ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಪ್ರತಿಭಟನೆಗೆ ಎಐಎಡಿಎಂಕೆ ಸಜ್ಜು

ಪ್ರತಿಭಟನೆಗೆ ರಾಜಕೀಯ ಪಕ್ಷಗಳಲ್ಲಿ ಪೈಪೋಟಿ
Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ವಿವಿಧ ರಾಜಕೀಯ ಪಕ್ಷಗಳು ಪೈಪೋಟಿಯ ಮೇಲೆ ಪ್ರತಿಭಟನೆಗೆ ಸಜ್ಜಾಗಿದ್ದು, ಮಂಗಳವಾರ ಧರಣಿ ನಡೆಸಲಿರುವ ಪಕ್ಷದ ನಾಯಕರ ಹೆಸರನ್ನು ಎಐಎಡಿಎಂಕೆ ಪ್ರಕಟಿಸಿದೆ.

ಆಶ್ಚರ್ಯ ಎಂದರೆ ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರ ಹೆಸರು ಇಲ್ಲ. ಈ ಬಗ್ಗೆ ಪಕ್ಷದ ಕಡೆಯಿಂದ ಯಾವುದೇ ಮಾಹಿತಿಯೂ ಇಲ್ಲ.

ಮಂಗಳವಾರ ರಾಜ್ಯದ ಎಲ್ಲ 32 ಜಿಲ್ಲಾ ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ.

ಪಕ್ಷದ ಒಂದು ಮೂಲಗಳ ಪ್ರಕಾರ ಉದ್ದೇಶಪೂರ್ವಕವಾಗಿಯೇ ಈ ಇಬ್ಬರು ನಾಯಕರು ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಮತ್ತೊಂದು ಮೂಲಗಳ ಪ್ರಕಾರ, ಕೊನೆಯ ಗಳಿಗೆಯಲ್ಲಿ ಈ ನಾಯಕರು ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಳ್ಳುವ ಮೂಲಕ ಆಶ್ಚರ್ಯ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ವಿರೋಧಾಭಾಸದ ನಡೆ: ಪಳನಿ ಟೀಕೆ
ಚೆನ್ನೈ:
ಕಾವೇರಿ ನದಿ ನೀರು ಹಂಚಿಕೆಯ ಯೋಜನೆ (ಸ್ಕೀಂ) ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟತೆ ಕೋರಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಟೀಕಿಸಿದ್ದಾರೆ.

ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನಂತರ ಕೇಂದ್ರ ಕಾಲಾವಕಾಶ ಕೋರಿ ಮೇಲ್ಮನವಿ ಸಲ್ಲಿಸಿದ್ದು ವಿರೋಧಾಭಾಸಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಪಳನಿಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದೆಡೆ ಪಳನಿಸ್ವಾಮಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ವಿರೋಧ ಪಕ್ಷಗಳು, ಕಾವೇರಿ ಕಾನೂನು ಹೋರಾಟದಲ್ಲಿ ತಮಿಳುನಾಡು ಸರ್ಕಾರ ಎಡವಿದೆ ಎಂದು ಆರೋಪಿಸಿವೆ.

‘ಪಳನಿಸ್ವಾಮಿ ಸರ್ಕಾರವು ತಮಿಳುನಾಡಿನ ಹಕ್ಕು ಮತ್ತು ಲಕ್ಷಾಂತರ ರೈತರ ಜೀವನವನ್ನು ಬಿಜೆಪಿಗೆ ಅಡವು ಇಟ್ಟಿದೆ’ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ.

‘ಯೋಜನೆಯು ಮಂಡಳಿ ಸ್ವರೂಪದಲ್ಲಿ ಇರಕೂಡದು’
ನವದೆಹಲಿ:
ಕಾವೇರಿ ನೀರಿನ ಹಂಚಿಕೆ ಕುರಿತು ಸ್ಪಷ್ಟ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ಕೇಂದ್ರವು ಶನಿವಾರ ಮೇಲ್ಮನವಿ ಸಲ್ಲಿಸಿರುವ ಕಾರಣ ತನ್ನ ನಿಲುವನ್ನು ಸ್ಪಷ್ಟಪಡಿಸಲಿರುವ ಕರ್ನಾಟಕ, ಯೋಜನೆ ರೂಪಿಸಲು ಕೇಂದ್ರ ಸ್ವತಂತ್ರವಾಗಿದೆ. ಆದರೆ, ಅದು ನಿರ್ವಹಣಾ ಮಂಡಳಿಯ ಸ್ವರೂಪದಲ್ಲಿ ಇರಕೂಡದು ಎಂದು ಹೇಳಲಿದೆ.

ಸುಪ್ರೀಂ ಕೋರ್ಟ್‌ ಸೂಚನೆಯಂತೆ ನಿಯಮಿತವಾಗಿ ನದಿ ಕಣಿವೆಯ ಕೆಳಹಂತದ ರಾಜ್ಯಗಳ ಪಾಲಿನ ನೀರನ್ನು ಹರಿಸಿದ ನಂತರ ಕರ್ನಾಟಕವು ಕಾವೇರಿ ನೀರನ್ನು ಯಾವ ರೀತಿ ಬಳಸಬೇಕು ಎಂಬುದನ್ನು ನಿಯಂತ್ರಿಸುವ ಮಂಡಳಿ ಇರಕೂಡದು ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ ಎಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾವೇರಿ ಜಲವಿವಾದ ನ್ಯಾಯಮಂಡಳಿಯ ಸಲಹೆಯಂತೆಯೇ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು’ ಎಂಬುದು ತಮಿಳುನಾಡು ಮತ್ತು ಪುದುಚೇರಿ ಬೇಡಿಕೆಯಾಗಿದೆ. ಆದರೆ, ಈ ಕುರಿತು ಕರ್ನಾಟಕ ಮತ್ತು ಕೇರಳ ಬೇಡಿಕೆ ಭಿನ್ನವಾಗಿದ್ದು, ಯೋಜನೆ ರೂಪಿಸುವುದು ಕೇಂದ್ರದ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿವೆ.

ಮಂಡಳಿ ರಚಿಸಬೇಕು ಎಂಬ ಬೇಡಿಕೆಯು, ಯೋಜನೆ ರೂಪಿಸುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಲಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ
ನವದೆಹಲಿ:
ಕಾವೇರಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸಲು ಆದೇಶಿಸಿ ಫೆಬ್ರುವರಿ 16ರಂದು ನೀಡಲಾಗಿರುವ ಆರು ವಾರಗಳ ಗಡುವು ಪೂರ್ಣಗೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ತಮಿಳುನಾಡು, ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ಕೇಂದ್ರದ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಹಾಗೂ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಉಪೇಂದ್ರ ಪ್ರತಾಪ್ ಸಿಂಗ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಇದುವರೆಗೆ ಕೇಂದ್ರ ಸರ್ಕಾರವು ಕೋರ್ಟ್‌ ತೀರ್ಪಿನ ಅನುಷ್ಠಾನಕ್ಕೆ ಕ್ರಮ ಕೈಕೊಂಡಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು ಕಾಲಮಿತಿಯೊಳಗೆ ರೂಪಿಸದೆ ಇರುವುದಕ್ಕೆ ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನಿಯಮಿತವಾಗಿ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದರೂ ವಿಳಂಬ ನೀತಿ ಅನುಸರಿಸಿರುವುದು ರಾಜ್ಯದ ರೈತರ ಸಮಸ್ಯೆಗೆ ಕಾರಣವಾಗಿದೆ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT