ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಒ ಅಮಾನತಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರ ಧರಣಿ

ಮಾಜಿ ಪ್ರಧಾನಿ ವಾಜಪೇಯಿ ಅನಾರೋಗ್ಯ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ತಾತ್ಕಾಲಿಕ ಹಿಂದಕ್ಕೆ
Last Updated 16 ಆಗಸ್ಟ್ 2018, 12:16 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲಾ ಪಂಚಾಯ್ತಿ ಸಿಇಒ ಅಗೌರವ ತೊರಿದ್ದಾರೆ ಎಂದು ಆರೋಪ ಮಾಡಿ ಅವರ ವರ್ಗಾವಣೆಗೆ ಪಟ್ಟು ಹಿಡಿದು ಸದಸ್ಯರು ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಧರಣಿ ಗುರುವಾರ ತಾರಕಕ್ಕೇರಿತು.

ದುರ್ವರ್ತನೆ ಮತ್ತು ಅಗೌರ ಆರೋಪ ಮಾಡುತ್ತಿದ್ದ ಸದಸ್ಯರು, ಗುರುವಾರ ಸಿಇಒ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು. ಜತೆಗೆ ಕಳೆದ ಮೂರು ದಿನಗಳಿಂದ ಸಿಇಒ ವರ್ಗಾವಣೆಗೆ ಪಟ್ಟು ಹಿಡಿದಿದ್ದ ಸದಸ್ಯರು, ಗುರುವಾರ ಅವರನ್ನು ಅಮಾನತು ಮಾಡುವಂತೆ ಆಗ್ರಹಪಡಿಸಿದರು.

ಜಿಲ್ಲಾ ಪಂಚಾಯ್ತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಿಂದ ಹೊರನಡೆದು ಸಭೆಗೆ ಅಗೌರ ತೋರಿದ್ದಾರೆ ಮತ್ತು ಸದಸ್ಯರ ಯಾವುದೇ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಕಳೆದ ನಾಲ್ಕು ದಿನಗಳಿಂದ ಜಿಲ್ಲಾ ಪಂಚಾಯ್ತಿ ಚುನಾಯಿತಿ ಪ್ರತನಿಧಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಇವರ ಧರಣಿಗೆ ಬೆಂಬಲ ಸೂಚಿಸಲು ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಜಿಲ್ಲಾ ಪಂಚಾಯ್ತಿಗೆ ಬಂದಾಗ ಒಳಗೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ.

ಇದರಿಂದಾಗಿ ಪೊಲೀಸರು ಮತ್ತು ಜನಪ್ರತಿನಿಧಿಗಳ ನಡುವೆ ವಾಗ್ವಾದ ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ಜಟಾಪಟಿ ನಡೆಯಿತು. ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಈರಣ್ಣ ಜಡಿ ಮತ್ತು ಪಕ್ಷದ ಕೆಲ ಮುಖಂಡರು ಮಾತುಕತೆ ನಡೆಸಿದರು. ಇದೇ ವೇಳೆ ಸ್ಥಳಕ್ಕೆ ಬಂದ ಕಾಂಗ್ರೆಸ್‌ ಶಾಸಕ ಸಿ.ಎಸ್.ಶಿವಳ್ಳಿ ಮತ್ತು ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಬಿಜೆಪಿ ಶಾಸಕ ಅಮೃತ ದೇಸಾಯಿ ಬಂದು ಧರಣಿ ನಿರತ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು.

ಸಿಇಒ ಸ್ನೇಹಲ್ ರಾಯಮಾನೆ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರ ಜತೆ ಪ್ರತ್ಯೇಕ ಮಾತುಕತೆ ನಡೆಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಸದ್ಯಕ್ಕೆ ಧರಣಿ ಕೈಬಿಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸದಸ್ಯರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ‘ಯಾವುದೇ ಅನುಮತಿ ಪಡೆಯದೇ ತಮ್ಮ ಹುದ್ದೆ ಮೀರಿ ₹20ಲಕ್ಷದ ಕಾರನ್ನು ಸಿಇಒ ಖರೀದಿಸಿದ್ದಾರೆ. ತಮ್ಮ ನಿವಾಸದ ಮೇಲ್ಛಾವಣಿ ದುರಸ್ತಿಗೆ ₹5ಲಕ್ಷ ಖರ್ಚು ಮಾಡಿದ್ದಾರೆ. ಹುಬ್ಬಳ್ಳಿ ಇಒ ರಾಮಚಂದ್ರ ಹೊಸಮನಿ ಹಾಗೂ ಎಂಜನಿಯರಿಂಗ್ ವಿಭಾಗದ ಅಧಿಕಾರಿ ವರ್ಗಾವಣೆಗೆ ಆದೇಶವಿದ್ದರೂ ಮಾಡಲಿಲ್ಲ. ಇದಕ್ಕೆ ಪ್ರತಿಯಾಗಿ ಅವರು ಸಿಇಒ ಅವರಿಗೆ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಹೀಗಾಗಿ ಸಿಇಒ ಅವರನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT