ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನ್ಲಾಕ್‌ ಐಸಿಯು ಸಾಮರ್ಥ್ಯ ಹೆಚ್ಚಿಸಿ

ಮಾಸಿಕ ಕೆಡಿಪಿ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯ
Last Updated 24 ಮಾರ್ಚ್ 2018, 11:41 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಐಸಿಯು ತುರ್ತು ಚಿಕಿತ್ಸಾ ಘಟಕದಲ್ಲಿ ಬೇಡಿಕೆಗೆ ತಕ್ಕಂತೆ ಹಾಸಿಗೆ ಲಭ್ಯವಿಲ್ಲದೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಐಸಿಯು ಹಾಸಿಗೆ ಸಾಮರ್ಥ್ಯ ಹೆಚ್ಚಿಸುವಂತೆ ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಯಿತು.

ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು.

ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವೆನ್ಲಾಕ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲು ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳ ಕೊರತೆಯಿದೆ. ಈ ಘಟಕ ಸದಾ ರೋಗಿಗಳಿಂದ ತುಂಬಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಐಸಿಯುನಲ್ಲಿ ದಾಖಲಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವೆನ್ಲಾಕ್ ಅಧಿಕಾರಿಗಳು, ಆಸ್ಪತ್ರೆಯಲ್ಲಿ ಈ ಹಿಂದೆ 7 ಐಸಿಯು ಬೆಡ್‌ಗಳಿದ್ದು, ಅದನ್ನು 12 ಕ್ಕೆ ಹೆಚ್ಚಿಸಲಾಗಿದೆ. ಆದರೂ ಹೊರರಾಜ್ಯಗಳಿಂದ, ಹೊರ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯ ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ಬೇರೆಡೆ ತುರ್ತು ಸ್ಥಿತಿಯಲ್ಲಿರುವ ರೋಗಿಗಳನ್ನೂ ಇಲ್ಲಿಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿ ಸ್ಥಳದ ಕೊರತೆ ಇದೆ. ಆದರೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ಮೀನಾಕ್ಷಿ ಶಾಂತಿಗೋಡು ಮಾತನಾಡಿ, ರೋಗಿಗಳ ಹಿತದೃಷ್ಟಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಘಟಕದ ಸಾಮರ್ಥ್ಯವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿನ ಸಿಬ್ಬಂದಿ, ರೋಗಿಗಳ ಜತೆ ಉತ್ತಮ ರೀತಿಯಲ್ಲಿ ವರ್ತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ನಿತ್ಯ ಒದಗಿಸುವ ಆಹಾರ ಪಟ್ಟಿಯನ್ನು ಎಲ್ಲ ಶಾಲೆಗಳಲ್ಲಿ ಹಾಕುವಂತೆ ಮೀನಾಕ್ಷಿ ಶಾಂತಿಗೋಡು ಸೂಚನೆ ನೀಡಿದರು.

ಕೊರಗ ಸಮುದಾಯದ ಕಾಲೋನಿಗೆ ಚರಂಡಿ ವ್ಯವಸ್ಥೆ, ಬಾವಿ ದುರಸ್ತಿ, ಸಮುದಾಯ ಭವನದ ಆವರಣ ಗೋಡೆಯ ಕಾಮಗಾರಿಯನ್ನು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿನ ಹಿಂದುಳಿದ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟಂತೆ 5 ಹಾಸ್ಟೆಲ್‌ಗಳಿಗೆ ಒಬ್ಬರೇ ವಾರ್ಡನ್ ಜವಾಬ್ದಾರಿ ವಹಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಇಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ವಿ. ನಾಯಕ್ ಮಾತನಾಡಿ, ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ವಿಳಂಬವಿಲ್ಲದೇ ತಲುಪಿಸಬೇಕು. ಮುಂದಿನ ವರ್ಷದ ಕ್ರಿಯಾ ಯೋಜನೆಯನ್ನು ಕೂಡಲೇ ಆರಂಭಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಯೋಜನಾ ನಿರ್ದೇಶಕ ಲೋಕೇಶ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT