ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಣ್ಣವೊರೆಸುವ ಎಣ್ಣೆಗನ್ನಡಿ’

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪುಸ್ತಕದ ಲೇಖಕರ ಮಾತಿನಂತೆ ‘ಬಣ್ಣವೊರೆಸುವ ಎಣ್ಣೆಗನ್ನಡಿ’ ಎಂದರೆ ರಂಗಸ್ಥಳದಲ್ಲಿ ಕುಣಿದು ಬೆವರಿದ ಪಾತ್ರವೊಂದು ಮತ್ತೆ ನಿಜದ ಮನುಷ್ಯನಾಗುವಾಗ ಸಾಕ್ಷಿಯಾಗುವುದು. ಮುಖಕ್ಕೆ ಕೊಬ್ಬರಿ ಎಣ್ಣೆ ಬಳಿದುಕೊಂಡು ಕಾಡಿಗೆ, ಕೆಂಪು ನಾಮ, ಬಿಳಿ–ಹಳದಿ ಗೆರೆ ಒಂದೊಂದಾಗಿ ಒರೆಸಿಕೊಳ್ಳುವಾಗ ಹಿಡಿದುಕೊಳ್ಳುವ ಕನ್ನಡಿಯಾದ್ದರಿಂದ ಅದರ ಮೈಗೂ ಎಣ್ಣೆಗಮಟು ಮೆತ್ತುವುದು ಸಹಜ.

ಬದುಕಿನ ಘಟನೆಗಳು ನಡೆಯುವಾಗ ಕುಣಿಯುವವರ ತಲ್ಲೀನತೆ, ಉದ್ವಿಗ್ನಿತೆಗಳಲ್ಲಿ ಮುಳುಗಿರುವ ನಾವು–ನೀವು ಘಟನೋತ್ತರ ಸ್ಥಿತಿಯಲ್ಲಿ ಕುಳಿತು ಯೋಚಿಸಿದಾಗ ಒಂದೊಂದು ಮಾತು–ಸನ್ನಿವೇಶಗಳು ಬೇರೆಯದೇ ಬಣ್ಣ ಕಳಚುವ ಸ್ಥಿತಿಯಲ್ಲಿ ಕಾಣತೊಡಗುತ್ತವೆ. ಲೇಖಕರೂ ತಮ್ಮ ಹನ್ನೊಂದೂ ಪ್ರಬಂಧಗಳಲ್ಲಿ ಬದುಕಿನಲ್ಲಿ ಕಂಡ ಪ್ರಸಂಗಗಳನ್ನೇ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಬೇರೆ ಬೇರೆ ಮುಖಗಳು, ವೇಷಗಳು ಕಂಡರೂ ನಮ್ಮ ಮುಖವನ್ನು ನಾವೇ ನೋಡಿಕೊಳ್ಳುವ ಅನುಭವ ನೀಡುತ್ತದೆ.

ನಾವು ಮೊದಲು ಅನ್ನ–ಆಹಾರಕ್ಕಾಗಿ ಹೋರಾಡುತ್ತೇವೆ. ಆಮೇಲೆ ಹೊಟ್ಟೆ ತುಂಬಿ ಕಣ್ಣೆಳೆಯುತ್ತಿದ್ದಂತೆ ಬೆಚ್ಚನೆಯ ಮನೆಗಾಗಿ ಹುಡುಕುತ್ತೇವೆ. ನಂತರ ಐಷಾರಾಮಿ ವಸ್ತುಗಳ ಕಡೆಗೆ ನಮ್ಮ ದೃಷ್ಟಿ ಬೀಳುತ್ತದೆ. ಅದರ ನಂತರದ ಸರದಿ ನಮ್ಮ ವ್ಯಕ್ತಿತ್ವದ ನಿರೂಪಣೆ ಇತ್ಯಾದಿ. ಮಾನವನ ಬಯಕೆಗಳು ಅನಂತ ಎಂಬುದನ್ನು ಉದಾಹರಣೆಗಳ ಮೂಲಕ ‘ಅಪೂರ್ಣ ಪುರಾಣ’ ಪ್ರಬಂಧದಲ್ಲಿ ವಿವರಿಸಲಾಗಿದೆ.

ತಾವು ದ್ವೇಷಿಸುವ, ತಮ್ಮ ಅಜ್ಜಿಯ ನಿದ್ದೆ–ಎಚ್ಚರ–ಕನಸುಗಳಲ್ಲೂ ಆವರಿಸಿದ್ದ ಅಡುಗೆ ಒಲೆ ಪ್ರಸಂಗ ಹಳ್ಳಿಗಾಡಿನ ಹೆಣ್ಣುಮಕ್ಕಳ ಬದುಕಿನ ಚಿತ್ರಣ ನೀಡುತ್ತದೆ. ಆಸೆಯೆಂಬುದೇ ಹೀಗೆ. ಅದಕ್ಕೆ ಮನಸ್ಸಿನಲ್ಲಿ ಜಾಗ ಕೊಟ್ಟಷ್ಟು ಹಬ್ಬುತ್ತದೆ. ಜಾಗ ಸಿಕ್ಕಂತೆಲ್ಲ ಬೆಳೆಯುತ್ತ ಬೆಳೆಯುತ್ತ ತ್ರಿವಿಕ್ರಮನಾಗುತ್ತ, ನಮ್ಮ ವ್ಯಕ್ತಿತ್ವವನ್ನೇ ನಾಶಮಾಡಿಬಿಡುತ್ತದೆ. ತಲೆಯ ಮೇಲೆ ಕಾಲು ಊರಿ ಪಾತಾಳಕ್ಕೆ ತಳ್ಳಿ ಬಿಡುತ್ತದೆ. ಇದರಿಂದ ನಮ್ಮ ಬದುಕು ಸೂತ್ರ ಕಿತ್ತ ಗಾಳಿಪಟದಂತಾಗುತ್ತದೆ ಎಂಬ ಅರಿವು ‘ಅಕ್ಷಯ ಪಾತ್ರೆ’ ಪ್ರಬಂಧ ನೀಡುತ್ತದೆ. ಈ ಪುಸ್ತಕ ಮನುಷ್ಯನ ತಿಳಿವಿನ ಹಾದಿಗೆ ಪೂರಕವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT