ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮೇಲಿನ ಐಷಾರಾಮಕ್ಕೆ ಮತ್ತೊಂದು ಹೆಸರು ಎಸ್‌ ಕ್ಲಾಸ್

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮರ್ಸಿಡೆಸ್ ಬೆಂಜ್ ತನ್ನ ಎಸ್‌ ಕ್ಲಾಸ್ ಸಲೂನ್ ಅನ್ನು ಜಗತ್ತಿನ ಅತ್ಯಂತ ಐಷಾರಾಮಿ ಕಾರು ಎಂದು ಹೇಳಿಕೊಳ್ಳುತ್ತದೆ. ಹೊರನೋಟಕ್ಕೆ ಐಷಾರಾಮವಾಗಿ ಕಾಣದಿದ್ದರೂ ತಂತ್ರಜ್ಞಾನ ಮತ್ತು ಸವಲತ್ತುಗಳಲ್ಲಿ ಇದಕ್ಕೆ ಸರಿಸಾಟಿ ಇಲ್ಲವೇ ಇಲ್ಲ ಎನ್ನಬಹುದು. ಏಳೆಂಟು ದಶಕಗಳ ಇತಿಹಾಸವಿರುವ ಎಸ್‌-ಕ್ಲಾಸ್‌ನ 2018ರ ಅವತರಣಿಕೆಯನ್ನು ಬೆಂಜ್ ಈಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ.

ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಎಸ್‌ ಕ್ಲಾಸ್‌ನ ಡೀಸೆಲ್ ಅವತರಣಿಕೆಯ ‘ಟೆಸ್ಟ್‌ಡ್ರೈವ್’ ನಡೆಸಿತ್ತು. ಪರೀಕ್ಷಾರ್ಥ ಚಾಲನೆಯಲ್ಲಿ ಅನುಭವಕ್ಕೆ ಬಂದ ಅಂಶಗಳು ಇಲ್ಲಿವೆ.

ಕಂಪನಿಯೇ ಹೇಳಿಕೊಳ್ಳುವಂತೆ ಇದು ಜಗತ್ತಿನ ಐಷಾರಾಮಿ ಕಾರು. ಸೆಡಾನ್ ಅಥವಾ ಸಲೂನ್‌ಗಳು ಆರಾಮದಾಯಕ ಸವಾರಿಗೆ ಹೇಳಿಮಾಡಿಸಿದಂತಿರುತ್ತವೆ. ಎಸ್‌ ಕ್ಲಾಸ್‌ನ ಆರಾಮದಾಯಕತೆ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ ಎನಿಸುತ್ತದೆ. ಈ ಹಿಂದಿನ ಎಸ್‌-ಕ್ಲಾಸ್‌ಗಳಿಗೂ ಹೊಸ ಅವತರಣಿಕೆಗೂ ಈ ವಿಚಾರದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ. ಅತಿ ಉದ್ದನೆಯ ವ್ಹೀಲ್‌ಬೇಸ್, ಅತಿ ಆರಾಮಾಗಿ ಕೂರ ಬಹುದಾದ ಹಿಂಬದಿಯ ಸೀಟ್‌ಗಳು ಎಸ್‌ ಕ್ಲಾಸ್‌ನ ವಿಶೇಷ.

2018ರ ಅವತರಣಿಕೆಯಲ್ಲೂ ಹಿಂಬದಿಯ ಸೀಟ್‌ಗಳು ಮನೆಯ ಆರಾಮ ಕುರ್ಚಿಯಂತೆಯೇ ಇವೆ. ಸೀಟ್‌ನ ಬ್ಯಾಕ್ ಸಪೋರ್ಟ್, ಲಿಂಬ್ ಸಪೋರ್ಟ್, ಥೈ ಸಪೋರ್ಟ್ ಎಲ್ಲವೂ ಉತ್ತಮವಾಗಿದೆ. ಈ ಎಲ್ಲವನ್ನೂ ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಅವಕಾಶವಿದೆ. ಉದಾಹರಣೆಗೆ ನಾವು ಸಣ್ಣಗಿದ್ದು, ಸೀಟು ಹೆಚ್ಚು ಅಗಲ ಎನಿಸಿದರೆ ಸೀಟಿನ ಇಕ್ಕೆಲಗಳನ್ನು ಹತ್ತಿರಕ್ಕೆ ತರಬಹುದು. ಆಗ ಸೀಟು ನಮ್ಮನ್ನು ಆರಾಮವಾಗಿ ಹಿಡಿದುಕೂರಿಸುತ್ತದೆ. ಅಂತೆಯೇ ಥೈ ಸಪೋರ್ಟ್‌ ಅನ್ನೂ ಬದಲಿಸಕೊಳ್ಳಬಹುದು. ಹಿಂಬದಿಯ ಎಡ ಸೀಟಿನಲ್ಲಿ ಫುಟ್‌ರೆಸ್ಟ್ ಸಹ ಇದೆ. ಅಗತ್ಯಬಿದ್ದರೆ ಅದನ್ನು ಬಳಸಿಕೊಳ್ಳಬಹುದು. ಈ ಎಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಲು ಎಲೆಕ್ಟ್ರಿಕಲ್ ಕಂಟ್ರೋಲ್ ಬಟನ್‌ಗಳಿವೆ.

ಇದು 10ವೇ ಅಡ್ಜಸ್ಟಬಲ್ ಸೀಟ್‌ಗಳು. ನೀವು ಮಾಡಿಟ್ಟುಕೊಂಡ ಬದಲಾವಣೆಗಳನ್ನು ಉಳಿಸಿಕೊಳ್ಳುವ ಅವಕಾಶವೂ ಇದೆ. ಅದು ‘ಎಂ’ ಬಟನ್‌ನಲ್ಲಿ (ಗುಂಡಿ) ಸ್ಟೋರ್ ಆಗಿರುತ್ತದೆ. ಅದನ್ನು ಒತ್ತಿದರೆ ಸಾಕು, ನೀವು ಈ ಹಿಂದೆ ಉಳಿಸಿದಂತಹ ಬದಲಾವಣೆಗಳು ತಂತಾನೆ ಆಗುತ್ತವೆ.

ಇನ್ನು ಈ ಸೀಟ್‌ಗಳು ಬ್ರೀತೆಬಲ್ ಲೆದರ್‌ನಿಂದ ಮಾಡಿದ್ದಾಗಿವೆ. ಹೀಗಾಗಿ ಕೂತವರಿಗೆ ಉಷ್ಣತೆಯ ಅನುಭವ ಆಗುವುದಿಲ್ಲ. ಜತೆಗೆ ಚಳಿ ಹೆಚ್ಚಾದಲ್ಲಿ ಬಿಸಿಯಾಗುವ ಸವಲತ್ತೂ ಈ ಸೀಟ್‌ಗಳಲ್ಲಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಸೀಟ್‌ಗಳಲ್ಲಿ ಮಸಾಜ್‌ ಉಪಕರಣಗಳಿರುವುದು ಹೆಚ್ಚು ಮುಖ್ಯವಾದುದು. ಎಸ್‌ ಕ್ಲಾಸ್‌ನ ಈ ಹಿಂದಿನ ಅವತರಣಿಕೆಗಳ ಸೀಟ್‌ಗಳಲ್ಲೂ ಮಸಾಜ್‌ ಸವಲತ್ತು ಇತ್ತು. ಆದರೆ ಹೊಸ ಅವತರಣಿಕೆಗಳಲ್ಲಿ ಮಸಾಜ್‌ ವಿನ್ಯಾಸದ ಆಯ್ಕೆಗಳನ್ನು ಹೆಚ್ಚಿಸಲಾಗಿದೆ. ಮಸಾಜ್‌ನ ಲಯ ಮತ್ತು ಒತ್ತಡವನ್ನು ಬದಲಿಸಲು ಅವಕಾಶವಿರುವುದು ಐಷಾರಾಮವಲ್ಲದೆ ಮತ್ತೇನು. ಮಸಾಜ್‌ ಅನ್ನು ಆರಂಭಿಸಲು ಮತ್ತು ನಿಯಂತ್ರಿಸಲು ರಿಮೋಟ್ ನೀಡಲಾಗಿದೆ. ಎರಡು ಸೀಟುಗಳಿಗೂ ಪ್ರತ್ಯೇಕ ರಿಮೋಟ್‌ಗಳಿವೆ. ಎರಡರಲ್ಲೂ ಬೇರೆ-ಬೇರೆ ರೀತಿಯ ಮಸಾಜ್ ಆಯ್ಕೆ ಮಾಡಿಕೊಳ್ಳ ಬಹುದು. ನೀವು ಯಾವ ರೀತಿಯ ಮಸಾಜ್‌ ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದು ಮುಂಬದಿಯ ಸೀಟ್‌ಗಳ ಹೆಡ್‌ರೆಸ್ಟ್‌ಗಳಿಗೆ ಜೋಡಿಸಿರುವ ಎಲ್ಇಡಿ ಪರದೆಗಳಲ್ಲಿ (ಇವು ಇನ್ಫೊಟೇನ್‌ಮೆಂಟ್ ಸಿಸ್ಟಂ ಭಾಗ) ಗೋಚರಿಸುತ್ತಿರುತ್ತದೆ.

ಇನ್ನು ಹಿಂಬದಿಯಲ್ಲಿ ಲೆಗ್‌ರೂಂ, ಹೆಡ್‌ರೂಂ ಮತ್ತು ಶೋಲ್ಡರ್‌ರೂಂಗಳು ವಿಶಾಲವಾಗಿವೆ. ಹೀಗಾಗಿ ದೂರದ ಪ್ರಯಾಣದಲ್ಲಿ ಕಾಲು ಚಾಚಿ ಆರಾಮಾಗಿ ನಿದ್ದೆ ಮಾಡಬಹುದು. ಈ ಕಾರಿನಲ್ಲಿ ಇದ್ದದ್ದು 3,000 ಸಿ.ಸಿ. ಸಾಮರ್ಥ್ಯದ ಇನ್‌ಲೈನ್ 6 ಸಿಲಿಂಡರ್ ಡೀಸೆಲ್ ಎಂಜಿನ್. ಇದು ಬರೋಬ್ಬರಿ 291 ಬಿಎಚ್‌ಪಿ ಶಕ್ತಿ ಮತ್ತು 600 ಎನ್‌.ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಕಾರ್‌ನ ವೇಗವರ್ಧನೆ ಉತ್ತಮವಾಗಿದೆ. ಇದು ನಿಂತಲ್ಲಿಂದ ಪ್ರತಿಗಂಟೆಗೆ 100 ಕಿ.ಮೀ. ಮುಟ್ಟಲು ಕೇವಲ 6 ಸೆಕೆಂಡ್‌ ತೆಗೆದುಕೊಳ್ಳುತ್ತದೆ. ಗರಿಷ್ಠ ವೇಗವನ್ನು ಪ್ರತಿಗಂಟೆಗೆ 250 ಕಿ.ಮೀ.ಗೆ ಮಿತಿಗೊಳಿಸಲಾಗಿದೆ. ಇದಕ್ಕಿಂತ ವೇಗವಾಗಿ ಚಲಿಸುವ ಶಕ್ತಿ ಇದ್ದರೂ, ಆ ವೇಗ ಮುಟ್ಟಿದ ನಂತರ ಎಂಜಿನ್‌ಗೆ ಇಂಧನದ ಪೂರೈಕೆ ಕಡಿಮೆಯಾಗುತ್ತದೆ. ಹೀಗಾಗಿ ಆ ವೇಗವನ್ನು ಕಾರ್‌ ದಾಟುವುದಿಲ್ಲ.

ಇಷ್ಟೆಲ್ಲಾ ಶಕ್ತಿ ಇರುವ ಎಸ್‌ ಕ್ಲಾಸ್ ಡಿ350 ಪ್ರತಿ ಲೀಟರ್‌ ಡೀಸೆಲ್‌ಗೆ ಸರಾಸರಿ 13.5 ಕಿ.ಮೀ.ದೂರ ಕ್ರಮಿಸಿತ್ತು. ಈ ಕಾರಿನ ಹೆಗ್ಗಳಿಕೆ ಇರುವುದು ಅದರ ನಿಯಂತ್ರಣಾ ವ್ಯವಸ್ಥೆಯಲ್ಲಿ. ಇದರಲ್ಲಿ ಬ್ರೇಕ್ ಅಸಿಸ್ಟ್ ಇದೆ. ಅಂದರೆ ಚಾಲನೆ ವೇಳೆ ಮುಂಬದಿಯ ವಾಹನ ತೀರಾ ಹತ್ತಿರವಾದರೆ ಚಾಲಕನನ್ನು ಕಾರ್‌ ಮೊದಲು ಎಚ್ಚರಿಸುತ್ತದೆ. ಆತ ತಕ್ಷಣ ಬ್ರೇಕ್ ಹಾಕದಿದ್ದಲ್ಲಿ ತಾನೇ ಬ್ರೇಕ್ ಹಾಕಿಕೊಳ್ಳುತ್ತದೆ. ಇದರಿಂದ ಹಲವು ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ಸವಲತ್ತು ಇದೆ ಎಂದು ಚಾಲಕ ಮೈಮರೆತು ಕೂರುವಂತಿಲ್ಲ. ಏಕೆಂದರೆ ನಮ್ಮ ಹಿಂಬದಿಯ ವಾಹನಗಳಲ್ಲಿ ಈ ಸವಲತ್ತು ಇರುವುದೆಂದು ಹೇಳಲು ಸಾಧ್ಯವಿಲ್ಲ. ಆ ಚಾಲಕ ಮೈಮರೆತಿದ್ದರೆ, ಆತನ ವಾಹನ ನಮ್ಮ ವಾಹನಕ್ಕೆ ಡಿಕ್ಕಿಯಾಗುತ್ತದೆ. ಹೀಗಾಗಿ ಇದು ರಾತ್ರಿ ವೇಳೆಯ ದೂರದ ಚಾಲನೆಗೆ ಹೇಳಿ ಮಾಡಿಸಿದ ಸವಲತ್ತು ಮತ್ತು ಇಕ್ಕಟ್ಟಾದ ಮತ್ತು ದಟ್ಟಣೆಯ ರಸ್ತೆಗಳಲ್ಲಿ ಹೆಚ್ಚು ಉಪಯುಕ್ತ.

ಇದರ ಜತೆಯಲ್ಲೇ ಎಸ್‌ಟ್ರೋನಿಕ್ ಎಂಬ ಸವಲತ್ತು ಇದೆ. ಸ್ಟೀರಿಂಗ್ ಅಸಿಸ್ಟ್. ಚಾಲನೆ ವೇಳೆ ಮುಂಬದಿಯಲ್ಲಿ ಅಡೆತಡೆಗಳಿದ್ದರೆ, ವಾಹನಗಳು ಗಕ್ಕನೆ ನಿಂತರೆ ಆ ಅಂತರದಲ್ಲಿ ಎಸ್‌ ಕ್ಲಾಸ್‌ ನಿಲ್ಲಲು ಸಾಧ್ಯವೇ ಇಲ್ಲದಿದ್ದರೆ, ಕಾರು ತಂತಾನೆ ಸ್ಟೀರಿಂಗ್ ತಿರುಗಿಸಿ ದಿಕ್ಕು ಬದಲಿಸುತ್ತದೆ. ಕಾರಿನ ಸುತ್ತಲೂ ಸಂವೇದಕಗಳಿದ್ದು, ಎಲ್ಲಿ ಜಾಗ ಲಭ್ಯವಿದೆಯೋ ಅತ್ತ ಕಾರು ಚಲಿಸುತ್ತದೆ. ಕಾರನ್ನು ಚಾಲಕ ಅಡ್ಡಾದಿಡ್ಡಿ ಚಲಾಯಿಸಿದರೆ, ಅಪಘಾತಗಳಲ್ಲಿ ನಿಯಂತ್ರಣ ತಪ್ಪಿ ಓಲಾಡುತ್ತಿದ್ದರೆ ಕಾರು ತನ್ನಷ್ಟಕ್ಕೆ ತಾನೇ ತನ್ನ ಚಲನೆಯ ದಿಕ್ಕನ್ನು ಸರಿಪಡಿಸಿಕೊಂಡು ರಸ್ತೆಯಲ್ಲಿ ನೇರವಾಗಿ ನಿಲ್ಲುತ್ತದೆ.

ಹೆದ್ದಾರಿಗಳಲ್ಲಿ ಚಾಲಕ ಮೈಮರೆತು ಲೇನ್ ಬದಲಿಸುತ್ತಿದ್ದರೆ ಕಾರು, ಆ ಬಗ್ಗೆ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ. ಚಾಲಕ ಎಚ್ಚರವಹಿಸದಿದ್ದರೆ ತಾನೇ ಲೇನ್ ಸರಿಪಡಿಸಿಕೊಳ್ಳುತ್ತದೆ. ರಸ್ತೆ ವಿಭಜಕಗಳ ಬಳಿಗೆ ಕಾರನ್ನು ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ. ರಸ್ತೆ ವಿಭಜಕಕ್ಕೆ ಹತ್ತಿರ ಹೋದಂತೇ ಕಾರು ಅದರಿಂದ ತುಸು ದೂರ ಸರಿಯುತ್ತದೆ ಮತ್ತು ಆ ಬಗ್ಗೆ ಚಾಲಕನಿಗೆ ಮಾಹಿತಿ ನೀಡುತ್ತದೆ.

ಇದರ ಜತೆಯಲ್ಲೇ ಕಾರಿನಲ್ಲಿ ಪಾರ್ಕ್ ಅಸಿಸ್ಟ್ ಇದೆ. ಕಿರಿದಾದ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕೆಂದರೆ ಚಾಲಕ ಕಾರಿನಲ್ಲಿ ಕೂತಿದ್ದರೆ ಸಾಕು. ಕಾರು ಪಾರ್ಕ್ ಮಾಡಲೇ ಎಂದು ಕೇಳುತ್ತದೆ. ಚಾಲಕ ಅದಕ್ಕೆ ಅನುಮತಿ ಕೊಟ್ಟರೆ ಸಾಕು. ಸ್ಟೀರಿಂಗ್, ಅಕ್ಸಲರೇಟರ್, ಬ್ರೇಕ್ ಮತ್ತು ಗಿಯರ್ ಬದಲಾವಣೆಯನ್ನೂ ಕಾರೇ ಮಾಡಿಕೊಳ್ಳುತ್ತದೆ. ತನ್ನಿಂದ ಸಾಧ್ಯವಿಲ್ಲ ಎನಿಸಿದರೆ ನಿಯಂತ್ರಣಕ್ಕೆ ತೆಗೆದುಕೊಳ್ಳಿ ಎಂದು ಚಾಲಕನಿಗೆ ಸೂಚನೆ ನೀಡುತ್ತದೆ.

ಈ ಸವಲತ್ತುಗಳೆಲ್ಲವೂ ಚಾಲನೆ ಮತ್ತು ಪಾರ್ಕಿಂಗ್ ವೇಳೆಯಲ್ಲಿ ಸಂಭಾವ್ಯ ಅಪಘಾತಗಳನ್ನು ತಪ್ಪಿಸುತ್ತದೆ. ಒಟ್ಟಾರೆಯಾಗಿ ಹಿಂಬದಿಯ ಪ್ರಯಾಣ ಮತ್ತು ಮುಂಬದಿಯಲ್ಲಿ ಚಾಲನೆಯನ್ನು ಹೆಚ್ಚು ಆರಾಮದಾಯಕ ಮತ್ತು ಸರಳಗೊಳಿಸುವ ಹೊಸ ಎಸ್‌ ಕ್ಲಾಸ್ ಅತ್ಯಂತ ಐಷಾರಾಮ ಸಲೂನ್ ಎಂಬುದರಲ್ಲಿ ಎರಡು ಮಾತಿಲ್ಲ. ಡೀಸೆಲ್ ಮಾದರಿಯ ಎಕ್ಸ್‌ಷೋರೂಂ ಬೆಲೆ ಭಾರತದ ಹಲವೆಡೆ 1.4 ಕೋಟಿ ದಾಟುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT