ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

Last Updated 24 ಮಾರ್ಚ್ 2018, 6:43 IST
ಅಕ್ಷರ ಗಾತ್ರ

ಬೆಳಗಾವಿ: ಬಾಂಡ್‌ ಪೇಪರ್‌ಗಳ ಆಧಾರದ ಮೇಲೆ ನಿರ್ಮಿಸಲಾಗಿರುವ ಮನೆಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರು ಬಿಜೆಪಿ ಮುಖಂಡ ಅಭಯ ಪಾಟೀಲ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಶಹಾಪುರದ ಶಿವಾಜಿ ಉದ್ಯಾನದಿಂದ ಕಪಿಲೇಶ್ವರ ಮೂಲಕ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಕೃಷಿ ಜಮೀನುಗಳಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ತೆರವುಗೊಳಿಸದಂತೆ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಅವರಿಗೆ ಮನವಿ ಪತ್ರ ನೀಡಿದರು.

ಈ ಕ್ಷೇತ್ರದಲ್ಲಿ 6,000ಕ್ಕೂ ಹೆಚ್ಚು ಮನೆಗಳು ಇಂತಹ ಜಾಗದಲ್ಲಿ ನಿರ್ಮಾಣವಾಗಿವೆ. ಬಹುಪಾಲು ಬಡವರು, ಮಧ್ಯಮ ವರ್ಗದ ಜನರು, ಕೂಲಿಕಾರರು, ಹಿಂದುಳಿದ ವರ್ಗದವರು, ದಲಿತ ಕುಟುಂಬಗಳು ವಾಸವಾಗಿವೆ. ಮಹಾನಗರ ಪಾಲಿಕೆಗೆ ತೆರಿಗೆ ಕಟ್ಟುತ್ತಿದ್ದಾರೆ. ಹೆಸ್ಕಾಂಗೆ ವಿದ್ಯುತ್‌ ಬಿಲ್‌ ಕಟ್ಟುತ್ತಿದ್ದಾರೆ. ಇಂತಹವರ ಮನೆಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.

ಬಾಂಡ್‌ ಪೇಪರ್‌ಗಳ ಆಧಾರದ ಮೇಲೆ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಇಲ್ಲಿ ವಾಸವಾಗಿರುವವರನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಗೇಶ ಪವಾರ, ಶಶಿಕಾಂತ ಪಾಟೀಲ, ಗಜಾನನ ಗುಂಜೇರಿ, ಚಿದಾನಂದ ಮೂಡಲಗಿ, ನಿತಿನ್‌ ಜಾಧವ, ಸಂದೀಪ ನರಸಗೌಡ, ಮೈಲಾರ ಅನ್ವೇಕರ ಭಾಗವಹಿಸಿದ್ದರು.

ವಾಗ್ವಾದ: ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ‘ಬಾಂಡ್‌ ಪೇಪರ್‌ಗಳ ಮೇಲೆ ನಿರ್ಮಾಣವಾಗಿರುವ ಮನೆಗಳನ್ನು ತೆರವು ಮಾಡಲು ಮುಂದಾಗಬೇಡಿ. ಬಡವರು ಬೀದಿಗೆ ಬರುವಂತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ತಾಳ್ಮೆ ಕಳೆದುಕೊಂಡ ಮೇಘಣ್ಣವರ ಅವರು, ‘ನಾನು ಆ ರೀತಿ ಹೇಳಿಲ್ಲ. ಈ ವಿಷಯವು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅಕ್ರಮ ಮನೆ ನಿರ್ಮಾಣವನ್ನು ನೋಡಿಕೊಳ್ಳಲು ಮಹಾನಗರ ಪಾಲಿಕೆ, ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ ಅವರಿದ್ದಾರೆ’ ಎಂದು ಹೇಳಿದರು.

‘ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಲಾಗುತ್ತಿದೆ. ಇಂತಹ ಗಾಳಿಸುದ್ದಿಗೆ ಯಾರೂ ಕಿವಿಗೊಡಬಾರದು’ ಎಂದರು.

ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT