ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವ ತಂದವರು…ನೋವು ಉಂಡವರು!

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

* ಚಿತ್ರ: ಅಕ್ಟೋಬರ್‌ (ಹಿಂದಿ)
* ನಿರ್ಮಾಣ: ರಾನಿ ಲಾಹಿರಿ, ಶೀಲ್ ಕುಮಾರ್
* ನಿರ್ದೇಶನ: ಶೂಜಿತ್ ಸರ್ಕಾರ್
* ತಾರಾಗಣ: ವರುಣ್ ಧವನ್, ಬನಿತಾ ಸಂಧು, ಗೀತಾಂಜಲಿ ರಾವ್

ಮರದಿಂದ ಉದುರಿದ ಪಾರಿಜಾತಗಳನ್ನು ನಾಯಕಿ ನವಿರಾಗಿ ಹೆಕ್ಕುತ್ತಾಳೆ. ಒಂದನ್ನು ಆಘ್ರಾಣಿಸಿ, ಉಳಿದೆಲ್ಲವನ್ನೂ ಬಟ್ಟಲಲ್ಲಿ ಹಾಕಿಕೊಂಡು ತಾನು ತರಬೇತಿ ಪಡೆಯಲೆಂದು ಸೇರಿದ ಹೋಟೆಲ್ ಕೋಣೆಯ ಮೇಜಿನ ಮೇಲೆ ಇಡುತ್ತಾಳೆ. ಜೋಭದ್ರನಂತೆ ಮಲಗಿದ ನಾಯಕ ತನಗರಿವೆಯೇ ಇಲ್ಲದಂತೆ ಹೂಬಟ್ಟಲನ್ನು ಕೆಳಗೆ ಬೀಳಿಸುತ್ತಾನೆ. ‘ಇದನ್ನು ಎತ್ತಿಡಬಾರದಿತ್ತೆ’ ಎಂದಷ್ಟೇ ಹೇಳಿ ನಾಯಕಿ, ಇಷ್ಟದ ಹೂಗಳನ್ನು ತುಂಬತೊಡಗುತ್ತಾಳೆ. ಮತ್ತೆ ನಾಯಕ ನಿದ್ರೆಗೆ.

ನಾಯಕಿ ಮೂರನೇ ಮಹಡಿಯಿಂದ ಆಯತಪ್ಪಿ ಬೀಳುತ್ತಾಳೆ. ಮಿದುಳಿಗೆ ದೊಡ್ಡ ಪೆಟ್ಟು. ಪಾರಿಜಾತದ ಹೂಗಳನ್ನು ಬೀಳಿಸಿದ ನಾಯಕನ ಮನಸ್ಸು ಈಗ ನಾಯಕಿಯ ಆರೈಕೆಯಲ್ಲಿ ತಂತಾನೇ ತೊಡಗಿಕೊಳ್ಳುತ್ತದೆ. ತನ್ನ ವೃತ್ತಿಬದುಕು ರೂಪಿಸಿಕೊಳ್ಳುವುದನ್ನೂ ಬದಿಗೊತ್ತಿ, ಅವಳ ಲೋಕದ ಭಾಗವಾಗುವ ಅವನ ಮುಗ್ಧ ಪ್ರೇಮ ಮೀಟುವುದು ಎದೆಯ ತಂತಿಯ.

ಸಣ್ಣ ಸಣ್ಣ ವಿವರಗಳಲ್ಲಿ ದೊಡ್ಡದೇನನ್ನೋ ಹೇಳಲು ಹೊರಡುವುದು ನಿರ್ದೇಶಕ ಶೂಜಿತ್ ಸರ್ಕಾರ್ ಸಿನಿಮಾಗಳ ಸಾಮಾನ್ಯ ಉಮೇದು. ‘ವಿಕಿ ಡೋನರ್’ನಲ್ಲಿ ವೀರ್ಯದಾನಿ ಯುವಕನ ಕಥನವನ್ನು, ‘ಪೀಕು’ವಿನಲ್ಲಿ ಮಲಬದ್ಧತೆ ಸಮಸ್ಯೆ ಇರುವ ವ್ಯಕ್ತಿ ಹಾಗೂ ಆತನ ಸುತ್ತಲಿನ ಪಾತ್ರಗಳ ವರ್ತನೆಯನ್ನು ನವಿರಾಗಿ ತೆರೆದಿಡುತ್ತಲೇ ಇನ್ನೂ ಏನೇನನ್ನೋ ಹೇಳಿದ್ದ ಶೂಜಿತ್, ಈ ಸಿನಿಮಾದಲ್ಲಿ ಮನುಷ್ಯತ್ವದ ಬೆಳ್ಳಿಮಿಂಚು ಕಾಣಿಸಿದ್ದಾರೆ.

ತಿಂಗಳುಗಟ್ಟಲೆ ಪ್ರಜ್ಞೆಯಿಲ್ಲದೆ ಹಾಸಿಗೆ ಮೇಲೆ ಮಲಗಿದ ನಾಯಕಿಯ ಆತ್ಮಸಂಗಾತಿ ನಾಯಕನ ಪಾತ್ರವನ್ನು ಅವರು ಕಟದಿದ್ದಾರೆ. ಚಿತ್ರಕಥೆ ಬರೆದಿರುವ ಜೂಹಿ ಚತುರ್ವೇದಿ ಅವರಿಗೂ ಇದರ ಶ್ರೇಯಸ್ಸಿನ ದೊಡ್ಡ ಪಾಲು ಸಲ್ಲಬೇಕು. ಜೂಹಿ ಬರೆದಿರುವ ಮಾತುಗಳು ಹರಿತವಾಗಿವೆ. ಮಿತವಾಗಿವೆ. ಎಷ್ಟು ಬೇಕೋ ಅಷ್ಟೇ ವ್ಯಂಗ್ಯವಿದೆ. ತಮಾಷೆಯಲ್ಲೂ ಇತಿಮಿತಿ. ಅವರು ಬರೆದದ್ದನ್ನು ಎತ್ತಿಕೊಂಡು, ಶೂಜಿತ್ ಶಾಟ್ ಗಳನ್ನು ರೂಪಿಸಿರುವುದರಲ್ಲಿನ ಶಿಲ್ಪ ಬಿಗಿಯಾಗಿದ್ದು, ಭಾವತೀವ್ರತೆಯನ್ನು ಢಾಳಾಗಿ ತೋರಿಸಿದೆ.

ಬದುಕುವುದೇ ಅನುಮಾನ ಎಂಬ ಸ್ಥಿತಿಯ ಇಪ್ಪತ್ತೊಂದು ವಯಸ್ಸಿನ ನಾಯಕಿ ಹಾಗೂ ಅವಳ ತಾಯಿಯ ಪಾತ್ರಗಳೂ ಇಲ್ಲಿ ವಿಪರೀತ ಗಟ್ಟಿಯಾಗಿವೆ. ನಾಯಕಿಯ ತಾಯಿ ಕಂಪಿಸುವಾಗಲೆಲ್ಲ ಉಢಾಳನಂತೆ ಕಂಡೂ ಹೃದಯಶ್ರೀಮಂತಿಕೆ ಮೆರೆಯುವ ನಾಯಕ ಟಾನಿಕ್ ನಂತೆ ಒದಗಿಬರುತ್ತಾನೆ. ಕೊನೆಗೂ ‘ಪಾರಿಜಾತದಂಥ ನಾಯಕಿ’ ಬದುಕುವುದಿಲ್ಲ. ಆದರೆ, ಅವಳು ನೆಟ್ಟ ಹೂಗಿಡ ನಾಯಕನ ಪಾಲಿಗೆ; ಹೂಬಟ್ಟಲ ಬೀಳಿಸಿದ್ದ ಅದೇ ಜೋಭದ್ರನಿಗೆ.

ಅವಿಕ್ ಮುಖ್ಯೋಪಾಧ್ಯಾಯ್ ಸೃಜಿಸಿದ ಕ್ಲೋಸಪ್ ಶಾಟ್ ಗಳು ಪಾತ್ರಗಳ ಕಣ್ಣ ಭಾವನೆಗಳನ್ನು ಹೃದಯಕ್ಕೆ ನಾಟಿಸುವಷ್ಟು ಶಕ್ತವಾಗಿವೆ. ಒಂದು ಕಾಲದಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ್ದ ವರುಣ್ ಧವನ್, ಈಗ ನಟನಾಗಿ ಹೆಚ್ಚೇ ಮಾಗಿದ್ದಾರೆ. ಅವರ ವೃತ್ತಿಬದುಕಿನಲ್ಲೇ ಇದುವರೆಗಿನ ಶ್ರೇಷ್ಠ ಅಭಿನಯ ಈ ಸಿನಿಮಾದಲ್ಲಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಮೊದಲ ಚಿತ್ರದಲ್ಲೇ ಬನಿತಾ ಸಂಧು ಅವರದ್ದು ಹಾಸಿಗೆ ಹಿಡಿದ ನಾಯಕಿಯಾಗಿ ಗಮನ ಸೆಳೆಯುವ ಅಭಿನಯ. ಅವರ ತಾಯಿಯ ಪಾತ್ರಧಾರಿ ಗೀತಾಂಜಲಿ ರಾವ್ ನೇತ್ರಾಭಿನಯಕ್ಕೆ ಹ್ಯಾಟ್ಸಾಫ್.

ಹೂವ ತಂದವರ ರೂಪಕ ಇಷ್ಟಪಡುವ ಮನಸ್ಸುಗಳಿಗೆ ಈ ಆತ್ಮಸಂಗಾತದ ಕಥನ ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಒಂದಿಷ್ಟು ಪ್ರಶ್ನೆಗಳನ್ನು ಎಸೆದೇ ಕಣ್ಣಂಚಿನಲ್ಲಿ ನೀರು ಮೂಡಿಸುವ ಶೂಜಿತ್ ಸಾವಧಾನಕ್ಕೆ ಸಲಾಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT