ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭ. ದೇಶವಿಭಜನೆಯ ಬೆಂಕಿ ಹೊತ್ತಿ ಉರಿಯುತ್ತಿದೆ. ಭಾರತದ ನಾಯಕರೆಲ್ಲ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮುಳುಗಬೇಕೋ, ಹಿಂದೂ ಮುಸ್ಲಿಮ್‌ ನಡುವೆ ಹೊತ್ತಿಕೊಂಡಿರುವ ಹಿಂಸಾಚಾರದ ಬೆಂಕಿಗೆ ಮರುಗಬೇಕೋ ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್‌ನ ಪ್ರಮುಖ ನಾಯಕರೆಲ್ಲ ಒಂದೆಡೆ ಸೇರಿ ಅದರ ಕುರಿತಾಗಿಯೇ ಮಾತನಾಡುತ್ತಿದ್ದಾರೆ. ಅವರಲ್ಲಿ ಮಹಾತ್ಮ ಗಾಂಧಿ ಕೂಡ ಇದ್ದಾರೆ.

ಎಲ್ಲರೂ ಹಿಂಸೆಯ ಬಗ್ಗೆ, ಅನಾಹುತದ ಬಗ್ಗೆ ಮಾತನಾಡುತ್ತಿದ್ದರೆ ಬಾಪು ಸಂಪೂರ್ಣ ಕುಗ್ಗಿ ತಲೆಕೆಳಗೆ ಹಾಕಿಕೊಂಡು ಮೌನವಾಗಿ ಕೂತಿದ್ದಾರೆ. ಅವರ ಕಣ್ಣುಗಳಲ್ಲಿ ನೋವಿನ ಸಮುದ್ರವೇ ಇದೆ. ಎದೆಯಲ್ಲಿ ದುಗುಡದ ಲಾವಾಗ್ನಿ ಏಳುತ್ತಿದೆ.

ಹಿಂಸೆ ನಿಲ್ಲಿಸುವುದು ಹೇಗೆ? ಚರ್ಚೆ ಜೋರು ಮುಂದುವರಿದಿದೆ. ಗಾಂಧಿ ನಿಧಾನಕ್ಕೆ ಎದ್ದು ನಿಲ್ಲುವರು. ಮಾತಿಲ್ಲದೆ ಗೋಡೆಗೆ ಒರಗಿಸಿಟ್ಟ ತಮ್ಮ ಊರುಗೋಲ ಹಿಡಿದುಕೊಂಡು ಎದ್ದು ಹೊರನಡೆಯುವರು. ಅವರು ಹೊರಟಿದ್ದು ಹಿಂಸೆಯ ಬೆಂಕಿ ಧಗಧಗ ಉರಿಯುತ್ತಿರುವ ನೌಕಾಲಿ ಎಂಬ ಊರಿಗೆ... ಕಾಂಗ್ರೆಸ್‌ನ ನಾಯಕರೆಲ್ಲ ಮಹಲಿನಲ್ಲಿ ಕೂತು ಚರ್ಚಿಸುತ್ತಿದ್ದರೆ, ಜಗಳವಾಡುತ್ತಿರುವ ಮಕ್ಕಳ ಕಡೆಗೆ ದುಃಖತಪ್ತರಾಗಿ ಓಡುವ ಅಮ್ಮನಂತೆ ಗಾಂಧಿ ಒಬ್ಬಂಟಿಯಾಗಿ ಗಲಭೆಯ ಜಾಗಕ್ಕೇ ತೆರಳುತ್ತಾರೆ. ಅಲ್ಲಿ ಹೋಗಿ ಒಬ್ಬ ಮುಸ್ಲೀಮನ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಸ್ವಾತಂತ್ರ್ಯ ಬೇಕು ಎಂದು ಉಪವಾಸ ಕೂತ ಅದೇ ಮಹಾತ್ಮ  ‘ಹಿಂಸೆಯನ್ನು ನಿಲ್ಲಿಸಬೇಕು‍’ ಎಂದು ತನ್ನ ದೇಶದ ಜನರ ವಿರುದ್ಧವೇ  ಉಪವಾಸ ಮಾಡಬೇಕಾದ ವಿಪರ್ಯಾಸ. ಅದಕ್ಕಿಂತ ದೊಡ್ಡ ದುರಂತ ಎಂದರೆ ಗಾಂಧಿ ದೇವರು ಎಂದ ನೆಲದಲ್ಲಿಯೇ ಕೆಲವೇ ದಿನಗಳಲ್ಲಿ ಉಪವಾಸ ಕೂತ ಗಾಂಧೀಜಿಯ ಮನೆಯ ಹೊರಗೆ ‘ಗಾಂಧಿ ಸಾಯಲಿ’ ಎಂಬ ಕೂಗೂ ಕೇಳುತ್ತದೆ. ಕೊನೆಗೆ ಸಾಯಿಸುವ ವಿಕೃತಿಗೂ ದೇಶ ಸಾಕ್ಷಿಯಾಗುತ್ತದೆ.

ಗಾಂಧೀಜಿಯವರ ಬದುಕೆಂಬ ಸಮುದ್ರವನ್ನು ಮೂರು ಗಂಟೆಯಿಂದ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ರಿಚರ್ಡ್‌ ಅಟೇನ್‌ಬರ್ಗ್‌. 1982ರಲ್ಲಿ ನಿರ್ಮಾಣವಾದ ‘ಗಾಂಧಿ’ ಚಿತ್ರ ಹಲವು ಕಾರಣಗಳಿಗೆ ಬಹುಮುಖ್ಯ ಪ್ರಯತ್ನ. ಸಿನಿಮಾಕ್ಕೂ ಮೊದಲೇ ನಿರ್ದೇಶಕರೇ ಹೇಳಿಕೊಂಡಿರುವಂತೆ ಗಾಂಧೀಜಿಯ ಬದುಕಿನ ಕ್ಷಣ ಕ್ಷಣದ ವಿವರಗಳನ್ನು ನೀಡುವುದು ಅವರ ಉದ್ದೇಶವಲ್ಲ. ಆದರೆ ಮಹತ್ವದ ಸಂದರ್ಭಗಳನ್ನು ದಾಖಲಿಸಿ, ಅವರ ಬದುಕಿನ ಸಾರವನ್ನು ಹಿಡಿಯಲು ಪ್ರಯತ್ನಿಸುವುದು ಅವರಿಗೆ ಮುಖ್ಯ ಎನಿಸಿದೆ. ಹೊರಗಿನ ಶಕ್ತಿಗಳಿಂದ ದೇಶವನ್ನು ಮುಕ್ತಗೊಳಿಸುವುದಷ್ಟೇ ಅಲ್ಲ, ಒಳಗಿನ ಪಿಡುಗುಗಳಿಂದ ಜನರನ್ನು ಬಿಡುಗಡೆಗೊಳಿಸುವುದೂ ಅವರಿಗೆ ಮುಖ್ಯವಾಗಿತ್ತು. ಅವರ ಈ ‘ಕ್ರಿಟಿಕಲ್‌ ಇನ್‌ಸೈಡರ್‌’ ಗುಣವನ್ನೂ ಈ ಸಿನಿಮಾ ಸೂಚ್ಯವಾಗಿ ತೋರಿಸುತ್ತ ಹೋಗುತ್ತದೆ.

ಗಾಂಧಿ ಪಾತ್ರದಲ್ಲಿ ನಟಿಸಿರುವ ಬೆನ್‌ ಕಿಂಗ್‌ಸ್ಲೇ ಅವರ ಪ್ರಬುದ್ಧ ಅಭಿನಯವೂ ಈ ಚಿತ್ರದ ತೂಕವನ್ನು ಹೆಚ್ಚಿಸಿದೆ. ಜತೆಗೆ ರವಿಶಂಕರ್‌ ಮತ್ತು ಜಾರ್ಜ್‌ ಪ್ಯಾಟರ್ನ್‌ ಅವರ ಸಂಗೀತ, ಬೆಲ್ಲಿ ವಿಲಿಯಮ್ಸ್‌ ಮತ್ತು ರೋನಿ ಟೇಲರ್ಸ್‌ ಅವರ ಛಾಯಾಗ್ರಹಣವನ್ನೂ ಉಲ್ಲೇಖಿಸಲೇಬೇಕು.

ಈ ಚಿತ್ರದ ಕೊನೆಯಲ್ಲಿ ಬರುವ ಗಾಂಧೀಜಿ ಅವರ ಮಾತುಗಳು ಇಷ್ಟು ವರ್ಷಗಳ ನಂತರವೂ ನಮ್ಮ ಆತ್ಮಸಾಕ್ಷಿಗೆ ಕನ್ನಡಿ ಹಿಡಿಯುವ ಹಾಗಿದೆ. ಅದು ಹೀಗಿದೆ: When I despair, I remember that all through history, the way of truth and love has always won. There have been tyrants and murderers and for a time they can seem invisible. But in the end, they always fall. Think of it! (ನಾನು ಹತಾಶನಾದಾಗಲೆಲ್ಲ ಈ ಸಂಗತಿಯನ್ನು ನೆನಪಿಸಿಕೊಳ್ಳುತ್ತೇನೆ. ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ದಾರಿ ಯಾವತ್ತಿಗೂ ಗೆದ್ದಿದೆ. ಪ್ರಜಾಪೀಡಕರೂ ಕೊಲೆಗೆಡುಕರೂ ಇದ್ದಾರೆ. ಕೆಲವೊಮ್ಮೆ ಅವರು ಅಜೇಯರಂತೆಯೂ ಕಾಣಿಸಬಹುದು. ಆದರೆ ಕೊನೆಯಲ್ಲಿ ಅವರು ಸೋಲುತ್ತಾರೆ. ಈ ಕುರಿತು ಯೋಚಿಸು)

‘ಗಾಂಧಿ’ ಚಿತ್ರವನ್ನು ಯೂಟ್ಯೂಬ್‌ನಲ್ಲಿ https://bit.ly/2Je83VA ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT