ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಣ್ಣನ ಹುಚ್ಚು ಸಾಹಸ

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅದೊಂದು ಊರು. ಅಲ್ಲೊಬ್ಬ ಮಲ್ಲಣ್ಣ ಎಂಬ ಬಡಗಿ ಇದ್ದ. ಅವನು ಬಡಗಿ ಕೆಲಸ ಮಾಡುತ್ತಾ ತನ್ನ ಹೆಂಡತಿ ಮಲ್ಲಮ್ಮ ಹಾಗೂ ಚಿಕ್ಕ ಮಗ ಮಾದೇಶನನ್ನು ಸಾಕುತ್ತಾ ಕಾಲ ಕಳೆಯುತ್ತಿದ್ದ. ಎಷ್ಟು ದುಡಿದರೂ ಬಡತನದ ಬೇಗೆಯಲ್ಲಿ ಬೇಯುವುದು ಮಾತ್ರ ತಪ್ಪಿರಲಿಲ್ಲ. ಮಲ್ಲಣ್ಣ ತಾನು ಎಂದಾದರೊಂದು ದಿನ ಎರಡು ಹೊತ್ತು ಊಟ ಮಾಡುತ್ತಾ ನೆಮ್ಮದಿಯಿಂದ ಬದುಕುತ್ತೇನೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದ.

ಒಂದು ದಿನ ಮಲ್ಲಣ್ಣ ತನ್ನ ಗುಡಿಸಲಿನಲ್ಲಿ ದೊಡ್ಡ ರಾದ್ಧಾಂತ ಮಾಡುತ್ತಾ ದೆವ್ವ ಬಡಿದವನಂತೆ ಆವೇಶಭರಿತನಾಗಿ ಮಗ ಮಾದೇಶನ ಹಣೆಗೆ ಕುಂಕುಮ ಹಚ್ಚಿ, ‘ಹೂಂ... ಉದುರಲಿ ಬಾಯಿಂದ ಎರಡು ಸಾವಿರ ರೂಪಾಯಿ ನೋಟು’ ಎನ್ನುತ್ತಾ ಬೆನ್ನಿಗೆ ಹೊಡೆಯುತ್ತಿದ್ದ. ಹೆಂಡತಿ ಮಲ್ಲಮ್ಮ ಮುಸುಮುಸು ಅಳುತ್ತಿದ್ದಳು. ಅಕ್ಕಪಕ್ಕದ ಬೀದಿಯ ಜನ ಅಲ್ಲಿ ಸೇರಿದ್ದರೂ, ಯಾರೂ ಮಲ್ಲಣ್ಣನನ್ನು ನಿಯಂತ್ರಿಸುವ ಸಾಹಸಕ್ಕೆ ಇಳಿಯಲಿಲ್ಲ.

ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ದುಡಿಯುತ್ತಿದ್ದ ಪಾಪಯ್ಯ ಠಾಣೆಯ ಕೆಲಸ ಮುಗಿಸಿಕೊಂಡು ಅದೇ ಬೀದಿಯಲ್ಲಿದ್ದ ತನ್ನ ಮನೆಯತ್ತ ನಡೆದಿದ್ದ. ಆತನ ಕಣ್ಣಿಗೆ ಗುಂಪೊಂದು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಪರಿಚಯಸ್ಥ ಮಲ್ಲಣ್ಣ!

ಗುಂಪನ್ನು ಭೇದಿಸಿಕೊಂಡು ಕಾನ್‌ಸ್ಟೆಬಲ್‌ ಪಾಪಯ್ಯ ಮಲ್ಲಣ್ಣನ ಮುಂದೆ ಹೋಗಿ ನಿಂತು, ‘ಮಲ್ಲಣ್ಣ, ಹೊಡೆಯುವುದನ್ನು ನಿಲ್ಲಿಸು. ಅದು ನಮ್ಮ ಕೆಲಸ. ಏನಾಗಿದೆ ನಿನಗೆ? ಯಾವ ಕೆಟ್ಟ ಕೆಲಸ ಮಾಡಿದ್ದಾನೆ ಅಂತ ಮಾದೇಶನಿಗೆ ಹೀಗೆ ಹಣ್ಣುಗಾಯಿ-ನೀರುಗಾಯಿ ಮಾಡುತ್ತಿದ್ದೀಯೆ?’ ಎಂದು ಏರು ದನಿಯಲ್ಲಿ ಗದರಿಸಿದ.

‘ಇವನು ನನ್ನ ಮಗನಾ. ಇಂತಹ ಮಗ ಇದ್ದರೆಷ್ಟು ಬಿಟ್ಟರೆಷ್ಟು’ ಏದುಸಿರು ಬಿಡುತ್ತಾ ನುಡಿದ ಮಲ್ಲಣ್ಣ.

‘ನಿನ್ನ ಮಗನಿಂದ ಏನಾಗಬೇಕಿತ್ತು ನಿನಗೆ ಮಲ್ಲಣ್ಣ?’ ಆಶ್ಚರ್ಯದಿಂದ ಪ್ರಶ್ನಿಸಿದ ಪಾಪಯ್ಯ.

‘ನೋಟು... ನೋಟು... ಎರಡು ಸಾವಿರ ರೂಪಾಯಿ ನೋಟು’ ಬಡಬಡಿಸಿದ ಮಲ್ಲಣ್ಣ.

‘ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಗಿಡ-ಮರಗಳು ಹೂವು-ಹಣ್ಣು-ಕಾಯಿ ಕೊಡುತ್ತವೆ. ಪ್ರಕೃತಿ ದೇವಿ ಗಾಳಿ, ಬೆಳಕು, ನೀರು, ನೆರಳು ನೀಡುತ್ತಾಳೆ. ಪ್ರಕೃತಿ ನಿಯಮ ಹೀಗಿರುವಾಗ, ಈ ಪುಟ್ಟ ಪೋರ ನೋಟು ಹೇಗೆ ತಾನೆ ಕೊಟ್ಟಾನು? ಜಾದೂ ಮಾಡಿ ತಕ್ಷಣ ನೋಟು ಕೊಡಲು ಇವನೇನು ಜಾದೂಗಾರನೇ?’ ಎಂದು ಕೇಳಿದ ಪಾಪಯ್ಯ.

‘ಅಣ್ಣಾ... ನಾವು ಹೇಳಿ ಕೇಳಿ ಬಡವರು. ಯಾರಲ್ಲಾದರೂ ಸ್ವಲ್ಪ ಕೈಸಾಲ ಕೇಳಿದರೆ ಯಾರಿಂದಲೂ ಹತ್ತು ರೂಪಾಯಿ ಸಹ ಹುಟ್ಟಲ್ಲ. ಅಂಥದ್ದರಲ್ಲಿ ಬಾಯಿಂದ ನೋಟು ಉದುರಲಿ ಅಂತ ಮಗನಿಗೆ ಒಂದೇ ಸಮನೆ ಬಡಿಯುತ್ತಿದ್ದಾನೆ ನನ್ನ ಈ ಕಟುಕ ಗಂಡ’ ಕಣ್ಣೊರೆಸಿಕೊಳ್ಳುತ್ತಾ ಉಸುರಿದಳು ಮಲ್ಲಮ್ಮ.

‘ಮಕ್ಕಳ ಬಾಯಿಂದ ನೋಟುಗಳು ಉದುರುವ ಹಾಗಿದ್ದಿದ್ದರೆ ಯಾವ ತಂದೆ-ತಾಯಿಯೂ ಕಷ್ಟಪಡುವ ಪ್ರಮೇಯವೇ ಬರುತ್ತಿರಲಿಲ್ಲ, ತಿಳೀತಾ ಮಂಕುದಿಣ್ಣೆ?’ ಎಂದ ಪಾಪಯ್ಯ.

‘ಮತ್ತೆ ಆ ಮಂತ್ರವಾದಿ ಹಾಗಂತ ಹೇಳಿದ’ ತೊದಲಿದ ಮಲ್ಲಣ್ಣ.

‘ಏನಂತ ಹೇಳಿದ?’ ಏರುದನಿಯಲ್ಲಿ ಪ್ರಶ್ನಿಸಿದ ಪಾಪಯ್ಯ.

ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ನಡೆದ ಘಟನೆಯನ್ನು ವಿವರಿಸಿದ ಮಲ್ಲಣ್ಣ - ‘ಸಮುದ್ರದ ನೀರು ಸಿಹಿಯಾಗುತ್ತೆ. ಗಂಡು ಹೆಣ್ಣಾಗುತ್ತೆ. ಕಣ್ಣಿನಿಂದ ಹರಳು, ಹಣೆಯಿಂದ ಗಾಜಿನ ಚೂರುಗಳು ಉದುರುತ್ತವೆ. ಇಂತಹ ಅದ್ಭುತ ಪವಾಡಗಳು ನಮ್ಮ ದೇಶದ ಉದ್ದಗಲ ದಿನ ಬೆಳಗಾದರೆ ನಡೆಯುತ್ತಲೇ ಇರುತ್ತವೆ. ನೀನು ಕೈ ಕಟ್ಟಿಕೊಂಡು ಸುಮ್ಮನೆ ಕೂರಬೇಡ. ನಾನು ಹೇಳಿಕೊಡುವ ಮಂತ್ರ ಜಪಿಸು. ಈ ಕುಂಕುಮವನ್ನು ನಿನ್ನ ಮಗನ ಹಣೆಗೆ ಹಚ್ಚು. ಈ ಮಂತ್ರಿಸಿದ ದೊಣ್ಣೆಯಿಂದ ನಿನ್ನ ಮಗನ ಬೆನ್ನಿಗೆ ಬಾರಿಸುತ್ತಾ, ‘ಹೂಂ... ಉದುರಲಿ ಬಾಯಿಂದ ಎರಡು ಸಾವಿರ ರೂಪಾಯಿ ನೋಟು’ ಅನ್ನುತ್ತಿರು. ಒಂದೊಂದೇ ನೋಟು ನಿನ್ನ ಮಗನ ಬಾಯಿಂದ ಉದುರತೊಡಗುತ್ತವೆ. ನೀನು ಅವುಗಳನ್ನು ಬಾಚಿಕೊಳ್ಳುತ್ತಿರು. ಕ್ಷಣಾರ್ಧದಲ್ಲಿ ಶ್ರೀಮಂತನಾಗುವೆ ಅಂತ ಆ ಮಂತ್ರವಾದಿ ಹೇಳಿದ. ನಾನು ಅವನ ಮಾತನ್ನು ನಂಬಿದೆ.’

‘ಯಜಮಾನನ ಕೈ-ಕಾಲು ಹಿಡಿದು ಒಂದು ಸಾವಿರ ರೂಪಾಯಿ ಸಾಲ ತಂದೆ. ಆ ಮಂತ್ರವಾದಿ ಕೇಳಿದ್ದ ಸಾವಿರ ರೂಪಾಯಿ ಅವನಿಗೆ ಕೊಟ್ಟೆ. ಆ ಹಣವನ್ನು ಪಡೆದ ಮಂತ್ರವಾದಿ ನನ್ನ ಕೈಗೆ ಈ ಮಂತ್ರದ ದೊಣ್ಣೆ ಕೊಟ್ಟ’ ಎಂದು ಹೇಳಿ ತನ್ನ ಕೈಲಿದ್ದ ದೊಣ್ಣೆಯನ್ನು ಪಾಪಯ್ಯನಿಗೆ ತೋರಿಸಿದ.

‘ಮಂತ್ರವಾದಿ ಹೇಳಿದ, ನೀನು ನಂಬಿದೆ. ನಿನ್ನ ಮಗನ ಬಾಯಿಂದ ನೋಟು ಉದುರುವ ಬದಲು ರಕ್ತ ಸುರಿಯುತ್ತಿದೆ. ಮಗನಿಗೆ ಚಿಕಿತ್ಸೆ ಕೊಡಿಸು. ನಿನ್ನ ಮಂಕುಬುದ್ಧಿಗೆ ಏನು ಹೇಳಬೇಕೋ ಒಂದೂ ತೋಚುತ್ತಿಲ್ಲ’ ಎಂದ ಪಾಪಯ್ಯ ತನ್ನ ಹಣೆ ಚಚ್ಚಿಕೊಂಡ. ಅಲ್ಲದೆ, ತನ್ನ ಜೇಬಿನಿಂದ ನೂರು ರೂಪಾಯಿ ಹೊರತೆಗೆದು ಮಲ್ಲಣ್ಣನ ಕೈಗಿತ್ತ.

ಪಾಪಯ್ಯ ಕೊಟ್ಟ ನೋಟನ್ನು, ಮಗನ ಬಾಯಿಂದ ಸುರಿಯುತ್ತಿದ್ದ ರಕ್ತವನ್ನು, ತನ್ನ ಕೈಯಲ್ಲಿದ್ದ ದೊಣ್ಣೆಯನ್ನು ನೋಡುತ್ತಾ ಬಾಯಿ ಬಿಟ್ಟುಕೊಂಡು ನಿಂತೇ ಇದ್ದ ಮಲ್ಲಣ್ಣ.

ಸಮಾಜದಲ್ಲಿ ಮಲ್ಲಣ್ಣನಂತಹ ದಡ್ಡರು, ಮುಗ್ಧರು, ಮೂಢರು ಹಾಗೂ ಮಂಕರು ಎಚ್ಚೆತ್ತುಕೊಳ್ಳುವವರೆಗೆ ಮಂಕುಬೂದಿ ಎರಚುವ ಢೋಂಗಿ ಮಂತ್ರವಾದಿಗಳು ವಾಮ ಮಾರ್ಗದಿಂದ ಹಣ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬದುಕಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT