ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯ ನಡುವಲ್ಲೊಂದು ಬಸದಿ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪುಣ್ಯಕ್ಷೇತ್ರಗಳು ಮತ್ತು ಮಂದಿರಗಳು ಪ್ರಕೃತಿಯ ಸೊಬಗಿನ ಮಡಿಲಲ್ಲೇ ನೆಲೆ ನಿಂತಿರುವುದು ಸಾಮಾನ್ಯ. ದೇಶದೆಲ್ಲೆಡೆ ಹಲವಾರು ಜೈನ ಬಸದಿಗಳು ವಿವಿಧ ರೀತಿಯ ಪ್ರಕೃತಿಯ ರಮಣೀಯ ಸ್ಥಳಗಳಲ್ಲಿ ನೆಲೆ ನಿಂತಿವೆ. ಕಾರ್ಕಳದ ವರಂಗ ಬಸದಿ ಅಂತಹುದೇ ವಿಶಿಷ್ಟ ಬಸದಿ.

ದಕ್ಷಿಣ ಭಾರತದಲ್ಲೇ ಅತ್ಯಂತ ವಿಶಿಷ್ಟವೆನ್ನಬಹುದಾದ ಈ ಬಸದಿಯು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹೆಬ್ರಿ ರಸ್ತೆಯಲ್ಲಿ ಸಿಗುವ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿದೆ. ಪಶ್ಚಿಮ ಘಟ್ಟದ ಹಸಿರಿನ ಸೆರಗಿನ ಮಧ್ಯದಲ್ಲಿ ನಳನಳಿಸುತ್ತಿರುವ ಗದ್ದೆ ತೋಟಗಳ ನಡುವಲ್ಲೊಂದು ವಿಶಾಲ ಕೆರೆ, ಕೆರೆಯಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಪದ್ಮಾವತಿದೇವಿಯ ಬಸದಿಯಿದ್ದು, ದೂರದಿಂದಲೇ ಪ್ರಕೃತಿ ಪ್ರಿಯರ ಮನಸ್ಸನ್ನು ಸೂರೆಗೊಂಡು ಬಿಡುತ್ತದೆ. ಸುತ್ತಲೂ ತುಂಬಿದ ನೀರಿನ ಮಧ್ಯೆ ಬೆಳೆದಿರುವ ತಾವರೆಯ ಹೂವುಗಳ ಮೇಲೆಯೇ ಬಸದಿ ನಿಂತಿದೆಯೇನೋ ಎನ್ನಿಸುವಂತಿದೆ. ಸುಮಾರು ಹದಿನಾಲ್ಕರಿಂದ ಹದಿನೈದು ಎಕರೆ ವಿಸ್ತಾರವಾಗಿ ಸದಾ ಮೂರು ಋತುಗಳಲ್ಲೂ ತುಂಬಿ ತುಳುಕುವ ಕೆರೆಯ ನಡುವೆ ನಕ್ಷತ್ರಾಕೃತಿಯ ಚತುರ್ಮುಖ ಬಸದಿ ಇದೆ. ಈ ಬಸದಿ ತಲುಪಬೇಕೆಂದರೆ ಇರುವ ಏಕೈಕ ವ್ಯವಸ್ಥೆ ದೋಣಿಯೊಂದೇ. ದೋಣಿಯ ಮೂಲಕ ಬಸದಿಯೆಡೆಗೆ ಸಾಗುವುದೇ ರೋಚಕ ಹಾಗೂ ರೋಮಾಂಚಕ ಅನುಭವ. ಸುಮಾರು ನೂರರಿಂದ ನೂರೈವತ್ತು ಮೀಟರ್‌ ದೂರ ಕಮಲದ ಹೂವುಗಳನ್ನು ಸೀಳಿಕೊಂಡು ದೋಣಿಯು ಸಾಗುವುದೇ ಅವರ್ಣನೀಯ. ದೋಣಿಯಿಂದ ಇಳಿದು ಬಸದಿಯ ಕಟ್ಟೆಯನ್ನು ಹತ್ತಿ ನೋಡಿದರೆ ಎಲ್ಲೆಲ್ಲೂ ಅಗಾಧ ಜಲರಾಶಿ, ಸಮುದ್ರದ ಮಧ್ಯದಲ್ಲಿ ಏಕಾಂಗಿಯಾದಂತಹ ಅನುಭವವನ್ನು ನೀಡುತ್ತದೆ. ಜಲರಾಶಿ ಮಧ್ಯೆ ಅಬ್ಬಬ್ಬಾಎಂದರೆ ಐದು ಸೆಂಟ್ಸ್‌ ಜಾಗದಲ್ಲಿ ಮಂಟಪದಂತೆ ಅತ್ಯಂತ ವಿಶಿಷ್ಟವಾಗಿ ನಿರ್ಮಿಸಿರುವ ಬಸದಿಯು ತನ್ನ ಒಡಲಾಳದಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹುದುಗಿಸಿಕೊಂಡಿದೆ.

ಜೈನಧರ್ಮದ ತೀರ್ಥಂಕರರಾದ ಪಾರ್ಶ್ವನಾಥ, ನೇಮಿನಾಥ, ಶಾಂತಿನಾಥ ಮತ್ತು ಅನಂತನಾಥರ ವಿಗ್ರಹಗಳನ್ನು ಕರಿಶಿಲೆಯಲ್ಲಿ ಖಡ್ಗಾಸನ ಭಂಗಿಯಲ್ಲಿ ಕೆತ್ತಿರುರುವುದು ಇಲ್ಲಿನ ವಿಶೇಷಗಳಲ್ಲೊಂದು. ಈ ಕ್ಷೇತ್ರವು ಹೊಯ್ಸಳ ಮತ್ತು ಚಾಲುಕ್ಯರ ಶಿಲ್ಪಕಲಾ ಶೈಲಿಯ ಸಮ್ಮಿಶ್ರಣವಾಗಿದ್ದು, ವಿಗ್ರಹಗಳ ಎರಡು ಬದಿಗಳಲ್ಲಿ ಯಕ್ಷ– ಯಕ್ಷಿಯರ ಬಿಂಬಗಳಿವೆ. ಪೂರ್ವದಿಕ್ಕಿನಲ್ಲಿ ಪಾರ್ಶ್ವನಾಥ ಸ್ವಾಮಿಯ ವಿಗ್ರಹದ ಪಕ್ಕದಲ್ಲಿ ಪದ್ಮಾವತಿದೇವಿಯ ವಿಗ್ರಹವಿದೆ. ಪದ್ಮಾವತಿ ದೇವಿಯೇ ಇಲ್ಲಿನ ಪ್ರಧಾನ ದೇವರು. ಬಸದಿಯ ನಾಲ್ಕು ದಿಕ್ಕಿನಿಂದಲೂ ಏಕರೂಪವಾದ ಪ್ರವೇಶದ್ವಾರವಿದ್ದು ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳಿವೆ. ಪ್ರವೇಶದ್ವಾರದ ಹೊರಭಾಗದಲ್ಲಿ ಭಕ್ತರು ಬಸದಿಗೆ ಪ್ರದಕ್ಷಿಣೆ ಹಾಕಲು ಅನುವಾಗುವಂತೆ ಪ್ರದಕ್ಷಿಣೆ ಪಥದೊಂದಿಗೆ ಇದಕ್ಕೆ ನಕ್ಷತ್ರ ಆಕಾರದ ಜಗುಲಿಯನ್ನು ನಿರ್ಮಿಸಿದ್ದಾರೆ. ಬಸದಿಯ ಗೋಡೆ, ಮಂಟಪ ಮತ್ತು ಛಾವಣಿಯನ್ನೂ ಸಂಪೂರ್ಣ ಕಲ್ಲಿನಿಂದಲೇ ನಿರ್ಮಿಸಲಾಗಿದೆ.

ಈ ಬಸದಿಯನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಇಲ್ಲಿನ ಮೂರ್ತಿಗಳನ್ನೂ ಅದೇ ಸಂದರ್ಭದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಈ ಕೆರೆಯನ್ನು ಆಳುಪ ಮನೆತನದ ರಾಣಿಯಾದ ಜಾಕಲೀದೇವಿ ನಿರ್ಮಿಸಿದ್ದಾಳೆಂದು ಇತಿಹಾಸದಿಂದ ತಿಳಿದುಬರುತ್ತದೆ. ಇಂತಹ ವಿಶಿಷ್ಟ ಕ್ಷೇತ್ರ ಮೂಲತಃ ಜೈನರ ಪವಿತ್ರ ಸ್ಥಳವಾಗಿದ್ದರೂ ಇಲ್ಲಿಗೆ ಬಂದು ಪೂಜೆ ಮತ್ತು ಸೇವೆಯನ್ನು ಸಲ್ಲಿಸುವವರಲ್ಲಿ ಬಹುತೇಕ ಮಂದಿ ಅನ್ಯಧರ್ಮೀಯರು. ಅಪಾರ ಜಲರಾಶಿಯ ಮಧ್ಯೆ ವಿರಾಜಮಾನಳಾಗಿರುವ ಪದ್ಮಾವತಿದೇವಿಯು ಭಕ್ತಾದಿಗಳ ಇಷ್ಟಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿದೆ. ಮದುವೆಯಾಗಲು ಹರಕೆ ಹೇಳಲು, ಮದುವೆಯಾದ ಹೊಸ ಜೋಡಿ ಮೊದಲ ಪೂಜೆ ಸಲ್ಲಿಸಲು ಈ ಬಸದಿಗೆ ಬರುವುದು ವಿಶೇಷ. ಚರ್ಮರೋಗಿಗಳು ಇಲ್ಲಿನ ದೇವರಿಗೆ ಹರಕೆ ಹೊತ್ತು ಪರಿಹಾರವಾದರೆ ಬೆಳ್ತಿಗೆ ಅಕ್ಕಿ ಹಾಗೂ ಹುರುಳಿಯನ್ನು ದೇವರಿಗೆ ಸಮರ್ಪಿಸುತ್ತಾರೆ.


ವರಂಗ ಬಸಿದಿಯ ಒಂದು ನೇರ ನೋಟ

ಹರಕೆಯಾಗಿ ಬರುವ ಅಷ್ಟೂ ಅಕ್ಕಿ, ಹುರುಳಿಗಳನ್ನು ಈ ಕೆರೆಯಲ್ಲಿ ಆಶ್ರಯ ಪಡೆದಿರುವ ಮತ್ಸ್ಯಗಳಿಗೆ ಆಹಾರವಾಗಿ ನೀಡುತ್ತಾರೆ. ನೀರಿಗೆ ಅಕ್ಕಿ, ಹುರುಳಿಗಳನ್ನು ಹಾಕಿದಾಗ ನೀರಿನಿಂದ ಮೇಲೆದ್ದು ಆಹಾರ ತಿನ್ನಲು ಪೈಪೋಟಿ ನಡೆಸುವ ಮತ್ಸ್ಯರಾಶಿಯನ್ನು ನೋಡುವುದೇ ಅಂದ. ಈ ಕೆರೆಯು ವರ್ಷದ ಸರ್ವ ಋತುಗಳಲ್ಲೂ ತುಂಬಿ ತುಳುಕುತ್ತಿದ್ದು, ಅತಿ ಬರಗಾಲದ ಸಂದರ್ಭ ಒಮ್ಮೆ ಮಾತ್ರ ಬಸದಿಗೆ ನಡೆದುಕೊಂಡು ಹೋಗುವಷ್ಟು ಕೆರೆ ಬರಿದಾಗಿದ್ದು ಬಿಟ್ಟರೆ ಉಳಿದೆಲ್ಲಾ ಕಾಲವೂ ಈ ಕೆರೆಯು ತುಂಬಿರುತ್ತದೆ. ಬಸದಿಯು ಪಕ್ಕದಲ್ಲೆ ವರಂಗತೀರ್ಥವೆಂಬ ನೀರಿನ ಸೆಲೆಯ ಸ್ಥಳವಿದ್ದು ಇದುವೇ ಈ ಕೆರೆಗೆ ನೀರಿನ ಮೂಲ. ಬಸದಿಯಲ್ಲಿ ಬೆಳಗ್ಗೆ 5.30ಕ್ಕೆ ಪ್ರಥಮ ಪೂಜೆ. ಸಂಜೆಯೊಳಗೆ ಒಟ್ಟು ಮೂರು ಪೂಜೆಗಳು ನಡೆಯುತ್ತದೆ. ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ಪದ್ಮಾವತಿದೇವಿಗೆ ವಿಶೇಷ ಪೂಜೆ. ಸಿಂಹ ಮಾಸದಲ್ಲಿ ಭಕ್ತರದಂಡೇ ಹರಿದು ಬರುತ್ತದೆ.

ಕೆರೆಯ ದಡ ಹಾಗೂ ಬಸದಿಯ ಮದ್ಯೆ ಸಂಪರ್ಕಸೇತುವಾಗಿ ಇರುವ ಏಕೈಕ ಆಸರೆಯೆಂದರೆ ದೋಣಿಯೇನೋ ನಿಜ. ಆದರೆ ದೋಣಿಯನ್ನು ನಡೆಸಲು ಇಲ್ಲಿ ಪ್ರತ್ಯೇಕ ಅಂಬಿಗನಿಲ್ಲವಾಗಿದ್ದು, ಬಸದಿಯ ಇಂದ್ರರೇ (ಅರ್ಚಕರು) ಇಲ್ಲಿ ದೋಣಿಗೆ ಅಂಬಿಗ ಎನ್ನುವುದು ವಿಶೇಷ. ಒಬ್ಬನೇ ಒಬ್ಬ ಭಕ್ತ ಅಥವಾ ಅದೆಷ್ಟೇ ಭಕ್ತರು ದಡದಲ್ಲಿ ನಿಂತಿದ್ದರೂ ಸ್ವಲ್ಪವೂ ಬೇಸರಿಸಿಕೊಳ್ಳದೇ ಇಂದ್ರರು ಭಕ್ತರನ್ನು ಬಸದಿಗೆ ಕರೆದುಕೊಂಡು ಬಂದು ಪೂಜೆ ಮಾಡಿಸಿ ಪ್ರಸಾದ ನೀಡಿ ವಾಪಸು ಕರೆದುಕೊಂಡು ಬಂದು ಬಿಡುತ್ತಾರೆ. ಮಳೆ, ಬಿಸಿಲು, ಚಳಿ, ಗಾಳಿಗೆ ಸ್ವಲ್ಪವೂ ಅಂಜದೆ ಅಳುಕದೇ ಬೇಸರಿಸದೇ ನಗುಮುಖದೊಂದಿಗೆ ದೋಣಿಗೆ ಹುಟ್ಟು ಹಾಕಿಕೊಂಡು ಬರುವ ಇವರ ಮುಖವರ್ಚಸ್ಸಲ್ಲೇ ಅದೇನೋ ವಿಶಿಷ್ಟ ಕಳೆಯಿದೆ. ದೇಶದಲ್ಲಿ ಮಧ್ಯಪ್ರದೇಶದಲ್ಲಿ ಬಿಟ್ಟರೆ ಇಂತಹ ಎರಡನೆಯ ಕೆರೆ ಬಸದಿಯಿರುವುದು ಕರ್ನಾಟಕದ ವರಂಗದಲ್ಲಿ ಮಾತ್ರ.ಈ ಬಸದಿಗೆ ಪ್ರಾರಂಭದಲ್ಲಿ ಸೇತುವೆಯನ್ನು ನಿರ್ಮಿಸುವ ಪ್ರಸ್ತಾವ ಇತ್ತಾದರೂ, ಇದರ ಮೂಲ ಸೌಂದರ್ಯ ಹಾಗೂ ಐತಿಹಾಸಿಕತೆಗೆ ಧಕ್ಕೆಯಾಗುವುದೆಂಬ ಕಾರಣಕ್ಕೆ ಪ್ರಸ್ತಾವವನ್ನು ಭಕ್ತರೇ ಕೈಬಿಟ್ಟಿದ್ದಾರೆ.

ವರಂಗವು ಕಾರ್ಕಳ ನಗರದಿಂದ ಹೆಬ್ರಿ ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು ೨೪ ಕಿ.ಮೀ ಕ್ರಮಿಸಿದಾಗ ಕಾಣಲು ಸಿಗುತ್ತಿದ್ದು, ಕೆರೆಯ ಸಮೀಪದಲ್ಲೇ ಇರುವ ಬೇಡ ರಾಜನ ಅರಮನೆಯ ಅವಶೇಷಗಳನ್ನು ನೋಡಲು ಬೆಟ್ಟಕ್ಕೆ ಚಾರಣವನ್ನೂ ಕೈಗೊಳ್ಳಬಹುದು. ಪ್ರತಿ ಎಳ್ಳಮಾವಾಸ್ಯೆಯ ದಿನ ಇಲ್ಲಿನ ಕುಂದಾದ್ರಿ ತೀರ್ಥದಲ್ಲಿ ತಲೆಯೊಡ್ಡಿ ತೀರ್ಥಸ್ನಾನ ಮಾಡಬಹುದು. ಸಾವಿರ ವರ್ಷಕ್ಕೂ ಮಿಕ್ಕಿದ ಇತಿಹಾಸವಿರುವ ವರಂಗ ಬಸದಿಯು ಜೈನರ ಅತಿಶಯ ಕ್ಷೇತ್ರವಾಗಿದ್ದು, ಶಾಸನಗಳಲ್ಲಿ ಇದನ್ನು ವರಂಗತೀರ್ಥವೆಂದು ಉಲ್ಲೇಖಿಸಲಾಗಿದೆ. ವರಂಗ ಎಂಬ ಜನಪರ ಕಾಳಜಿ ಇದ್ದ ರಾಜ ಈ ಊರನ್ನು ಆಳುತ್ತಿದ್ದು, ಈ ಪ್ರದೇಶಕ್ಕೆಆತನ ಹೆಸರೇ ಬಂದಿದೆ ಎಂದು ತಿಳಿದು ಬರುತ್ತದೆ. ಇನ್ನೊಂದು ಮೂಲದ ಪ್ರಕಾರ ಈ ಬಸದಿಗಳಲ್ಲಿರುವ ತೀರ್ಥಂಕರ ಮೂರ್ತಿಗಳ ಪೈಕಿ ನೇಮಿನಾಥರ ಮೂರ್ತಿಯು ಸ್ವಲ್ಪ ವಾಲಿಕೊಂಡಿರುವುದರಿಂದ ‘ವಾರೆ ಅಂಗ’ ಶಬ್ದವು ವರಂಗ ಎಂದಾಗಿದೆ ಎಂದು ಇಲ್ಲಿನ ಹಿರಿಯರು ಹೇಳುವುದುಂಟು.


ಕೊಳದ ಕನ್ನಡಿಯಲ್ಲಿ ವರಂಗ ಬಸದಿಯ ಬಿಂಬ   

ಜೈನ ವಾಸ್ತುಶಿಲ್ಪದಲ್ಲಿ ಒಟ್ಟು ನಾಲ್ಕು ಪ್ರಕಾರಗಳು– ಏಕಶಿಲಾ ವಿಗ್ರಹಗಳು, ಮಾನಸ್ತಂಭ, ಬಸದಿಗಳು ಮತ್ತು ಸಮಾಧಿಗಳ ಪೈಕಿ ಮಾನಸ್ತಂಭ, ಬಸದಿಗಳು ಮತ್ತು ಸಮಾಧಿಗಳು ವರಂಗದಲ್ಲೇ ಕಾಣಲು ಸಿಗುವುದು ಇಲ್ಲಿನ ವಿಶೇಷತೆಗಳಲ್ಲೊಂದು. ನೇಮಿನಾಥ ಸ್ವಾಮಿಯ ಬಸದಿ ದೀರ್ಘ ಆಯತಾಕೃತಿಯಲ್ಲಿದ್ದು, ಚೌಕ ಗರ್ಭಗ್ರಹ, ಸುಖಾಸೀನ, ನವರಂಗ ಮತ್ತು ಮುಖ ಮಂಟಪಗಳಿಂದ ಕೂಡಿದೆ. ಬಸದಿಯೊಳಗೆ ನಾಲ್ಕು ಅಡಿ ಎತ್ತರದ ಧ್ಯಾನಸ್ಥ ನೇಮಿನಾಥ ಹಾಗೂ ಚಂದ್ರನಾಥ ಸ್ವಾಮಿಯ ವಿಗ್ರಹಗಳಿವೆ. ಕಪ್ಪುಕಲ್ಲಿನ ಚಿತ್ತಾರ ಮತ್ತು ಬೆಳಕಿನ ಸಂಯೋಜನೆಯು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿ 45 ಅಡಿ ಎತ್ತರದ ಮಾನಸ್ತಂಭವಿದ್ದು ಇದು ಕರಾವಳಿಯ ಅತಿ ಪ್ರಾಚೀನ ಮಾನಸ್ತಂಭಗಳ ಪೈಕಿ (ಮೊದಲನೆಯದು ಹಿರಿಯಂಗಡಿಯಲ್ಲಿದ್ದು, ಎರಡನೆಯದು ಅಳದಂಗಡಿಯಲ್ಲಿದೆ) ಮೂರನೇ ಅತಿದೊಡ್ಡ ಮಾನಸ್ತಂಭವಾಗಿದೆ.

ಪ್ರಸಕ್ತ ಶ್ರವಣಬೆಳಗೊಳದ ಮಠಾಧೀಶರಾಗಿರುವ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮೂಲತಃ ವರಂಗದವರಾಗಿರುವುದು ಇಲ್ಲಿನ ವಿಶೇಷಗಳಲ್ಲೊಂದು. ವರಂಗ ಬಸದಿಯ ಆಡಳಿತವನ್ನು ಹೊಸನಗರದ ಹುಂಬುಜ ಬಸದಿಯ ಮಠಾಧೀಶರು ನೋಡಿಕೊಳ್ಳುತ್ತಿದ್ದು, ಈ ಬಸದಿಗೊಂದು ಹೊಸ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಕೃತಿ ಸಿರಿಯ ಮಡಿಲಲ್ಲಿರುವ ಈ ವಿಶಿಷ್ಟ ಕೆರೆ ಬಸದಿಯು ಎಲ್ಲರ ಕಣ್ಮನಗಳಿಗೆ ಮುದ ನೀಡುವಂತಿದೆ. ಇಲ್ಲಿನ ಪರಿಸರವನ್ನು ಹಾಗೂ ಕೆರೆಯನ್ನು ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಕಾಪಾಡುವ ಜವಾಬ್ದಾರಿಯು ಪ್ರವಾಸಿಗರ ಮೇಲಿದೆ. ಇಲ್ಲಿ ಇತ್ತೀಚೆಗೆ ಗೋಲ್ಡನ್‌ಸ್ಟಾರ್‌ ಗಣೇಶ್‌ ಅಭಿನಯದ ಮುಗುಳುನಗೆ ಚಲನಚಿತ್ರದ ಚಿತ್ರೀಕರಣವು ನಡೆದಿದ್ದು, ಈ ಕೆರೆ ಬಸದಿಯು ಪ್ರವಾಸಿಗರನ್ನು ಆಕರ್ಷಿಸುವಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇನ್ನೂ ಹೆಚ್ಚಿನ ಉತ್ತೇಜನವನ್ನು ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT