ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ವಹಿವಾಟು, ಕೈಕೊಟ್ಟ ಎಟಿಎಂ

ಬ್ಯಾಂಕ್‌ ಮೇಲೆ ಚುನಾವಣಾ ನೀತಿ ಸಂಹಿತೆ ಬಿಸಿ: ಸಾಮಾನ್ಯ ವ್ಯವಹಾರಕ್ಕೂ ಹಿಂಜರಿಯುವ ಗ್ರಾಹಕರು
Last Updated 16 ಏಪ್ರಿಲ್ 2018, 10:01 IST
ಅಕ್ಷರ ಗಾತ್ರ

ಕೊಪ್ಪಳ: ಚುನಾವಣಾ ಕಾವು ಏರಿದಂತೆ ಅದರ ಪರೋಕ್ಷ ಪರಿಣಾಮ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲಾಗಿದೆ. ನಗರ ಸೇರಿದಂತೆ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ದೊಡ್ಡ ಪ್ರಮಾಣದ ವ್ಯವಹಾರ ನಡೆಸಲು ಗ್ರಾಹಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ಸುಮಾರು ನಾಲ್ಕು ದಿನಗಳಿಂದ ನಗರದ ಎಲ್ಲ ಬ್ಯಾಂಕ್‌ಗಳ ಎಟಿಎಂಗಳು ಏಕಕಾಲದಲ್ಲಿ ಸ್ಥಗಿತಗೊಳ್ಳುತ್ತಿವೆ. ಸಣ್ಣ ಪ್ರಮಾಣದ ನಿತ್ಯ ವ್ಯವಹಾರಗಳಿಗೆ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

₹ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ಹಣ ವರ್ಗಾವಣೆ/ ವ್ಯವಹಾರ ನಡೆದಲ್ಲಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಇದಕ್ಕೆ ಕಾರಣ.

‘ಆದೇಶದ ಮೂಲ ಉದ್ದೇಶ ಮತದಾರರ ಮೇಲೆ ಆಮಿಷವೊಡ್ಡಲು ಅಥವಾ ಅವರನ್ನು ದುರ್ಬಳಕೆ ಮಾಡಿಕೊಳ್ಳಲು ಅಂಥ ಹಣ ಬಳಕೆ ಆಗಬಾರದು ಎಂಬುದು. ಆದರೆ, ಬಹುತೇಕ ಗ್ರಾಹಕರು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆ ಇದೆ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ನಿರ್ದಿಷ್ಟ ಉದ್ದೇಶದ ಮೇಲೆ ಹಣ ವರ್ಗಾವಣೆ ಮಾಡಿದರೆ ಏನೂ ಸಮಸ್ಯೆ ಇಲ್ಲ. ಅದಕ್ಕೆ ತೆರಿಗೆ ಅನ್ವಯವಾಗುವಂತಿದ್ದರೆ ಅದರ ದಾಖಲೆಗಳನ್ನೂ ಇರಿಸಿಕೊಳ್ಳಬೇಕು’ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಬಾಬುರಾವ್‌ ಹೇಳಿದರು.

‘ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಬ್ಯಾಂಕ್‌ಗಳಲ್ಲಿ ವಹಿವಾಟು ಕುಸಿತ ಕಂಡಿರುವುದು ನಿಜ. ಈ ಬಗ್ಗೆ ಹಲವು ಬ್ಯಾಂಕ್‌ ವ್ಯವಸ್ಥಾಪಕರೇ ನಮಗೆ ಹೇಳಿದ್ದಾರೆ. ಆದರೆ, ಗ್ರಾಹಕರು ವಿನಾಕಾರಣ ಆತಂಕಪಡುವುದು ಸಲ್ಲದು’ ಎಂದು ಅವರು ಅಭಿಪ್ರಾಯಪಟ್ಟರು.

ಏಕಕಾಲದಲ್ಲಿ ಎಟಿಎಂಗಳು ಕೈಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದ ಇಂಥ ತೊಂದರೆ ಆಗುತ್ತದೆ. ಎಲ್ಲ ಸಂದರ್ಭದಲ್ಲೂ ಹೀಗಾಗುವುದಿಲ್ಲ’ ಎಂದರು.

‘ಎಟಿಎಂಗಳಿಗೆ ಇಂತಿಷ್ಟು ಹಣ ಬೇಕು ಎಂದು ರಿಸರ್ವ್‌ ಬ್ಯಾಂಕ್‌ಗೆ ಬ್ಯಾಂಕ್‌ಗಳು ಬೇಡಿಕೆ ಸಲ್ಲಿಸುತ್ತವೆ. ಅಷ್ಟು ಪ್ರಮಾಣದ ಹಣ ಪೂರೈಕೆಯಾಗದ ಸಂದರ್ಭ ಹೀಗಾಗುವ ಸಾಧ್ಯತೆ ಇರುತ್ತದೆ. ಎಟಿಎಂಗಳ ತಾಂತ್ರಿಕ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿರುವುದರಿಂದ ಅದರ ಸಿಬ್ಬಂದಿ ಸಕಾಲದಲ್ಲಿ ನಿರ್ವಹಣೆ ಮಾಡದಿದ್ದರೆ ಸಮಸ್ಯೆ ಉಂಟಾಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳದ ಎಟಿಎಂ ಸೇವೆ ಉತ್ತಮವಾಗಿದೆ’ ಎಂದು ಅವರು ಹೇಳಿದರು.

**

ಹಣದ ಸಂದೇಹಾಸ್ಪದ ವರ್ಗಾವಣೆ ಮೇಲೆ ಮಾತ್ರ ಬ್ಯಾಂಕ್‌ಗಳು ನಿಗಾ ವಹಿಸುತ್ತವೆ. ಎಲ್ಲ ದಾಖಲೆ ಸಮರ್ಪಕವಾಗಿರುವ ಗ್ರಾಹಕರು ಆತಂಕ ಪಡಬೇಕಾಗಿಲ್ಲ –  ಬಾಬುರಾವ್‌,ವ್ಯವಸ್ಥಾಪಕ ಲೀಡ್‌ ಬ್ಯಾಂಕ್‌ ಕೊಪ್ಪಳ. 

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT