ನಿಗಮವು ಒಪ್ಪಿಗೆ ಸೂಚಿಸಿದ ಬಳಿಕ ಈ ಪ್ರಸ್ತಾವವನ್ನು ಕೌನ್ಸಿಲ್‌ ಅನುಮೋದನೆಗಾಗಿ ಕಳುಹಿಸುತ್ತೇವೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಗನ್ನಾಥ ರಾವ್‌ ತಿಳಿಸಿದರು.

ಅಂಕಿ–ಅಂಶ

186 ಎಕರೆ 38 ಗುಂಟೆ

ಕಲ್ಕೆರೆ ಕೆರೆಯ ಒಟ್ಟು ವಿಸ್ತೀರ್ಣ


6.70 ಕಿ.ಮೀ.

ಕೆರೆಯ ಹೊರ ಭಾಗದ ಉದ್ದ


₹21.32 ಕೋಟಿ

ಜಲಮೂಲದ ಅಭಿವೃದ್ಧಿ ವೆಚ್ಚ


45.4 ಕೋಟಿ ಲೀಟರ್‌

ಕಾಮಗಾರಿ ಕೈಗೊಳ್ಳುವ ಮುನ್ನ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ


121 ಕೋಟಿ ಲೀಟರ್‌

ಈಗ ನೀರಿನ ಸಂಗ್ರಹ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT