ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ. ಪ್ಯಾಟ್‌ ಜೋಡಣೆ, ಕಾರ್ಯ ವಿಧಾನ ಅರಿಯಿರಿ

ಚುನಾವಣೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ
Last Updated 11 ಏಪ್ರಿಲ್ 2018, 11:19 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಮತಗಟ್ಟೆಗಳಲ್ಲಿ ಮತದಾನಕ್ಕಾಗಿ ಬಳಸುವ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ಮತ ಖಾತರಿ ಯಂತ್ರ (ವಿ.ವಿ.ಪ್ಯಾಟ್) ಬಳಕೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಹೊಂದಿರಬೇಕು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಇವಿಎಂ ಮತ್ತು ವಿ.ವಿ.ಪ್ಯಾಟ್ ಜೋಡಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿಂದಿನ ಚುನಾವಣೆಗಳಲ್ಲಿ ಬ್ಯಾಲೆಟ್ ಯುನಿಟ್ ಜತೆಗೆ ಕಂಟ್ರೋಲ್ ಯುನಿಟ್ ನೇರವಾಗಿ ಜೋಡಣೆ ಮಾಡಿ ಮತಯಂತ್ರಗಳನ್ನು ಮತದಾನಕ್ಕೆ ಸಿದ್ಧಗೊಳಿಸಲಾಗುತ್ತಿತ್ತು. ಆದರೆ, ಈ ಬಾರಿ ವಿ.ವಿ.ಪ್ಯಾಟ್ ಅಳವಡಿಸಬೇಕಾಗಿದೆ. ಈ ಜೋಡಣೆ ಪ್ರಕ್ರಿಯೆಯನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ಇದಕ್ಕಾಗಿ ನಿಖರವಾದ ಕೇಬಲ್‌ಗಳನ್ನು ನೀಡಲಾಗಿದೆ’ ಎಂದರು.

‘ಇವಿಎಂ ಮಸ್ಟರಿಂಗ್ ಆದ ನಂತರ ‘ಪೊಲಿಂಗ್ ಪಾರ್ಟಿ’ಗಳು ಮತಯಂತ್ರಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗಲಿದ್ದಾರೆ. ‘ಪ್ರಿಸೈಡಿಂಗ್’ ಅಧಿಕಾರಿಗಳು ಕಡ್ಡಾಯವಾಗಿ ಕಂಟ್ರೋಲ್ ಯುನಿಟ್ ಪ್ರಾರಂಭಿಸಿ ಮತಪತ್ರದಲ್ಲಿರುವ ಎಲ್ಲ ಅಭ್ಯರ್ಥಿಗಳು ದಾಖಲಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ನಿಯಂತ್ರಣಾ ಘಟಕ (ಕಂಟ್ರೋಲ್ ಯುನಿಟ್‌) ಬಂದ್‌ ಮಾಡಿಯೇ ಮತಗಟ್ಟೆಗಳಿಗೆ ರವಾನಿಸಬೇಕು’ ಎಂದರು.

‘ಮತದಾನಕ್ಕೂ ಮೊದಲೇ ಎಲ್ಲ ಮತಗಟ್ಟೆಗಳಲ್ಲಿ ಆಯಾ ಪಕ್ಷದ ಏಜೆಂಟರ ಸಮ್ಮುಖದಲ್ಲಿ 50 ಅಣುಕು ಮತದಾನ ಕೈಗೊಳ್ಳಲು ಅವಕಾಶಗಳಿವೆ. ಈ ಪ್ರಕ್ರಿಯೆ ಕೈಗೊಂಡು ವಿ.ವಿ. ಪ್ಯಾಟ್‌ನಲ್ಲಿ ಮತದಾನ ಮಾಡಿದ ಅಭ್ಯರ್ಥಿಗೆ ಮತ ಚಲಾವಣೆಯಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ನಂತರ ಕಡ್ಡಾಯವಾಗಿ ನಿಯಂತ್ರಣಾ ಘಟಕದಲ್ಲಿ ದಾಖಲಾಗಿರುವ ಮತಗಳನ್ನು ತೆಗೆದು ಹಾಕಿ ಮತ್ತೆ ಮತದಾನಕ್ಕೆ ಸಿದ್ಧಗೊಳಿಸಬೇಕು’ ಎಂದು ಅವರು ಸೂಚಿಸಿದರು.

‘ಅಣುಕು ಮತದಾನದ ಸಮಯದಲ್ಲಿ ನಿಯಂತ್ರಣಾ ಘಟಕದಲ್ಲಿ ದೋಷ ಕಂಡುಬಂದರೆ ಎಲ್ಲ ಯಂತ್ರಗಳನ್ನು ಬದಲಿಸಬೇಕು’ ಎಂದು ಸಲಹೆ ನೀಡಿದರು.‘ವಿ.ವಿ. ಪ್ಯಾಟ್ ಅತಿ ಸೂಕ್ಷ್ಮ ಯಂತ್ರವಾಗಿದೆ. ಮತಗಟ್ಟೆಯಲ್ಲಿ ಹೆಚ್ಚು ಶಾಖ ಅಥವಾ ಬೆಳಕು ಇದ್ದ ಜಾಗದಲ್ಲಿ ಇಡಬಾರದು. ವಿ.ವಿ. ಪ್ಯಾಟ್ ಯಂತ್ರದ ಬ್ಯಾಟರಿ ಶಕ್ತಿ ಕಡಿಮೆಯಾದಾಗ ಬ್ಯಾಟರಿ ಮಾತ್ರ ಬದಲಿಸಬಹುದು. ಉಳಿದ ತೊಂದರೆಗಳು ಕಂಡುಬಂದಲ್ಲಿ ಯಂತ್ರವನ್ನೇ ಬದಲಿಸಬೇಕು’ ಎಂದರು.

ಭಾರತ ಇಲೆಕ್ಟ್ರಿಕಲ್‌ ಲಿಮಿಟೆಡ್‌ನ ನರೇಂದ್ರ ಕೌಶಿಕ ಅವರು ಮತದಾನ ಮತ್ತು ವಿ.ವಿ.ಪ್ಯಾಟ್ ಜೋಡಣೆ, ಅವುಗಳ ತೊಂದರೆ ನಿವಾರಣೆ ಕುರಿತು ವಿವರ ತರಬೇತಿ ನೀಡಿದರು. ಬಿ.ಇ.ಎಲ್. ಎಂಜಿನಿಯರ್ ಶಿವಕುಮಾರ, ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ, ಮಾಸ್ಟರ್ ತರಬೇತಿದಾರ ಶಶಿಶೇಖರ ರಡ್ಡಿ ಇದ್ದರು. ಎಲ್ಲ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮತಯಂತ್ರ ಜೋಡಣೆಯ ತರಬೇತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT