ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ವಿಚಾರಗಳಿಂದ ಭಾರತ ವಿಶ್ವಗುರು

ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ದೇವರು ಅಭಿಮತ
Last Updated 16 ಏಪ್ರಿಲ್ 2018, 9:00 IST
ಅಕ್ಷರ ಗಾತ್ರ

ಕಲಬುರ್ಗಿ: ದೇಶ ಆಳುವವರು ಬಸವಣ್ಣನ ವಿಚಾರಗಳನ್ನು ಅಳವಡಿಸಿಕೊಂಡರೆ ಭಾರತ ವಿಶ್ವಕ್ಕೇ ಗುರುವಾಗಲಿದೆ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ದೇವರು ಹೇಳಿದರು.

ಜಿಲ್ಲಾಡಳಿತದ ಆಶ್ರಯದಲ್ಲಿ ಇಲ್ಲಿನ ಜಗತ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 885ನೇ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ವಚನಗಳಲ್ಲಿದೆ. ನಮ್ಮ ನಾಯಕರು ಅವುಗಳನ್ನು ಪಾಲಿಸಬೇಕಾಗಿದೆ. ಎಲ್ಲರೂ ನಮ್ಮವರು ಎಂಬ ಮನೋಭಾವ ಅವರಲ್ಲಿ ಮೂಡಬೇಕಾಗಿದೆ’ ಎಂದು ಹೇಳಿದರು.

‘ಬಸವಣ್ಣ ಎಲ್ಲರನ್ನೂ ಪ್ರೀತಿಸಿದರು. ಪ್ರೀತಿಯಿಂದ ಜಗತ್ತು ಗೆಲ್ಲಬಹುದು ಎಂಬುದನ್ನು ಸಾಧಿಸಿ ತೋರಿಸಿದರು. ಮಾನವೀಯ ಮೌಲ್ಯಗಳು, ಮೇಲು–ಕೀಳು ಇಲ್ಲದ ದಾರಿಯನ್ನು ನಮಗೆ ತೋರಿಸಿದ್ದಾರೆ’ ಎಂದು ತಿಳಿಸಿದರು.

ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಮಾತ
ನಾಡಿ, ‘12ನೇ ಶತಮಾನದಲ್ಲಿಯೇ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪವೇ ಸಂಸದೀಯ ವ್ಯವಸ್ಥೆಗೆ ಪ್ರೇರಣೆ. ಅನುಭವ ಮಂಟಪದಲ್ಲಿ ಎಲ್ಲ ಸಮುದಾಯದ ಜನರಿಗೆ ಅವಕಾಶ ನೀಡಿ ಸಮಾನತೆಯ ಆಶಯವನ್ನು ಕಾರ್ಯರೂಪಕ್ಕೆ ತಂದರು. ಜನರ ಮನ ಪರಿವರ್ತನೆಯಿಂದ ಏನನ್ನಾದರೂ ಸಾಧಿಸಬಹುದಾಗಿದೆ’ ಎಂದರು.

‘ಧರ್ಮ ಗುರುಗಳ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ಬಸವತತ್ವವನ್ನು ಬರೀ ಮಾತಿನಲ್ಲಿ ಹೇಳದೆ ಆಚರಣೆಯಲ್ಲಿ ತರಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಮಾತನಾಡಿ, ‘ಲಿಂಗಾಯತರು ಈ ದೇಶದ ಮೂಲ ನಿವಾಸಿಗಳು. 12ನೇ ಶತಮಾನಕ್ಕೂ ಪೂರ್ವದಲ್ಲಿ ವಿವಿಧ ವೃತ್ತಿ, ಜಾತಿಗಳ ಸಂಕೋಲೆಯಲ್ಲಿ ಸಿಲುಕಿದ್ದವರಿಗೆ ಬಸವಣ್ಣ ಲಿಂಗ ದೀಕ್ಷೆ ನೀಡಿದರು. ಬಸವಕಲ್ಯಾಣದಲ್ಲಿ ನಡೆದಿದ್ದು ಶ್ರಮಜೀವಿಗಳ ಚಳವಳಿ’ ಎಂದು ಅಭಿಪ್ರಾಯಪಟ್ಟರು.

‘ಬುದ್ಧ, ಬಸವಣ್ಣ, ಅಂಬೇಡ್ಕರ್‌ ವಿಚಾರಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಬುದ್ಧನ ಮಿದುಳು ಹಾಗೂ ಬಸವಣ್ಣ, ಅಂಬೇಡ್ಕರ್‌ ಅವರ ವಿಚಾರಗಳು ಒಗ್ಗೂಡಿದರೆ ಸಮಾನತೆಯ ಸಮಾಜ ನಿರ್ಮಾಣದ ಕನಸು ನನಸಾಗಲಿದೆ. ಆದರೆ, ಈ ಮಹನೀಯರನ್ನು ಅಪ್ರಸ್ತುತಗೊಳಿಸುವ ಹುನ್ನಾರವನ್ನು ಪುರೋಹಿತಶಾಹಿ ನಿರಂತರವಾಗಿ ನಡೆಸುತ್ತಾ ಬಂದಿದೆ. ಅದು ಎಂದಿಗೂ ಕೈಗೂಡುವದಿಲ್ಲ’ ಎಂದು ಹೇಳಿದರು.

‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬಹಳ ವರ್ಷಗಳ ಹಿಂದೆಯೇ ಮಾನ್ಯತೆ ಸಿಗಬೇಕಾಗಿತ್ತು. ಬಸವಣ್ಣ ಹಾಗೂ ಶರಣರನ್ನು ಸಹಿಸದವರು ಇದಕ್ಕೆ ಅಡ್ಡಿಯಾಗಿದ್ದಾರೆ. ಲಿಂಗಾಯತರು ಈಗ ಎಚ್ಚೆತ್ತುಕೊಂಡಿದ್ದಾರೆ. ಯಾರಿಂದಲೂ ಪ್ರತ್ಯೇಕ ಧರ್ಮ ರಚನೆ ತಡೆಯುವುದು ಸಾಧ್ಯವಿಲ್ಲ’ ಎಂದು ನುಡಿದರು.

‘ಜಾತಿ ವಿನಾಶ, ಸಮಸಮಾಜ ನಿರ್ಮಾಣ ಆಗಬೇಕಾಗಿದೆ. ಇದಕ್ಕಾಗಿ ಬಸವ ಅನುಯಾಯಿಗಳು ಪ್ರಯತ್ನ ನಡೆಸಬೇಕು. ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕಾಗಿದೆ’ ಎಂದರು.

ಧೋತರಗಾಂವನ ಕೋರಣೇಶ್ವರ ಸ್ವಾಮೀಜಿ, ಚಿಗರಳ್ಳಿಯ ಸಿದ್ಧಬಸವ ಕಬೀರ ಸ್ವಾಮೀಜಿ, ಅಂಬಿಗರ ಚೌಡಯ್ಯ ಸಮಾಜದ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಮಾಲಗಾರ ಸಮಾಜದ ಅಧ್ಯಕ್ಷ ಬಿ.ಜಿ.ಮಣಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಅರುಣಕುಮಾರ ಎಸ್‌.ಪಾಟೀಲ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲಕುಮಾರ ಹುಡಗಿ ಇದ್ದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸುರೇಶ ಪಾಟೀಲ ಜೋಗೂರ ಅಧ್ಯಕ್ಷತೆ ವಹಿಸಿದ್ದರು.

ಡಾ.ಶ್ರೀಶೈಲ ಘೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುರೆಡ್ಡಿ ಸ್ವಾಗತಿಸಿ, ನಾಗರಾಜ ಕಾಮಾ ನಿರೂಪಿಸಿದರು.

**

ಬಸವಣ್ಣ ಹಾಗೂ ಅಂಬೇಡ್ಕರ್ ಸಮಾಜದ ಕಣ್ಣುಗಳಿದ್ದಂತೆ. ಕಲಬುರ್ಗಿ ಜಿಲ್ಲಾಡಳಿಯತ ಈ ಇಬ್ಬರು ಮಹನೀಯರು ಮೂರ್ತಿಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಿ ಗೌರವ ಸಲ್ಲಿಸಬೇಕು – ಅಪ್ಪಗೆರೆ ಸೋಮಶೇಖರ,ಪ್ರಾಧ್ಯಾಪಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT