ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರೇ ಬಾಳೆ ಬೆಳೆಗೆ ಆಸರೆ

ಶಾಖಾಪುರ: ಬೇಸಿಗೆಯಲ್ಲೂ ರೈತ ಮಾನಪ್ಪ ಬಡಿಗೇರ ಅವರ ಕೈಹಿಡಿದ ಕೃಷಿಹೊಂಡ
Last Updated 13 ಏಪ್ರಿಲ್ 2018, 12:37 IST
ಅಕ್ಷರ ಗಾತ್ರ

ಕುಷ್ಟಗಿ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಗುಬ್ಬಚ್ಚಿಗಳಿಗೆ ಹನಿ ನೀರು ಸಿಗದಂತಹ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಶಾಖಾಪುರ ಗ್ರಾಮದ ಮಾನಪ್ಪ ಬಡಿಗೇರ ಅವರು ಕೃಷಿ ಹೊಂಡದ ನೀರಿನಲ್ಲಿಯೇ ಬಾಳೆ ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅನುಷ್ಠಾನಗೊಳ್ಳುತ್ತಿರುವ ಕೃಷಿಭಾಗ್ಯ ಯೋಜನೆ ರೈತರ ಪಾಲಿಗೆ ವರವಾಗಿ ಪರಿಣಿಮಿಸಿದ್ದು , ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಿದೆ ಮತ್ತು ಪಶು ಪಕ್ಷಿಗಳಿಗೂ ನೀರಿನ ಆಸರೆ ಒದಗಿಸಿದೆ. ಕೆಲ ರೈತರು ಸಂಗ್ರಹವಾಗಿರುವ ನೀರನ್ನು ಬೆಳೆಸಿಕೊಂಡು ಬೆಳೆ ಬೆಳೆದು ಯಶಸ್ವಿಯಾಗಿರುವ ಹಲವು ಉದಾಹರಣೆಗಳಿವೆ.

ಕೃಷಿ ಹೊಂಡದಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ನೀರು ಭರ್ತಿಯಾಗಿತ್ತು. ಈಗ ಬೇಸಿಗೆಯಲ್ಲೂ ನೀರು ಇದ್ದು, ಅದನ್ನು ಬಳಸಿಕೊಂಡು ಬಾಳೆ ಬೆಳೇದಿದ್ದೇನೆ. ಮೂರು ಕೊಳವೆಬಾವಿಗಳು ಇದ್ದರೂ ಅಂತರ್ಜಲ ಕಡಿಮೆಯಾಗಿದೆ. ಕೃಷಿಹೊಂಡ ಬಹಳ ಉಪಯುಕ್ತವಾಗಿದೆ ಎಂದು ಮಾನಪ್ಪ ಸಂತಸ ವ್ಯಕ್ತಪಡಿಸಿದರು.

ಸುಮಾರು ಒಂದು ಎಕರೆಯಲ್ಲಿ ಸದ್ಯ 4 ತಿಂಗಳ ಅವಧಿಯ ಜಿ.9 ತಳಿ ಬಾಳೆ ಬೆಳೆಯಲಾಗಿದೆ. ಕೃಷಿ ಹೊಂಡದ ನೀರನ್ನು ಹದವರಿತು ಹರಿಸಲಾಗುತ್ತಿದೆ. ಹೊಂಡದ ನೀರು ಸ್ವಲ್ಪ ಪ್ರಮಾಣದಲ್ಲಿ ರಾಡಿ ಮಿಶ್ರಿತವಾಗಿರುವುದರಿಂದ ಹನಿ ನೀರಾವರಿ ಬದಲಾಗಿ ಎಂಜಿನ್‌ ಮೂಲಕ ನೇರವಾಗಿ ಜಮೀನಿಗೆ ಹರಿಸಲಾಗುತ್ತಿದೆ. ಉತ್ತಮ ಮಳೆಯಾದರೆ ಹೊಂಡ ಮತ್ತೆ ತುಂಬಬಹುದು ಎನ್ನುತ್ತಾರೆ ಅವರು.

ಹೊಂಡದ ಮಹತ್ವ: ಕೃಷಿ ಹೊಂಡಗಳ ಮಹತ್ವ ರೈತರಿಗೆ ಅರಿವಾಗುತ್ತಿದೆ. ಕೃಷಿ ಇಲಾಖೆ ಅದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಸಮುದಾಯ ಆಧಾರಿತ ಬಳಕೆ ಉದ್ದೇಶದಿಂದ ಮಾನಪ್ಪ ಬಡಿಗೇರ ಅವರ ಪಾಳು ಜಮೀನಿನಲ್ಲಿ ಪ್ರಧಾನಮಂತ್ರಿ ‘ಕೃಷಿ ಸಿಂಚಾಯಿ ಯೋಜನೆ’ (ಪಿಎಂಕೆಎಸ್‌ವೈ) ಯೋಜನೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಗೋಕಟ್ಟು ನಿರ್ಮಿಸಲಾಗಿದೆ. ಪಕ್ಕದಲ್ಲಿಯೇ ಹಳ್ಳ ಇದ್ದು, ಉತ್ತಮ ಮಳೆ ಬಂದು ಹಳ್ಳಕ್ಕೆ ನೀರು ಬಂದರೆ ಅದನ್ನೇ ಗೋಕಟ್ಟೆಗೆ ತಿರುಗಿಸುವ ವ್ಯವಸ್ಥೆ ಮಾಡಲಾಗಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಗೋಕಟ್ಟು ಭರ್ತಿಯಾದರೆ ಕನಿಷ್ಠ ಒಂದು ವರ್ಷದವರೆಗೆ ಮಳೆ ಬಾರದಿದ್ದರೂ ಹೊಂಡದಲ್ಲಿ ನೀರು ಇರುತ್ತದೆ. ಇದರಿಂದ ಸುತ್ತಲಿನ ಇತರೆ ರೈತರ ಕೊಳವೆಬಾವಿಗಳಲ್ಲಿ ಜೀವಸೆಲೆ ಜಿನುಗುತ್ತದೆ ಎಂಬ ಆಶಾ ಭಾವನೆ ಇಲಾಖೆಯದ್ದಾಗಿದೆ.

ಬರಕ್ಕೆ ವರ: ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಈಚಿನ 16 ವರ್ಷಗಳಲ್ಲಿ 11 ವರ್ಷ ಬರ ಬಿದ್ದಿತ್ತು. ಅಂತರ್ಜಲ ಕೊರತೆಯಿಂದ ಕೊಳವೆಬಾವಿಗಳಲ್ಲಿ ನೀರು ಬತ್ತಿದೆ. ನೀರಾವರಿ ಪ್ರದೇಶ ಅರ್ಧದಷ್ಟು ಕಡಿಮೆಯಾಗಿದೆ. ಹಾಗಾಗಿ ಮಳೆ ನೀರಿನ ಸಂರಕ್ಷಣೆ ತೀರಾ ಅಗತ್ಯವಾಗಿದೆ.

ಕೃಷಿಹೊಂಡ, ಚೆಕ್‌ಡ್ಯಾಂ, ಗೋಕಟ್ಟುಗಳಲ್ಲಿ ನೀರು ಸಂಗ್ರಹವಾದರೆ ಬತ್ತಿದ ಬಾವಿಗಳಿಗೆ ಮರುಜೀವ ಬರುತ್ತದೆ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ವೀರಣ್ಣ ಕಮತರ. ಕೆಂಪು ಜಮೀನಿನಲ್ಲಿ ಹೊಂಡಗಳು ಹೆಚ್ಚಾಗಬೇಕು. ಆದರೆ, ಅಲ್ಲಿಯ ರೈತರು ಆಸಕ್ತಿ ತೋರುತ್ತಿಲ್ಲ ಎಂದರು.

**

ಮಳೆ ನೀರಿನ ಸಂರಕ್ಷಣೆಯೊಂದೇ ಈಗ ಉಳಿದಿರುವ ದಾರಿ. ಹೆಚ್ಚು ಕೃಷಿ ಹೊಂಡಗಳು ನಿರ್ಮಾಣವಾದರೆ ನೀರಿನ ಸಮಸ್ಯೆ ನಿವಾರಣೆ ಸಾಧ್ಯ –  ವೀರಣ್ಣ ಕಮತರ, ಸಹಾಯಕ ಕೃಷಿ ನಿರ್ದೇಶಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT