ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ ವಿರುದ್ಧ ಸಂತ ಸಮಾವೇಶ

ಹೊನವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಆರೋಪ
Last Updated 23 ಮಾರ್ಚ್ 2018, 12:59 IST
ಅಕ್ಷರ ಗಾತ್ರ

ವಿಜಯಪುರ: ‘ಲಿಂಗಾಯತ ಧರ್ಮವನ್ನು ವಿರೋಧಿಸಲು ಬಸವ ಜನ್ಮ ಭೂಮಿಯಲ್ಲಿ ಆರ್.ಎಸ್.ಎಸ್ ಹಾಗೂ ಬಿಜೆಪಿ ಸಂತ ಸಮಾವೇಶದ ಹೆಸರಿನಲ್ಲಿ ಬಸವಣ್ಣನನ್ನು ವಿರೋಧಿಸುವ ಕಾರ್ಯಕ್ಕೆ ಮುಂದಾಗಿರುವುದು ಹೇಯ ಕೃತ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.

ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಲಿಂಗಾಯತ ಪ್ರತ್ಯೇಕ ಧರ್ಮವನ್ನು ಆರ್.ಎಸ್.ಎಸ್ ಹಾಗೂ ಬಿಜೆಪಿ ಮುಂಚಿನಿಂದಲೂ ವಿರೋಧಿಸಿಕೊಂಡು ಬಂದಿವೆ’ ಎಂದರು.

‘12ನೇ ಶತಮಾನದಲ್ಲಿ ಶರಣರ ಕಗ್ಗೊಲೆಯಿಂದ, ಕಲ್ಯಾಣ ಕ್ರಾಂತಿಯ ನಂತರ ಚದುರಿ ಹೋಗಿದ್ದ ವಿವಿಧ ಕಾಯಕ ಜೀವಿಗಳ ಲಿಂಗಾಯತ ಧರ್ಮಕ್ಕೆ ಇದೀಗ ಕರ್ನಾಟಕ ಸರ್ಕಾರ ಮಾನ್ಯತೆ ನೀಡುವ ನಿರ್ಧಾರ ಕೈಗೊಂಡಿದ್ದು, ಸಾಂವಿಧಾನಿಕ ಅನುಮೋದನೆಗೆ ಪ್ರಯತ್ನಿಸುತ್ತಿದೆ. ಕೇಂದ್ರದಿಂದ ಮಾನ್ಯತೆಯ ಹೊಸ್ತಿಲಲ್ಲಿರುವಾಗ ಈ ಹಿಂದಿನಂತೆ ಅಡ್ಡಗಾಲು ಹಾಕುವ ಕಾರ್ಯವನ್ನು ಆರ್.ಎಸ್.ಎಸ್ ಹಾಗೂ ಬಿಜೆಪಿಯವರು ಮುಂದುವರಿಸಿದ್ದಾರೆ. ಬಹುಷಃ ಲಿಂಗಾಯತರನ್ನು ಎಂದಿನಂತೆ ಕೇವಲ ತಮ್ಮ ಕೈಕೆಳಗೆ ದುಡಿಯುವ ವರ್ಗವಾಗಿ ಇಟ್ಟುಕೊಳ್ಳಲು ಆ ಸಂಘಟನೆಗಳು ಬಯಸಿವೆ. ಲಿಂಗಾಯತರು ಸ್ವತಂತ್ರಗೊಂಡರೆ ದಕ್ಷಿಣ ಭಾರತದಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಇದೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ’ ಎಂದು ದೂರಿದರು.

‘ಅಥಣಿಯ ಅರವಿಂದರಾಯ ಕುಲಕರ್ಣಿ ಎನ್ನುವ ಆರ್.ಎಸ್.ಎಸ್ ಮುಖಂಡ ವಿಜಯಪುರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಭೆ ಕರೆದು, ನಿಮ್ಮ ಮತಕ್ಷೇತ್ರದಲ್ಲಿರುವ ಎಲ್ಲಾ ಮಠಾಧೀಶರನ್ನು ಆಸೆ, ಆಮಿಷ ಒಡ್ಡಿ ಕರೆತನ್ನಿ, ಅವರ ತಲೆಯಲ್ಲಿ ಭಾರತ ಸಂಸ್ಕೃತಿ, ದೇಶಪ್ರೇಮ ಭಿತ್ತಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಹಿಂದುತ್ವದ ಹೆಸರಿನಲ್ಲಿ ಮನೆ- ಮನೆಗೆ ಪ್ರಚಾರಕ್ಕೆ ಬಳಸಿಕೊಳ್ಳೋಣ ಎಂದು ವಿಜಯಪುರದಲ್ಲಿ ಗುಟ್ಟಾಗಿ ಸಭೆ ನಡೆಸಿರುವುದು, ಬಸವಣ್ಣನ ನೆಲದಲ್ಲಿ ಈ ಸಂಘಟನೆಗಳು ಬಸವಾದಿ ಎಲ್ಲ ಶಿವಶರಣರಿಗೆ ಮಾಡುತ್ತಿರುವ ದ್ರೋಹ’ ಎಂದು ಕಿಡಿಕಾರಿದರು.

‘ಮಹಾರಾಷ್ಟ್ರದ ಜಲಾಶಯಗಳಿಂದ ಬೇಸಿಗೆಯಲ್ಲಿ ನೀರು ಹರಿಸುವ ಕುರಿತು ಚರ್ಚೆಗಳು ನಡೆದಿದ್ದು, ಈ ವಾರದಲ್ಲಿ ಸಕಾರಾತ್ಮಕ ಫಲಿತಾಂಶ ಎದುರು ನೋಡುತ್ತಿದ್ದೇನೆ. ಮಾತುಕತೆ ಪೂರ್ಣಗೊಂಡು ಒಪ್ಪಂದವಾದರೆ, ಮುಂದಿನ ದಿನಗಳಲ್ಲಿ ಬೇಸಿಗೆಯಲ್ಲಿ ಎಂದಿಗೂ ನೀರಿನ ಕೊರತೆಯಾಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಥಣಿ ಮೋಟಗಿಮಠದ ಪ್ರಭು ಚೆನ್ನಬಸವ ಸ್ವಾಮೀಜಿ, ಭಗೀರಥ ಪೀಠದ ಶಿವಾನಂದ ಸ್ವಾಮೀಜಿ, ದಾಶ್ಯಾಳ ಸ್ವಾಮೀಜಿ, ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಎಡವೆ, ತಮ್ಮಣ್ಣ ಹಂಗರಗಿ, ಸೋಮನಾಥ ಬಾಗಲಕೋಟ, ಮುತ್ತಪ್ಪ ಶಿವಣ್ಣವರ, ಶರಣು ಆಲೂರ ಉಪಸ್ಥಿತರಿದ್ದರು.
**
‘ಬಸವ ಜನ್ಮಭೂಮಿಯಲ್ಲಿಯೇ ಶರಣ ಸಮಾವೇಶ’

ಸಂತ ಸಮಾವೇಶದ ಹೆಸರಿನಲ್ಲಿ ಬಸವಣ್ಣನನ್ನು, ಲಿಂಗಾಯತ ಧರ್ಮವನ್ನು ವಿರೋಧಿಸಲು ಮಠಾಧೀಶರನ್ನು ಆಹ್ವಾನಿಸಲಾಗುತ್ತಿದ್ದು, ಎಷ್ಟು ಜನ ಮಠಾಧೀಶರು ಭಾಗವಹಿಸುತ್ತಾರೋ ನೊಡೋಣ. ಅದಕ್ಕಿಂತಲೂ 10 ಪಟ್ಟು ಹೆಚ್ಚು ಮಠಾಧೀಶರನ್ನು ಸೇರಿಸಿ, ಸಂತ ಸಮಾವೇಶದ ಜಾಗದಲ್ಲಿಯೇ ಶರಣ ಸಮಾವೇಶ ಮಾಡುತ್ತೇವೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT