ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಹುದ್ದೆ ವ್ಯಾಖ್ಯೆ ಸ್ಪಷ್ಟಪಡಿಸಿ

Last Updated 26 ಮಾರ್ಚ್ 2018, 20:34 IST
ಅಕ್ಷರ ಗಾತ್ರ

ಲಾಭದಾಯಕ ಹುದ್ದೆ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) 20 ಶಾಸಕರನ್ನು ಈ ವರ್ಷ ಜನವರಿ ತಿಂಗಳಲ್ಲಿ ಅನರ್ಹಗೊಳಿಸಿದ್ದ ಚುನಾವಣಾ ಆಯೋಗದ ಕ್ರಮವನ್ನು ದೆಹಲಿ ಹೈಕೋರ್ಟ್ ತಳ್ಳಿಹಾಕಿದೆ. ಚುನಾವಣಾ ಆಯೋಗದ ಪ್ರತಿಷ್ಠೆಗೆ ಕುಂದು ತರುವಂತಹ ಬೆಳವಣಿಗೆ ಇದು. ವಿವಿಧ ಸಚಿವಾಲಯಗಳ ಸಂಸದೀಯ ಕಾರ್ಯದರ್ಶಿಗಳಾಗಿ ಈ 20 ಶಾಸಕರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 2015ರ ಮಾರ್ಚ್ ತಿಂಗಳಲ್ಲಿ ನೇಮಕ ಮಾಡಿದ್ದರು. ಜನಪ್ರತಿನಿಧಿಗಳಾಗಿ ಅಧಿಕಾರ ಹೊಂದಿದ್ದೂ ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಗೊಂಡ ಈ ಶಾಸಕರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿತ್ತು. ಆದರೆ ಹೀಗೆ ಅನರ್ಹಗೊಳಿಸಿದ ವಿಧಾನ, ಅನೇಕ ಟೀಕೆಗಳಿಗೆ ಕಾರಣವಾಗಿತ್ತು.

ಹಾಗೆಯೇ ಈ ನಿರ್ದೇಶನ ನೀಡುವಲ್ಲಿ ಚುನಾವಣಾ ಆಯೋಗ ನಿಜಕ್ಕೂ ನಿಷ್ಪಕ್ಷಪಾತವಾಗಿತ್ತೇ ಎಂಬಂಥ ಪ್ರಶ್ನೆಗಳನ್ನೂ ಹುಟ್ಟುಹಾಕಿತ್ತು. ‘ವಿವರಣೆಗಳನ್ನು ನೀಡಲು ಶಾಸಕರಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ನೈಸರ್ಗಿಕ ನ್ಯಾಯದ ತತ್ವವನ್ನೇ ಚುನಾವಣಾ ಆಯೋಗ ಪಾಲಿಸಿಲ್ಲ’ ಎಂಬುದು ಮುಖ್ಯ ದೂರಾಗಿತ್ತು. ಹೀಗಾಗಿ, ಈ ನಿರ್ಧಾರದ ಪ್ರಕ್ರಿಯೆಯೇ ಪ್ರಶ್ನೆಗೊಳಗಾಯಿತು. ಈ ಅಂಶವನ್ನು ದೆಹಲಿ ಹೈಕೋರ್ಟ್ ಸಹ ಎತ್ತಿ ಹಿಡಿದಿದೆ. ಅಷ್ಟೇ ಅಲ್ಲ, ಈ ನಿರ್ದೇಶನ ನೀಡಿದಂತಹ ಸಮಯವೂ ಗಂಭೀರ ಚರ್ಚೆಗೆ ಒಳಗಾಗಿತ್ತು. ಏಕೆಂದರೆ, ಮುಖ್ಯ ಚುನಾವಣಾ ಕಮಿಷನರ್ (ಸಿಇಸಿ) ಎ.ಕೆ. ಜೋತಿ ಅವರು ಆಗ ನಿವೃತ್ತಿಯ ಅಂಚಿನಲ್ಲಿದ್ದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ಯದರ್ಶಿ ಆಗಿದ್ದ ಅಧಿಕಾರಿ ಅವರು. ಜೊತೆಗೆ, ಕಳೆದ ವರ್ಷ, ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಣೆಯನ್ನು ವಿಳಂಬ ಮಾಡಿದ್ದೂ ಅವರ ವಿರುದ್ಧದ ಟೀಕೆಗಳಿಗೆ ಕಾರಣವಾಗಿದ್ದನ್ನು ಸ್ಮರಿಸಬಹುದು.

ಶಾಸಕರ ಅನರ್ಹತೆಯ ವಿಚಾರ ಈಗ ದೆಹಲಿ ಹೈಕೋರ್ಟ್ ತೀರ್ಪಿನಿಂದ ಪೂರ್ಣ ಪರಿಹಾರ ಕಂಡಂತೇನೂ ಆಗಿಲ್ಲ. ಹೀಗಾಗಿ ಎಎಪಿ ಶಾಸಕರ ಸಂಭ್ರಮಾಚರಣೆಗೆ ಅರ್ಥವಿಲ್ಲ. ಈ ವಿಷಯದ ಮರು ಪರಾಮರ್ಶೆಯನ್ನು ಚುನಾವಣಾ ಆಯೋಗವೇ ಮತ್ತೆ ಕೈಗೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಚುನಾವಣಾ ಆಯೋಗವು ಮತ್ತೆ ವಿಚಾರಣೆ ನಡೆಸಿ ಲಾಭದಾಯಕ ಹುದ್ದೆಯ ನಿಯಮಗಳನ್ನು ನಿರ್ಧರಿಸಬೇಕು. ಆ ನಂತರ ಎಎಪಿ ಶಾಸಕರು ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಇಲ್ಲಿ ಮುಖ್ಯವಾಗುವುದು ‘ಲಾಭದಾಯಕ ಹುದ್ದೆ ಎಂದರೆ ಏನು?’ ಎಂಬುದು. ಲಾಭ ಎನ್ನುವುದನ್ನು ಸಂಬಳ ಅಥವಾ ಹಣದ ರೂಪದಲ್ಲಿ ಮಾತ್ರ ಗ್ರಹಿಸಬೇಕೇ? ಅಧಿಕಾರ, ಸ್ಥಾನಮಾನ ಮತ್ತಿತರ ಸೌಲಭ್ಯಗಳೂ ಸೇರುತ್ತವೆಯೇ? ಇವೆಲ್ಲಾ ವಿಚಾರಗಳೂ ಸ್ಪಷ್ಟವಾಗಬೇಕು. ವಿವಿಧ ರಾಜ್ಯಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಲಾಭದಾಯಕ ಹುದ್ದೆಗೆ ವಿವಿಧ ವ್ಯಾಖ್ಯಾನಗಳನ್ನು ನೀಡಲಾಗಿದೆ. ಇದು ತಪ್ಪಬೇಕು. ಈ ಬಗೆಯ ಪ್ರಕರಣಗಳು ಪುನರಾವರ್ತನೆ ಆಗಬಾರದು ಎಂದಿದ್ದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಲಾಭದಾಯಕ ಹುದ್ದೆಯ ವಿವರಣೆಯನ್ನು ಸ್ಪಷ್ಟಪಡಿಸಬೇಕು.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ನಡೆಸುವಂತಹ ಹೊಣೆಗಾರಿಕೆ ಹೊತ್ತುಕೊಂಡಿರುವ ಸಾಂವಿಧಾನಿಕ ಸಂಸ್ಥೆಯಾಗಿದೆ ಚುನಾವಣಾ ಆಯೋಗ. ಭಾರತದ ಪ್ರಜಾಪ್ರಭುತ್ವ ಸುಗಮವಾಗಿ ಕಾರ್ಯ ನಿರ್ವಹಿಸಲು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಇರುವ ಸಂಸ್ಥೆ ಇದು. ಕಳೆದ ಹಲವಾರು ವರ್ಷಗಳಲ್ಲಿ, ವಿವಿಧ ರೀತಿಯ ಸುಧಾರಣಾ ಕ್ರಮಗಳ ಮೂಲಕ ಈ ವಿಶ್ವಾಸಾರ್ಹತೆಯನ್ನು ಚುನಾವಣಾ ಆಯೋಗ ಗಳಿಸಿಕೊಂಡಿದೆ. ಈ ವರ್ಚಸ್ಸಿಗೆ ಹಾನಿಯಾಗಬಾರದು. ಕಾರ್ಯವಿಧಾನಗಳಲ್ಲಿ ನ್ಯಾಯವಾಗಿರಬೇಕಾದುದಷ್ಟೇ ಮುಖ್ಯವಲ್ಲ. ಚುನಾವಣಾ ಆಯೋಗವು ನ್ಯಾಯವಾಗಿ ವರ್ತಿಸುತ್ತಿದೆ ಎಂಬ ಭಾವನೆ ಜನರಲ್ಲೂ ಮೂಡಬೇಕು. ಆ ವಿಶ್ವಾಸವನ್ನು ಜನರಿಂದ ಗಳಿಸಿಕೊಳ್ಳುವುದು ಮುಖ್ಯ ಏಕೆಂದರೆ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯ ವಿಷಯ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT