ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಮಾನವತಾವಾದಿಗೆ ಎಲ್ಲೆಡೆ ನಮನ

ನಗರದ ವಿವಿಧೆಡೆ ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜನೆ
Last Updated 15 ಏಪ್ರಿಲ್ 2018, 6:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ವಿವಿಧೆಡೆ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸುವ ಮೂಲಕ ದಮನಿತರ ಏಳಿಗೆಗೆ ಶ್ರಮಿಸಿದ ಮಹಾ ಮಾನವತಾವಾದಿಗೆ ನಮನ ಸಲ್ಲಿಸಲಾಯಿತು.

ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ನಗರದ ಮೆಟ್ರಿಕ್‌ ನಂತರದ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಅಂಬೇಡ್ಕರ್‌್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಹೆಗಡೆ, ಎಸ್ಪಿ ಕಾರ್ತಿಕ್ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜ್‍ಆನಂದರೆಡ್ಡಿ, ಸಹಾಯ ನಿರ್ದೇಶಕ ಶೇಷಾದ್ರಿ ಹಾಗೂ ದಲಿತ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

ವಿವಿಧ ಗಣ್ಯರಿಂದ ಮಾಲಾರ್ಪಣೆ

ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಸುಧಾಕರ್ ಸೇರಿದಂತೆ ಅನೇಕ ಮುಖಂಡರು ಮಾಲಾರ್ಪಣೆ ಮಾಡಿದರು.

ತಾಲ್ಲೂಕಿನ ಕೇಶವಾರ ಗ್ರಾಮದಲ್ಲಿ ಚುನಾನಣಾ ಪ್ರಚಾರದಲ್ಲಿ ಮಾತನಾಡಿದ ಸುಧಾಕರ್, ‘ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆಗಳಿದ್ದರೂ ಸಮಾಜದಲ್ಲಿ ಇವತ್ತಿಗೂ ಶಾಂತಿ, ನೆಮ್ಮದಿ ನೆಲೆಸಿರುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನದ ಕಾರಣದಿಂದಲೇ’ ಎಂದು ತಿಳಿಸಿದರು.

‘ಅಂಬೇಡ್ಕರ್‌ ಅವರು ಎಲ್ಲರಿಗೂ ಸಮಾನ ಹಕ್ಕು, ಅವಕಾಶ ಕಲ್ಪಿಸುವ ಮೂಲಕ ಮನುಕುಲ ಅಭಿವೃದ್ಧಿಗೆ ಶ್ರಮಿಸಿದರು. ಬಡವ, ಶ್ರೀಮಂತನಿಗೂ ಒಂದೇ ಮತ. ತಮ್ಮ ಮತದಿಂದ ಉತ್ತಮ ಸರ್ಕಾರ ರಚಿಸುವ ಅಧಿಕಾರ ಮತದಾರರ ಕೈಯಲ್ಲಿದೆ. ಆಮಿಷಗಳಿಗೆ ಬಲಿಯಾಗಿ ಮತ ಮಾರಿಕೊಳ್ಳಬೇಡಿ ಎಂದು ಅವರು ಪ್ರತಿಪಾದಿಸುತ್ತಿದ್ದರು. ಅವರ ಆದರ್ಶಗಳು ಇಂದಿನ ಯುವ ಜನರಿಗೆ ಮಾದರಿಯಾಗಿವೆ’ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಮುಖಂಡರಾದ ಮುರಳಿ, ಬಚ್ಚೇಗೌಡ, ರಾಮಣ್ಣ, ಸತೀಶ್‌, ಮಂಜುನಾಥ್‌, ವೆಂಕಟೇಶ್, ಕೃಷ್ಣಪ್ಪ, ರಾಮಾಂಜಿನಪ್ಪ, ಚಿಕ್ಕರಾಜಪ್ಪ ಇದ್ದರು.

ಎಬಿವಿಪಿ ವತಿಯಿಂದ ಅಂಬೇಡ್ಕರ್ ಸ್ಮರಣೆ

ನಗರದ ಗೋಲ್ಡನ್ ಗ್ಲೀಮ್ಸ್ ಪದವಿ ಕಾಲೇಜಿನಲ್ಲಿ ಎ.ಬಿ.ವಿ.ಪಿ ವತಿಯಿಂದ ಶನಿವಾರ ಅಂಬೇಡ್ಕರ್‌ 127 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ವಿಕ್ರಂ ರೆಡ್ಡಿ, ‘ಅಂಬೇಡ್ಕರ್‌ ಅವರು ಜ್ಞಾನದ ಪ್ರತೀಕದಂತೆ ಇದ್ದರು. ಪ್ರತಿಯೊಬ್ಬರೂ ಜ್ಞಾನದ ಹಸಿವು ನೀಗಿಸಿಕೊಳ್ಳಲು ಅಂಬೇಡ್ಕರ್‌ ಅವರ ತತ್ವ, ಸಿದ್ದಾಂತಗಳನ್ನು ಅರಿಯುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಅಂಬೇಡ್ಕರ್‌ ಅವರು ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸಿದ್ದಾರೆ. ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ, ತಾರತಮ್ಯ , ಮೇಲು– ಕೀಳು, ಜಾತಿ ಪದ್ಧತಿ ಹೋಗಲಾಡಿಸಿದರೆ ಮಾತ್ರ ಅಂಬೇಡ್ಕರ್ ಅವರ ಕನಸು ಈಡೇರಿಸಲು ಸಾಧ್ಯ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಮುನಿಕೃಷ್ಣ ಮಾತನಾಡಿ, ‘ಪೋಷಕರು ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ವಿದ್ಯಾರ್ಥಿಗಳು ಅಂಬೇಡ್ಕರ್‌ ಅವರಂತಹ ಅನೇಕ ಮಹನೀಯರ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಅದನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು. ಎಬಿವಿಪಿ ವಿಭಾಗ ಸಂಚಾಲಕ ಮಂಜುನಾಥ್‌ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT