ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೋಮೆಟ್ರಿಕ್‌ಗಾಗಿ ಜನರ ಪರದಾಟ

ಚಿಕ್ಕನಲ್ಲೂರು: ಪಡಿತರ ಪಡೆಯಲು ಇಂಟರ್‌ನೆಟ್‌ ಅಡ್ಡಿ
Last Updated 23 ಮಾರ್ಚ್ 2018, 9:53 IST
ಅಕ್ಷರ ಗಾತ್ರ

ಅಜ್ಜಂಪುರ: ಗ್ರಾಮದಲ್ಲಿಯೇ ಪಡಿತರ ವಿತರಿಸುವ ನ್ಯಾಯ ಬೆಲೆ ಅಂಗಡಿ ಯಿದ್ದರೂ, ಇಂಟರ್‌ನೆಟ್‌ ಸಂಪರ್ಕ ಕೊರತೆಯಿಂದ ಬಯೋ ಮೆಟ್ರಿಕ್‌ಗಾಗಿ ಪಡಿತರ ಚೀಟಿದಾರರು ಪರವೂರಿಗೆ ಅಲೆಯುವಂತಹ ಸ್ಥಿತಿ ನಿರ್ಮಾಣ ಆಗಿರುವುದರಿಂದ ಪಟ್ಟಣ ಸಮೀಪ ಚಿಕ್ಕನಲ್ಲೂರು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದಲ್ಲಿನ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಆಗುತ್ತದೆ. ಆದರೆ ಇಂಟರ್‌ನೆಟ್‌ ಸಂಪರ್ಕಕ್ಕೆ ದೊರೆಯುತ್ತಿಲ್ಲ. ಹೀಗಾಗಿ ಬಯೋಮೆಟ್ರಿಕ್ ನೀಡಲು ಪಡಿತರ ಚೀಟಿದಾರರು ಸುಮಾರು 2 ಕಿಮೀ ದೂರದ ಗಿರಿಯಾಪುರ ಗ್ರಾಮಕ್ಕೆ ಅನಿವಾರ್ಯವಾಗಿ ತೆರಳಬೇಕಿದೆ. ಇದರ ಜತೆಗೆ ಚಿಕ್ಕನಲ್ಲೂರು-ಗಿರಿಯಾಪುರ ಗ್ರಾಮ ನಡುವೆ ಬಸ್ ವ್ಯವಸ್ಥೆಯೂ ಕಡಿಮೆ ಇರೋದರಿಂದ ಸಂಚಾರಕ್ಕೂ ತೊಂದರೆ ಆಗಿದೆ.

‘ಇನ್ನು ಗಿರಿಯಾಪುರದಲ್ಲೂ ಒಮ್ಮೊಮ್ಮೆ ಕೈಕೊಡುವ ಇಂಟರ್‌ನೆಟ್‌ ಸಂಪರ್ಕದಿಂದ ಬಯೋಮೆಟ್ರಿಕ್‌ಗಾಗಿ ಗ್ರಾಹಕರು ದಿನವಿಡೀ ಕಾದು ಕುಳಿತುಕೊಂಡಿರುವ ಅನುಭವವೂ ಆಗಿದೆ.

ಅನೇಕ ಬಾರಿ ರಾತ್ರಿ ಹತ್ತರವರೆಗೂ ಕಾದು ಹಿಂತಿರುಗಿರುವ ಉದಾಹರಣೆಯೂ ಉಂಟು. ಇಂತಹ ವೇಳೆ ಮಹಿಳಾ ಪಡಿತರ ಚೀಟಿದಾರರು ಮನೆಗೆ ಹಿಂತಿರುಗಲು ತೀವ್ರ ಸಮಸ್ಯೆ ಎದುರಾದ ಉದಾಹರಣೆಗಳಿವೆ’ ಎನ್ನುತ್ತಾರೆ ಗ್ರಾಮದ ಓಂಕಾರ್.

‘ನಾವು ಬಯೋಮೆಟ್ರಿಕ್ ವ್ಯವಸ್ಥೆ ಯನ್ನು ವಿರೋಧಿಸುತ್ತಿಲ್ಲ. ಆದರೆ ಆ ವ್ಯವಸ್ಥೆ ಕಾರ್ಯನಿರ್ವಹಿಸುವಂತೆ ಉತ್ತಮ ಇಂಟರ್‌ನೆಟ್‌ ಸಂಪರ್ಕ ವನ್ನು ಗ್ರಾಮದಲ್ಲಿಯೇ ನೀಡಲು ಇಲಾಖೆ ಕ್ರಮ ಕೈಗೊಳ್ಳಬೇಕು. ಕೇವಲ ಮೊಬೈಲ್‌ನಲ್ಲಿ ಇಂಟರ್‌ನೆಟ್ ಸಂಪರ್ಕ ದೊರೆಯುವುದನ್ನೇ ಆಧಾರವಾಗಿಟ್ಟುಕೊಂಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಯೋಮೆಟ್ರಿಕ್ ವ್ಯವಸ್ಥೆಯ ಸಂಪರ್ಕ ವನ್ನು ಪರೀಕ್ಷಿಸಿಲ್ಲ.

ಸಂಬಂಧಪಟ್ಟವರು ಗ್ರಾಮದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿ ಕೊಡಬೇಕು, ಇಲ್ಲವಾದರೆ ಬಯೋಮೆಟ್ರಿಕ್‌ಗೆ ಪರ್ಯಾಯ ಮಾರ್ಗ ಅನುಸರಿಸಬೇಕು’ ಎಂದು ಗ್ರಾಮದ ಮಹೇಶ್ ಒತ್ತಾಯಿಸಿದ್ದಾರೆ.

‘ಪರವೂರಿಗೆ ಹೋಗಿ ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯೋ ಸವಾಲಿನ ಕೆಲಸವೂ ಬೇಡ-ಪಡಿತರವೂ ಬೇಡ ಎಂದು ಸುಮ್ಮನಿರೋಣ ಅಂದುಕೊಳ್ಳುತ್ತೇವೆ. ಆದರೆ ನಿರಂತರವಾಗಿ ಮೂರು ತಿಂಗಳ ಕಾಲ ಪಡಿತರ ಪಡೆಯದಿದ್ದರೆ ಪಡಿತರಚೀಟಿಯೇ ರದ್ದುಗೊಳ್ಳುತ್ತದೆ ಎಂಬ ಆತಂಕ ಕಾಡುತ್ತದೆ. ಸಂಬಂಧಪಟ್ಟ ಇಲಾಖೆಯವರು ನಮ್ಮ ಸಂಕಟ ದೂರ ಮಾಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಹಿರಿಯ ನಾಗರಿಕರಾದ ಕೆಂಚಮ್ಮ ಅವರು ಮನವಿ ಮಾಡಿಕೊಂಡಿದ್ದಾರೆ.

ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಸರ್ಕಾರ ಪಡಿತರ ಚೀಟಿ ಮೂಲಕ ಅನ್ನಭಾಗ್ಯ ಯೋಜನೆ ಮೂಲಕ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ.

ಇಂತಹ ಸೌಲಭ್ಯ ಪಡೆಯುವ ಗ್ರಾಮೀಣ ಭಾಗದ ಜನರಿಗೆ ಬಯೋ ಮೆಟ್ರಿಕ್ ಅಡ್ಡಿಯಾ ಗಿರುವುದು ದುರದೃಷ್ಟಕರ. ಸರ್ಕಾರಿ ಸೌಲಭ್ಯ-ಸೌಕರ್ಯ ಜನರಿಗೆ ತಲುಪುವ ವ್ಯವಸ್ಥೆ ಕಲ್ಪಿಸುವ ತಮ್ಮ ಹೊಣೆಯನ್ನು ಇಲಾಖೆಗಳು ಮತ್ತು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT