ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ರೋಬಾಲ್ ಪಂದ್ಯಾವಳಿಯಲ್ಲಿ ಮಿಂಚಿದ ಮಕ್ಕಳು

ಸರ್ಕಾರಿ ಶಾಲೆಯ ಹುಡುಗರು ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗಿ
Last Updated 23 ಮಾರ್ಚ್ 2018, 9:21 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಕೆಲಸೂರು ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳು ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಈ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಡಿ.ನಾಗೇಂದ್ರ ಮತ್ತು 7ನೇ ತರಗತಿಯ ನಾಗರಾಜು ಥ್ರೋ ಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ವಿಜೇತರಾಗಿ ಉತ್ತಮ ಕ್ರೀಡಾಪಟುಗಳು ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.

ಕಳೆದ ಬಾರಿಯು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಈ ಬಾರಿ ಮೈಸೂರು ಜಿಲ್ಲೆಯ ನಂಜನಗೂಡಿನ ಸಿಟಿಜೆನ್ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಹರಿಯಾಣ, ಪಂಜಾಬ್, ಮುಂಬೈ ವಿರುದ್ಧ ಆಡಿ ವಿಜೇತರಾಗಿದ್ದಾರೆ. ಈ ಇಬ್ಬರು ಮಕ್ಕಳು ಇದೇ ಶಾಲೆಯಲ್ಲಿ ಒಂದನೇ ತರಗತಿಯಿಂದ ವ್ಯಾಸಂಗ ಮಾಡುತ್ತಿದ್ದಾರೆ.

ತರಗತಿ ಅವಧಿಯ ನಂತರ ಕ್ರೀಡಾ ಚಟುವಟಿಕೆಗಳನ್ನು ಅಭ್ಯಾಸ ಮಾಡುವಾಗ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಲೆಥಿಸ್ಯಾ ಚಿನ್ನಪ್ಪ ಅವರು ಮಕ್ಕಳ ಪ್ರತಿಭೆಗಳನ್ನು ನೋಡಿ ಅವರಿಗೆ ಹೆಚ್ಚು ಅಭ್ಯಾಸ ಮಾಡುವಂತೆ ಪ್ರೇರೇಪಿದ್ದಾರೆ. ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ನೆರವನ್ನು ಪಡೆದುಕೊಂಡು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ.

ಬಳಿಕ ಹೋಬಳಿ, ತಾಲ್ಲೂಕು, ಜಿಲ್ಲಾ ಮತ್ತು ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡುವಾಗ ಇವರ ಪ್ರತಿಭೆಗಳನ್ನು ಗುರುತಿಸಿ ಇಬ್ಬರು ಮಕ್ಕಳನ್ನು ಆಯ್ಕೆ ಮಾಡಿದರು. ಡಿ.ನಾಗೇಂದ್ರ ಎಂಬ ವಿದ್ಯಾರ್ಥಿ ರಾಷ್ಟ್ರಮಟ್ಟದ ಫೈನಲ್ ಪಂದ್ಯಾವಳಿಯಲ್ಲಿ ಉತ್ತಮ ಆಟಗಾರ ಎಂಬ ಪ್ರಶಸ್ತಿ ಪಡೆದುಕೊಂಡಿದ್ದಾನೆ.

ಶಾಲೆಯಲ್ಲಿ ಕ್ರೀಡೆಗೆ ಬೇಕಾಗುವಷ್ಠು ಸೌಲಭ್ಯಗಳಿಲ್ಲದಿದ್ದರೂ ಈ ಮಕ್ಕಳು ಈ ಮಟ್ಟಕ್ಕೆ ಸಾಧನೆ ಮಾಡಿರುವುದು ಗಮನಾರ್ಹ. ಅಭ್ಯಾಸ ಮಾಡುವಾಗ ಥ್ರೋಬಾಲ್‍ಗಳು ಒಡೆದು ಹೋಗುತ್ತದೆ. ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕಿಯೇ ಸ್ವಂತ ಹಣದಲ್ಲಿ ಬಾಲ್‍ ಕೊಂಡು ಅಭ್ಯಾಸ ಮಾಡಿಸಿದ ಉದಾಹರಣೆಗಳು ಹೆಚ್ಚಾಗಿದೆ. ನಮಗೆ ಥ್ರೋಬಾಲ್ ಆಡಬೇಕು ಎಂಬ ಆಸೆ ಇತ್ತು ಆದರೆ ಹೇಗೆ ಆಡಬೇಕು ಎಂಬ
ಕೌಶಲಗಳನ್ನು ನಮ್ಮ ಶಿಕ್ಷಕರಿಂದ ಕಲಿತುಕೊಂಡೆವು.
ಅವರ ಪ್ರೋತ್ಸಾಹದಿಂದ
ಈ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಮ್ಮ ತರಬೇತುದಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ ಡಿ.ನಾಗೇಂದ್ರ ಮತ್ತು ನಾಗರಾಜು.

ಇವರ ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಗೌರವಿಸಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಅಭಿನಂಧಿಸಲಾಗಿದೆ. ಆದರೆ, ತಾಲ್ಲೂಕಿನ ವತಿಯಿಂದ ಮಕ್ಕಳ ಪ್ರತಿಭೆಗೆ ಸೂಕ್ತವಾದ ಗೌರವ ಸಿಗಲಿಲ್ಲ ಎಂಬುದು ಶಿಕ್ಷಕರ ನೋವು. ಇನ್ನೂ ಹೆಚ್ಚಿನ ಸೌಲಭ್ಯಗಳು ಮತ್ತು ಪರಿಕರಗಳು ಮಕ್ಕಳಿಗೆ ಸಿಕ್ಕರೆ ಇಂತಹ ಅನೇಕ ಮಕ್ಕಳು ತಾಲ್ಲೂಕಿನಲ್ಲಿ ಉದಯವಾಗುತ್ತಾರೆ ಎಂದು ಶಿಕ್ಷಕಿ ಲೆಥಿಸ್ಯಾ ಚಿನ್ನಪ್ಪ ಅವರ ಅಭಿಪ್ರಾಯ.

ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT