ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ‘ಡೇಟಾ’ ಪ್ರಿಯರಿಗಾಗಿ...

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚಿತ್ರ: ಗುಳ್ಟು ಆನ್‌ಲೈನ್‌
ನಿರ್ದೇಶನ: ಜನಾರ್ದನ್ ಚಿಕ್ಕಣ್ಣ
ನಿರ್ಮಾಪಕ: ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ
ತಾರಾಗಣ: ನವೀನ್ ಶಂಕರ್, ಸೋನು ಗೌಡ, ಪವನ್ ಕುಮಾರ್, ಅವಿನಾಶ್
ಸಂಗೀತ: ಅಮಿತ್ ಆನಂದ್

ಸಾಮಾಜಿಕ ಜಾಲತಾಣಗಳ ಬಳಕೆದಾರರು ಆ ವೇದಿಕೆಗಳಲ್ಲಿ ವ್ಯಕ್ತಪಡಿಸುವ ಅನಿಸಿಕೆಗಳನ್ನು, ತಮ್ಮ ಇಷ್ಟ–ಕಷ್ಟಗಳ ಬಗ್ಗೆ ಅಲ್ಲಿ ಹೇಳಿಕೊಳ್ಳುವುದನ್ನು ಸಂಗ್ರಹಿಸಿ, ಬಳಕೆದಾರರ ಅರಿವಿಗೆ ಬಾರದಂತೆ ಅವರ ‘ಜಾತಕ’ ಸಿದ್ಧಪಡಿಸುವುದು, ಆ ಜಾತಕವನ್ನು ಚುನಾವಣಾ ಅಭಿಯಾನಗಳಿಗೆ ಬಳಸಿಕೊಳ್ಳುವುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಚಾರ. ಹಾಗೆಯೇ, ಪ್ರಜೆಗಳ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸಿ, ಅವರಿಗೆ ಒಂದು ಗುರುತಿನ ಸಂಖ್ಯೆ ನೀಡುವ ಯೋಜನೆಯ ಬಗ್ಗೆಯೂ ವಿಶ್ವದ ಹಲವೆಡೆ ಚರ್ಚೆ ನಡೆದಿದೆ, ಇಂದಿಗೂ ನಡೆಯುತ್ತಿದೆ.

ಅದಿರಲಿ, ಸಾರ್ವಜನಿಕ ಖಾಸಗಿ ಮಾಹಿತಿ ಕದಿಯುವುದು, ಆ ಮಾಹಿತಿಯನ್ನು ಬಳಸಿ ವ್ಯಕ್ತಿಯ ಬಗ್ಗೆ ಸಮಗ್ರ ವಿವರ ನೀಡುವ ಡಿಜಿಟಲ್ ಕಡತ ಸಿದ್ಧಪಡಿಸುವುದು, ಅವು ಸೋರಿಕೆ ಆಗುವುದು ಮತ್ತು ಹಾಗೆ ಆದಾಗ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಒಂದು ಸಿನಿಮಾ ಬೇಕಲ್ಲ?! ಈ ವಿಚಾರಗಳನ್ನೆಲ್ಲ ಬುದ್ಧಿಜೀವಿ ವರ್ಗ ಮಾತ್ರ ಚರ್ಚಿಸುತ್ತ ಇದ್ದರೆ ಸಾಕಾಗದು, ಇವುಗಳನ್ನು ಜನಸಾಮಾನ್ಯರೂ ಚರ್ಚಿಸಬೇಕಲ್ಲ? ಹಾಗೊಂದು ಉದ್ದೇಶ ಇಟ್ಟುಕೊಂಡು ರೂಪುಗೊಂಡ ಆಸಕ್ತಿಕರ ಸಿನಿಮಾ ‘ಗುಳ್ಟು ಆನ್‌ಲೈನ್‌’.

ಇದು ಜನಾರ್ದನ್‌ ಚಿಕ್ಕಣ್ಣ ನಿರ್ದೇಶನದ ಸಿನಿಮಾ. ನವೀನ್ ಶಂಕರ್ (ಅಲೋಕ್‌ ಎನ್ನುವ ಪಾತ್ರ) ಮತ್ತು ಸೋನು ಗೌಡ (ಪೂಜಾ ರಮೇಶ್ ಮತ್ತು ಅನಘಾ ಎಂಬ ಹೆಸರುಗಳನ್ನು ಹೊಂದಿರುವ ಪಾತ್ರ) ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಪವನ್ ಕುಮಾರ್ ಅವರು ದ್ವಿತೀಯಾರ್ಧದಲ್ಲಿ ತೆರೆಯ ಮೇಲೆ ಮಿಂಚುತ್ತಾರೆ.

ಅಲೋಕ್‌ ಒಬ್ಬ ಚತುರ ಕಂಪ್ಯೂಟರ್‌ ತಂತ್ರಜ್ಞ. ಈತ ಕಾಲೇಜಿನಲ್ಲಿ ಇದ್ದಾಗಲೇ ಒಂದು ಸರ್ವರ್‌ಗೆ ಕನ್ನಹಾಕಿ ಕಾಲೇಜಿನಲ್ಲಿ ಹೆಸರು ಸಂಪಾದಿಸಿದ್ದವ! ಅಲೋಕ್‌ ಕೆಲಸ ಮಾಡುವ ಕಂಪ್ಯೂಟರ್‌ ತರಬೇತಿ ಸಂಸ್ಥೆಯಲ್ಲೇ ಮಾರುವೇಷದಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ತನಿಖಾಧಿಕಾರಿ ಪೂಜಾ. ಕೇಂದ್ರ ಸರ್ಕಾರವು ‘ಸುಧಾರ್‌’ ಎಂಬ ಯೋಜನೆಯ ಅಡಿ ಸಾರ್ವಜನಿಕರಿಂದ ಬಗೆಬಗೆಯ ಮಾಹಿತಿ ಪಡೆದು ಅದನ್ನು ಒಂದು ಸರ್ವರ್‌ನಲ್ಲಿ ಸಂಗ್ರಹಿಸಿ ಇಟ್ಟಿರುತ್ತದೆ. ಕೇಂದ್ರದ ಸುಪರ್ದಿಯಲ್ಲಿರುವ ಡಿಜಿಟಲ್‌ ಮಾಹಿತಿ ಕೋಶವೊಂದಕ್ಕೆ ಯಾರೋ ಕನ್ನ ಹಾಕುತ್ತಾರೆ. ಅದರ ಬಗ್ಗೆ ತನಿಖೆಗೆ ಆದೇಶಿಸುತ್ತದೆ ಕೇಂದ್ರ.

ಮಾಹಿತಿಗೆ ಕನ್ನ ಹಾಕುವುದರ ಪರಿಣಾಮಗಳ ಹಲವು ಆಯಾಮಗಳನ್ನು ಈ ಚಿತ್ರವು ತನಿಖೆಯ ಪ್ರಕ್ರಿಯೆಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಡಿಜಿಟಲ್‌ ಮಾಹಿತಿ ಅಂದರೆ ಏನು, ಅದನ್ನು ಖರೀದಿಸುವವರು ಯಾರು, ಅದಕ್ಕೆ ಬೆಲೆ ಇದೆಯೇ, ಆ ಮಾಹಿತಿಯನ್ನು ಏಕೆ ಖರೀದಿಸಲಾಗುತ್ತದೆ, ಖರೀದಿಸಿ ಏನು ಮಾಡುತ್ತಾರೆ, ಜನರ ಬಯೋಮೆಟ್ರಿಕ್‌ ಮಾಹಿತಿಯನ್ನೆಲ್ಲ ಒಂದೇ ಕಡೆ ಸಂಗ್ರಹಿಸಿಡುವುದರ ಅಪಾಯ, ಅವು ಸೋರಿಕೆ ಆದರೆ ಆಗುವ ಸಮಸ್ಯೆಗಳು... ಇವುಗಳನ್ನೆಲ್ಲ ಈ ಚಿತ್ರದ ಪಾತ್ರಗಳು ವಿವರಿಸುತ್ತ ಹೋಗುತ್ತವೆ.

‘ಡೇಟಾ’, ‘ಡೇಟಾ ಮೈನಿಂಗ್’, ‘ಬಿಗ್‌ ಡೇಟಾ’ ಇವೆಲ್ಲ ಒಂದು ಬೌದ್ಧಿಕ ವರ್ಗದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿರುವ ವಿಷಯಗಳು. ಆದರೆ, ‘ಡೇಟಾ’ ಅನ್ನುವುದರ ಮಹತ್ವ ಏನು ಎಂಬುದು ಎಲ್ಲರಿಗೂ ಅರ್ಥವಾಗಿರುವಂತಿಲ್ಲ. ಈ ಸಿನಿಮಾದ ಆರಂಭದಲ್ಲಿ ಯುವಕನೊಬ್ಬ ಗಾಬರಿಯ ಮುಖ ಹೊತ್ತುಕೊಂಡು ಪೊಲೀಸ್ ಠಾಣೆಗೆ ಬರುತ್ತಾನೆ. ‘ಸರ್, ನನ್ನ ಮೊಬೈಲ್‌ ಕಳೆದುಹೋಗಿದೆ’ ಎಂದು ಪೊಲೀಸ್ ಸಿಬ್ಬಂದಿಗೆ ಹೇಳುತ್ತಾನೆ. ಇದಕ್ಕೆ ಆ ಸಿಬ್ಬಂದಿ, ‘ಸರಿ ಹುಡುಕೋಣ’ ಎಂಬ ಮಾಮೂಲಿನ ಉತ್ತರ ನೀಡುತ್ತಾನೆ. ‘ಸರ್‌, ಮೊಬೈಲ್‌ ಹೋದರೆ ಹೋಗಲಿ. ಅದರಲ್ಲಿ ನನ್ನ ಡೇಟಾ ಇದೆ’ ಎನ್ನುತ್ತಾನೆ ಆ ಯು‌ವಕ. ಆದರೆ, ಡೇಟಾ ಬಗ್ಗೆ ಯುವಕನಿಗೆ ಇರುವ ಅರಿವು ಪೊಲೀಸ್‌ ಸಿಬ್ಬಂದಿಗೆ ಇರುವುದಿಲ್ಲ.

ಡಿಜಿಟಲ್‌ ಉಪಕರಣಗಳನ್ನು ಬಳಸುವವರು ಅದರ ಮೂಲಕ ರವಾನೆಯಾಗುವ, ಅದರಲ್ಲಿ ಸಂಗ್ರಹವಾಗುವ ಡೇಟಾ ಬಗ್ಗೆ ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ಹೇಳುವ ಉದ್ದೇಶ ನಿರ್ದೇಶಕರಿಗೆ ಇರುವಂತಿದೆ. ಅಂದಹಾಗೆ, ಇದು ಮಾಮೂಲಿ ‘ಮಾಸ್‌’ ಸಿನಿಮಾ ಎನ್ನಲು ಸಾಧ್ಯವಿಲ್ಲ. ಆದರೆ, ಕೈಯಲ್ಲಿ ಸ್ಮಾರ್ಟ್‌ ಫೋನ್‌ ಹಿಡಿದುಕೊಂಡಿರುವವರು ಇವತ್ತಿನ ‘ಮಾಸ್‌’ ಕೂಡ ಹೌದು! ಸ್ಮಾರ್ಟ್‌ ಫೋನ್‌ ಇರುವವರು, ಬಯೋಮೆಟ್ರಿಕ್‌ ಮಾಹಿತಿಯನ್ನು ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ಬಗ್ಗೆ ಚರ್ಚೆಯಲ್ಲಿ ಆಸಕ್ತಿ ಇರುವವರು ಬಿಗಿ ನಿರೂಪಣೆ ಇರುವ ಈ ಸಿನಿಮಾ ಕಡೆ ಒಂದು ಕಣ್ಣು ಹಾಯಿಸಲು ಅಡ್ಡಿಯಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT