ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಂಡಾಯ ಸೂಚನೆ

ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಹೆಚ್ಚಿದ ಪೈಪೋಟಿ
Last Updated 10 ಏಪ್ರಿಲ್ 2018, 10:49 IST
ಅಕ್ಷರ ಗಾತ್ರ

ಮಾನ್ವಿ: ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿರುವ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹಂಪಯ್ಯ ನಾಯಕ ಅವರ ವಿರುದ್ಧ ಕೆಲ ಮುಖಂಡರು ಸಿಡಿದೆದ್ದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಈ ಬಾರಿ ಟಿಕೆಟ್‌ಗಾಗಿ ನಡೆದಿರುವ ಪೈಪೋಟಿ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಇವೆ.

1999 ಮತ್ತು 2004ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಎನ್‌.ಎಸ್‌. ಬೋಸರಾಜು ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡೆಯಿಂದ ಈ ಕ್ಷೇತ್ರವು ಸಾಮಾನ್ಯ ವರ್ಗದಿಂದ ಪರಿಶಿಷ್ಟ ವರ್ಗಕ್ಕೆ ಮೀಸಲಾಯಿತು. ಆನಂತರ ಬೋಸರಾಜು ಅವರ ಆಪ್ತ ಜಿ.ಹಂಪಯ್ಯ ನಾಯಕ ಸ್ಪರ್ಧಿಸಿ ಸತತ ಎರಡು ಬಾರಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಎನ್.ಎಸ್‌.ಬೋಸರಾಜು ತೀರ್ಮಾನವೇ ಅಂತಿಮ. ಇಲ್ಲಿಯವರೆಗೂ ಅವರು ಸೂಚಿಸಿದವರಿಗೆ ಟಿಕೆಟ್‌ ಸಿಗುವುದು ಖಚಿತ ಎನ್ನುವ ಮಾತಿದೆ.

ಆದರೆ, ಕಳೆದ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದ ಮುಂಚೂಣಿ ನಾಯಕ ಎಂ.ಈರಣ್ಣ ಗುತ್ತೇದಾರ, ಈ ಬಾರಿ ಶಾಸಕರಿಗೇ ಸೆಡ್ಡು ಹೊಡೆದಿದ್ದಾರೆ. ತಮ್ಮ ಸೊಸೆ ಡಾ.ತನುಶ್ರೀಗೆ ಟಿಕೆಟ್‌ ಕೊಡಿಸಲು ಅರ್ಜಿ ಸಲ್ಲಿಸುವ ಮೂಲಕ ‘ಸ್ಥಳೀಯ ನಾಯಕತ್ವ’ದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕುರುಬ ಸಮುದಾಯದ ಎಂ.ಈರಣ್ಣ ಗುತ್ತೇದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ.ರೇವಣ್ಣ ಅವರಿಗೆ ಆಪ್ತರಾಗಿದ್ದಾರೆ. ಇವರ ಸೊಸೆ ತನುಶ್ರೀ, ಬೀದರ್‌ ಜಿಲ್ಲೆಯವರಾಗಿದ್ದು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿರುವ ಗೊಂಡ ಸಮುದಾಯಕ್ಕೆ ಸೇರಿದವರು. 40 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿನ ನಿಷ್ಠೆ ಹಾಗೂ ಸೇವಾ ಹಿರಿತನ ಪರಿಗಣಿಸಿ ತಮ್ಮ ಸೊಸೆಗೆ ಟಿಕೆಟ್‌ ನೀಡಬೇಕು ಎಂದು ಎಂ.ಈರಣ್ಣ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಏಕೈಕ ಮಹಿಳಾ ತನುಶ್ರೀ ಆಗಿದ್ದಾರೆ. ರಾಜ್ಯಮಟ್ಟದಲ್ಲಿ ಸ್ವಜಾತಿ ಮುಖಂಡರ ಬೆಂಬಲ, ವರಿಷ್ಠರ ವಲಯದಲ್ಲಿ ತಮಗಿರುವ ಸಂಪರ್ಕ ಬಳಸಿಕೊಂಡು ಸೊಸೆಗೆ ಟಿಕೆಟ್‌ ಪಡೆಯುವ ವಿಶ್ವಾಸವನ್ನು ಎಂ.ಈರಣ್ಣ ಹೊಂದಿದ್ದಾರೆ.

ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಉಚಿತ ಸಾಮೂಹಿಕ ವಿವಾಹಗಳ ಆಯೋಜನೆ, ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ಅಂಬುಲೆನ್ಸ್‌ ವಾಹನ ಸೌಲಭ್ಯ, ಅತೀ ಕಡಿಮೆ ದರದಲ್ಲಿ ಉಪಾಹಾರ ಹಾಗೂ ಊಟ ಪೂರೈಸುವ ಅಣ್ಣಾ ಕ್ಯಾಂಟೀನ್‌ಗಳು, ವಿವಿಧೆಡೆ ಶುದ್ಧ ಕುಡಿಯುವ ನೀರಿನ ಅರವಟಿಗೆಗಳ ಸ್ಥಾಪನೆ, ಮಾನ್ವಿ ಪಟ್ಟಣದ ಎಲ್ಲಾ ವಾರ್ಡ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜುಗಳಂತಹ  ಜನ ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಬಂಡಾಯಕ್ಕೆ ಕಾರಣ: ಎಂ.ಈರಣ್ಣ ಅವರ ಪತ್ನಿ ಅನ್ನಪೂರ್ಣಮ್ಮ ಪೋತ್ನಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳಾ ವರ್ಗಕ್ಕೆ ಮೀಸಲಾಗಿದ್ದರೂ ಈರಣ್ಣ ಅವರ ಪತ್ನಿಗೆ ಅಧ್ಯಕ್ಷೆ ಸ್ಥಾನ ಒಲಿಯದಂತೆ ಜಿಲ್ಲೆಯ ಹಿರಿಯ ಮುಖಂಡರು ತೋರಿಸಿದ್ದ ಉತ್ಸಾಹವೇ ಈಗ ಬಂಡಾಯ ಏಳುವುದಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎನ್‌.ಎಸ್‌. ಬೋಸರಾಜು ಹಾಗೂ ಹಂಪಯ್ಯ ನಾಯಕ ಅವರು ಕಾರ್ಯಕರ್ತರ ಬಗೆಗೆ ಹೊಂದಿರುವ ನಿರ್ಲಕ್ಷ್ಯಗೆ ಬೇಸರಗೊಂಡಿರುವ ಹಲವು  ಮುಖಂಡರು ಈರಣ್ಣ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ.ಬಸವಂತಪ್ಪ ಹಾಗೂ ಸೈಯದ್‌ ನಜೀರುದ್ದೀನ್‌ ಖಾದ್ರಿ, ಪುರಸಭೆಯ ಕೆಲವು ಸದಸ್ಯರು ಈಚೆಗೆ ತನುಶ್ರೀ ಅವರಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದಾರೆ.

ಶಾಸಕರಿಗೆ ಟಿಕೆಟ್‌ ನೀಡುವುದು ಖಚಿತ ಎನ್ನುವ ಭರವಸೆಯನ್ನು ಹಂಪಯ್ಯ ನಾಯಕ ಬೆಂಬಲಿಗರು ಹೊಂದಿದ್ದಾರೆ. ಮುಖ್ಯಮಂತ್ರಿಗೆ ಆಪ್ತರಾಗಿರುವ ಕಾರಣ ಈರಣ್ಣ ಅವರ ಸೊಸೆಗೆ ಟಿಕೆಟ್‌ ಸಿಗುವ ಖಾತ್ರಿ ಅತೃಪ್ತ ಕಾಂಗ್ರೆಸ್‌ ಮುಖಂಡರಿಗೆ ಇದೆ. ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ತನುಶ್ರೀ ಅವರನ್ನು ಕಣಕ್ಕಿಳಿಸುವುದು ಖಚಿತ ಎಂದು ಕ್ಷೇತ್ರಾದ್ಯಂತ ಬಹಿರಂಗ ಸಭೆಗಳಲ್ಲಿ ಮುಖಂಡರು ಘೋಷಣೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕತ್ವ ಮತ್ತು ರಾಜಕೀಯ ಹಿಡಿತ ಬದಲಾಗಲೇಬೇಕು ಎಂದು ಹೇಳುತ್ತಿದ್ದಾರೆ.

ಕ್ಷೇತ್ರದಲ್ಲಿ ನಾಯಕ, ಕುರುಬ, ಲಿಂಗಾಯತ, ದಲಿತ ಸಮುದಾಯದ ಮತದಾರರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ನಾಯಕ ಸಮುದಾಯದ ಹಂಪಯ್ಯ ನಾಯಕ ಹಾಗೂ ಕುರುಬ ಸಮುದಾಯದ ಈರಣ್ಣ ನಡುವಿನ ಪೈಪೋಟಿ ಕಾಂಗ್ರೆಸ್‌ನಲ್ಲಿ ತಳಮಳವನ್ನು ಸೃಷ್ಟಿಸಿದೆ.

**

ಡಾ.ತನುಶ್ರೀ ಅವರಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಸಿಗುವ ಭರವಸೆ ಇದೆ. ಟಿಕೆಟ್‌ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ –ಎಂ.ಈರಣ್ಣ ಗುತ್ತೇದಾರ, ಕಾಂಗ್ರೆಸ್ ಪಕ್ಷದ ಮುಖಂಡ.

**

–ಬಸವರಾಜ ಭೋಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT