ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ಸಮುದ್ರ ಮಟ್ಟ: ಕಾಡುತ್ತಿದೆ ಸುನಾಮಿ ಭೀತಿ

Last Updated 19 ಆಗಸ್ಟ್ 2018, 12:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಸಮುದ್ರಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡುಬರುತ್ತಿದ್ದು, ಸುನಾಮಿಯಂತಹ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

‘ಸಮುದ್ರಮಟ್ಟ ಏರುವ ಭೀತಿಯಿದ್ದು, ಕರಾವಳಿ ನಗರಗಳು ಆತಂಕದಲ್ಲಿವೆ. ಸಣ್ಣ ಪ್ರಮಾಣದಲ್ಲಿ ಸುನಾಮಿ ಉಂಟಾದರೂ, ನಗರಗಳು ಬೆಳೆದಿರುವ ಈ ಸಂದರ್ಭದಲ್ಲಿ ಅದು ದೊಡ್ಡ ಮಟ್ಟದ ಹಾನಿಯುಂಟು ಮಾಡುವ ಸಾಧ್ಯತೆ ಇದೆ’ ಎಂದು ಅಮೆರಿಕದ ವರ್ಜಿನಿಯಾ ಟೆಕ್‌ ಸಂಸ್ಥೆಯ ಸಹಾಯಕ ಪ್ರೊಫೆಸರ್‌ ರಾಬರ್ಟ್‌ ವೀಸ್‌ ಹೇಳಿದ್ದಾರೆ.

‘ಸೈನ್ಸ್‌ ಅಡ್ವಾನ್ಸಸ್‌’ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಚೀನಾ ಪ್ರಾಂತ್ಯದ ಮಕೌ ಬಳಿಯ ಸಮುದ್ರಮಟ್ಟವನ್ನು ಆಧಾರವಾಗಿಟ್ಟುಕೊಂಡು ಕಂಪ್ಯೂಟರ್‌ ಗ್ರಾಫಿಕ್ಸ್‌ ಮೂಲಕ ಸುನಾಮಿ ಸ್ಥಿತಿ ಸೃಷ್ಟಿಸಿರುವ ಸಂಶೋಧನಾ ವಿದ್ಯಾರ್ಥಿಗಳು ಈ ಅಧ್ಯಯನ ನಡೆಸಿದ್ದಾರೆ. ಸಮುದ್ರಮಟ್ಟವನ್ನು 1.5 ಅಡಿಯಿಂದ 3 ಅಡಿಯವರೆಗೆ ಹೆಚ್ಚಿಸಿದಾಗ ಸುನಾಮಿ ಉಂಟಾದರೆ, ಅದು ಮಾಡುವ ಅಂದಾಜು ಹಾನಿಯನ್ನು ಈ ವಿದ್ಯಾರ್ಥಿಗಳು ಲೆಕ್ಕ ಹಾಕಿದ್ದಾರೆ.

‘ಸಮುದ್ರಮಟ್ಟ 1.5 ಅಡಿಯಷ್ಟು ಹೆಚ್ಚಿದಾಗ ಉಂಟಾಗುವ ಸುನಾಮಿಯಿಂದಾಗುವ ಹಾನಿಯ ಪ್ರಮಾಣ 1.2ರಿಂದ 2.4 ಪಟ್ಟು ಹೆಚ್ಚಿದರೆ, ಅದೇ ಸಮುದ್ರಮಟ್ಟ 3 ಅಡಿಯಷ್ಟು ಹೆಚ್ಚಾದರೆ, 4.7 ಪಟ್ಟು ಹಾನಿ ಹೆಚ್ಚಾಗುತ್ತದೆ’ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಸದ್ಯದ ಸಮುದ್ರಮಟ್ಟಕ್ಕೆ ಹೋಲಿಸಿದರೆ, ಹೆಚ್ಚು ಜನಸಂಖ್ಯೆ ಹೊಂದಿರುವ ಮಕೌ ನಗರಕ್ಕೆ ಈಗ ಸುನಾಮಿ ಭೀತಿ ಇಲ್ಲ. ಆದರೆ, 2060ರ ವೇಳೆಗೆ ಇಲ್ಲಿ ಸಮುದ್ರಮಟ್ಟ 1.5 ಅಡಿಯಷ್ಟು, 2100ರ ವೇಳೆಗೆ 3 ಅಡಿಯಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ಏರುಪೇರು ಉಂಟಾಗುತ್ತಿದ್ದು, ವಿಶ್ವದೆಲ್ಲೆಡೆ ಇರುವ ಕರಾವಳಿ ನಗರಗಳಿಗೆ ಸುನಾಮಿ ಭೀತಿ ಇದ್ದೇ ಇದೆ ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT