ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿಸಂಹಿತೆ ಉಲ್ಲಂಘಿಸಿದರೆ ಶಿಸ್ತುಕ್ರಮ

ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿ ಸತ್ಯವತಿ ಎಚ್ಚರಿಕೆ
Last Updated 10 ಏಪ್ರಿಲ್ 2018, 9:47 IST
ಅಕ್ಷರ ಗಾತ್ರ

ಕೋಲಾರ: ‘ರಾಜಕೀಯ ಪಕ್ಷಗಳು ಅಥವಾ ಜನಪ್ರತಿನಿಧಿಗಳು ವಿಧಾನಸಭಾ ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ನಂತರ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಜಿಲ್ಲೆಯಲ್ಲಿ ಈವರೆಗೆ 67 ಪ್ರಕರಣ ದಾಖಲಾಗಿವೆ’ ಎಂದರು.

‘ಸಂಚಾರ ದಳದ ಸಿಬ್ಬಂದಿ 6 ಪ್ರಕರಣ ದಾಖಲಿಸಿ ₹ 1.64 ಲಕ್ಷ ಜಪ್ತಿ ಮಾಡಿದ್ದಾರೆ. ಮಾದರಿ ಚುನಾವಣಾ ನೀತಿಸಂಹಿತೆ ತಂಡ 3 ಪ್ರಕರಣ ದಾಖಲಿಸಿ ₹ 3.12 ಲಕ್ಷ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು 56 ಪ್ರಕರಣ ದಾಖಲಿಸಿ ₹ 24 ಸಾವಿರ ಮೌಲ್ಯದ 83 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ 2 ಪ್ರಕರಣ ದಾಖಲಿಸಿದ್ದಾರೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಒಟ್ಟು 1,588 ಮತ ಗಟ್ಟೆಗಳಿದ್ದು, ಈ ಪೈಕಿ 739 ಸಾಮಾನ್ಯ, 459 ಸೂಕ್ಷ್ಮ ಮತ್ತು 390 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ. ಎಲ್ಲಾ ಮತಗಟ್ಟೆಗಳಿಗೂ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸಿದ್ದಾರೆ’ ಎಂದರು.

‘ಕೆಲ ಮತಗಟ್ಟೆಗಳ ದುರಸ್ತಿ ಆಗಬೇಕಿದೆ. ಹಲವು ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಶೌಚಾಲಯವಿಲ್ಲ. ಶೌಚಾಲಯ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇರುವ ಕಾರಣ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಕಾರ್ಯ ಒತ್ತಡ: ‘ಸಾರ್ವಜನಿಕರು ಸುಳ್ಳು ದೂರು ನೀಡಲು ಚುನಾವಣಾ ನಿಯಂತ್ರಣ ಕೊಠಡಿಗೆ ಕರೆ ಮಾಡಬಾರದು. ನಿಯಂತ್ರಣ ಕೊಠಡಿ ಸಿಬ್ಬಂದಿಗೆ ಹೆಚ್ಚಿನ ಕಾರ್ಯ ಒತ್ತಡವಿರುತ್ತದೆ. ಆದ ಕಾರಣ ಸಾರ್ವಜನಿಕರು ಸುಳ್ಳು ದೂರು ಕೊಟ್ಟು ಸಿಬ್ಬಂದಿ ಸಮಯ ಹಾಳು ಮಾಡಬಾರದು. ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸತ್ಯದ ದೂರುಗಳಿದ್ದರೆ ಮಾತ್ರ ಕರೆ ಮಾಡಬೇಕು’ ಎಂದು ಹೇಳಿದರು.

‘ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಕ ದೂರು ನಿಯಂತ್ರಣ ಕೊಠಡಿ ತೆರೆದು, ದೂರವಾಣಿ ಸಂಖ್ಯೆ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 1800 425 8200 ಸಂಖ್ಯೆಯ ಉಚಿತ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ’ ಎಂದು ತಿಳಿಸಿದರು.

ಜಫ್ತಿ ಮಾಡುತ್ತೇವೆ: ‘ಸಂಚಾರ ದಳದ 48 ತಂಡಗಳಿದ್ದು, ಆ ತಂಡಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಜತೆಗೆ ಪ್ರತಿ ತಂಡಕ್ಕೂ ವಿಡಿಯೋ ಚಿತ್ರೀಕರಣ ಮಾಡುವವರನ್ನು ನೇಮಿಸಲಾಗುವುದು. ಸೂಕ್ಷ್ಮ ಚೆಕ್‌ಪೋಸ್ಟ್‌ಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ದಾಖಲೆಪತ್ರವಿಲ್ಲದೆ ₹ 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸಿದರೆ ಜಫ್ತಿ ಮಾಡುತ್ತೇವೆ. ಆದ ಕಾರಣ ಹಣ ಕೊಂಡೊಯ್ಯುವವರು ದಾಖಲೆಪತ್ರ ಇಟ್ಟುಕೊಳ್ಳುವುದು ಸೂಕ್ತ’ ಎಂದು ಮನವಿ ಮಾಡಿದರು.

ಮಿಂಚಿನ ನೋಂದಣಿ: ‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪರಿಷ್ಕರಣೆಗೆ ಸಂಬಂಧಿಸಿದಂತೆ ಮಿಂಚಿನ ನೋಂದಣಿ ಅಭಿಯಾನ ಆರಂಭವಾಗಿದೆ. ಅಭಿಯಾನದಲ್ಲಿ ಒಂದೇ ದಿನ 12,682 ಅರ್ಜಿ ಸಲ್ಲಿಕೆಯಾಗಿವೆ. ಏ.14ರವರೆಗೆ ಅಭಿಯಾನ ನಡೆಯಲಿದ್ದು, ಮತದಾರರು ಇದರ ಸದುಪಯೋಗ ಪಡೆಯಬೇಕು’ ಎಂದರು.

ಕಟ್ಟೆಚ್ಚರ ವಹಿಸಲಾಗಿದೆ: ‘ಚುನಾವಣೆಯ ಹಿನ್ನೆಲೆಯಲ್ಲಿ ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಶಸ್ತ್ರಾಸ್ತ್ರಗಳನ್ನು ಠಾಣೆಯಲ್ಲಿ ಠೇವಣಿ ಇರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಪ್ರತಿ ಬೂತ್‌ಗೂ ಭೇಟಿ ನೀಡಿ ಸ್ಥಿತಿಗತಿ ಅವಲೋಕಿಸಿ, ಶಾಂತಿಯುತ ಮತದಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಹೇಳಿದರು.

‘ಚುನಾವಣಾ ಆಯೋಗದ ಸೂಚನೆ ಮೇರೆಗೆ ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 15 ಮತ್ತು ಕೆಜಿಎಫ್ ಪೊಲೀಸ್ ಜಿಲ್ಲೆ ವ್ಯಾಪ್ತಿಯಲ್ಲಿ 6 ಚೆಕ್‌ಪೋಸ್ಟ್‌ ತೆರೆದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ’ ಎಂದರು.

‘ಇಲಾಖೆಯಿಂದ ಅಕ್ರಮ ಮದ್ಯ ಸಾಗಣೆ ಮತ್ತು ಮಾರಾಟದ ಸಂಬಂಧ 265 ಕಡೆ ದಾಳಿ ನಡೆಸಲಾಗಿದ್ದು, 60 ಪ್ರಕರಣ ದಾಖಲಿಸಲಾಗಿದೆ. ₹ 22 ಸಾವಿರ ಬೆಲೆ ಬಾಳುವ ಲೀಟರ್ ಮದ್ಯ ಮತ್ತು ₹ 1.25 ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತೆ ಕೆ.ಕೆ.ಸುಮಿತಾ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹಾಜರಿದ್ದರು.

**

ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೆ 22 ದೂರು ಸ್ವೀಕೃತಿಯಾಗಿವೆ. ಯಾವುದೇ ಚುನಾವಣಾ ಅಕ್ರಮ ಕಂಡುಬಂದರೆ ಸಾರ್ವಜನಿಕರು ದೂರು ಸಲ್ಲಿಸಬಹುದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಾರ್ವಜನಿಕರ ಸಹಕಾರ ಮುಖ್ಯ – ಜಿ.ಸತ್ಯವತಿ, ಜಿಲ್ಲಾಧಿಕಾರಿ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT