ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ.ಆರ್: ತಪ್ಪು ಮಾಹಿತಿಗೆ ಶಿಕ್ಷೆ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ ಲೆಕ್ಕ‍ಪತ್ರ ವಿವರ ಸಲ್ಲಿಕೆಯಲ್ಲಿ (ರಿಟರ್ನ್ಸ) ತಪ್ಪು ಮಾಹಿತಿ ನೀಡುವುದರ ವಿರುದ್ಧ ಇಲಾಖೆಯು ವೇತನದಾರರಿಗೆ ಎಚ್ಚರಿಕೆ ನೀಡಿದೆ.

ವರಮಾನದ ಬಗ್ಗೆ ತಪ್ಪು ವಿವರ ದಾಖಲಿಸುವುದು, ಕಡಿತಗಳ ಬಗ್ಗೆ ಉತ್ಪ್ರೇಕ್ಷಿತ ಮಾಹಿತಿ ಸಲ್ಲಿಸುವುದು ಕಾನೂನುಬಾಹಿರವಾಗಿರಲಿದೆ. ದುರುದ್ದೇಶದಿಂದ ತಪ್ಪು ಮಾಹಿತಿ ನೀಡಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಉದ್ಯೋಗದಾತ ಸಂಸ್ಥೆಯ ಗಮನಕ್ಕೂ ತರಲಾಗುವುದು. ತಪ್ಪು ವಿವರ ನೀಡಿದವರ ವಿರುದ್ಧ ವಿಚಾರಣೆ ನಡೆಸಲೂ ಅವಕಾಶ ಇದೆ ಎಂದು ಇಲಾಖೆ ತಿಳಿಸಿದೆ.

ಸರ್ಕಾರಿ ಮತ್ತು ಕೇಂದ್ರೋದ್ಯಮಗಳ ನೌಕರರೂ ಇದೇ ಬಗೆಯ ತಪ್ಪು ಎಸಗಿದರೆ ಸಂಬಂಧಿಸಿದ ವಿಚಕ್ಷಣಾ ವಿಭಾಗದ ಗಮನಕ್ಕೆ ತರಲಾಗುವುದು.

ತೆರಿಗೆ ಉಳಿಸಲು ಅಥವಾ ಲಾಭ ಮಾಡಿಕೊಳ್ಳಲು ತಪ್ಪು ವಿವರ ಸಲ್ಲಿಸುವ ತೆರಿಗೆ ಸಲಹೆಗಾರರ ಆಮಿಷಕ್ಕೆ ಬಲಿಯಾಗಬೇಡಿ ಎಂದು ವೇತನದಾರರಿಗೆ ಸಲಹೆ ನೀಡಲಾಗಿದೆ. ಐಟಿ ರಿಟರ್ನ್ಸ್‌ಗಳ ಮಾಹಿತಿ ಕಲೆ ಹಾಕುವ ಬೆಂಗಳೂರಿನಲ್ಲಿ ಇರುವ ಕೇಂದ್ರೀಯ ಪರಿಶೀಲನಾ ಕೇಂದ್ರವು (ಸಿಪಿಸಿ) ಈ ಸೂಚನೆ ಹೊರಡಿಸಿದೆ.

ವರಮಾನ ಮತ್ತು ತೆರಿಗೆ ವಿನಾಯ್ತಿಗಳ ಬಗ್ಗೆ ತಪ್ಪು ಮಾಹಿತಿ ಒದಗಿಸುವ ವೇತನದಾರರಿಗೆ ಇದೊಂದು ಎಚ್ಚರಿಕೆ ಸ್ವರೂಪದ ಸಲಹೆಯಾಗಿದೆ.

ಮಧ್ಯವರ್ತಿಗಳಿಗೂ ಎಚ್ಚರಿಕೆ: ಇಂತಹ ಪ್ರಯತ್ನಗಳಿಗೆ ನೆರವಾಗುವ ಮಧ್ಯವರ್ತಿಗಳಿಗೂ ಈ ಬಗ್ಗೆ ಎಚ್ಚರಿಕೆ ನೀಡಲು ಇಲಾಖೆ ಮುಂದಾಗಿದೆ.

ತಪ್ಪು ಮಾಹಿತಿ ನೀಡಿದ್ದರೆ, ಆದಾಯ ತೆರಿಗೆ ಇಲಾಖೆಯ ಹಲವಾರು ನಿಯಮಗಳಡಿ ದಂಡ ವಿಧಿಸಲು ಮತ್ತು ವಿಚಾರಣೆ ನಡೆಸಬಹುದಾಗಿದೆ. ಬೆಂಗಳೂರಿನ ಕೆಲ ಐ.ಟಿ ಸಂಸ್ಥೆಗಳ ಉದ್ಯೋಗಿಗಳು ತೆರಿಗೆ ಮರುಪಾವತಿಗೆ ಬೇಡಿಕೆ ಸಲ್ಲಿಸಿರುವುದರ ಬಗ್ಗೆ ಇಲಾಖೆಯ ತನಿಖಾ ಘಟಕವು ವರದಿ ಸಲ್ಲಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ತೆರಿಗೆ ಸಲಹೆಗಾರರೂ, ಆದಾಯ ತೆರಿಗೆ ಕಾಯ್ದೆ ವ್ಯಾಪ್ತಿಯಡಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ವಿಚಾರಣೆ ನಡೆಸಲಾಗುವುದು ಎಂದೂ ಎಚ್ಚರಿಸಲಾಗಿದೆ.

ವೇತನದಾರರು ಮತ್ತು ತೆರಿಗೆ ಸಲಹೆಗಾರರ ಮಧ್ಯೆ ಇರುವ ಇಂತಹ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲು ಸಿಬಿಐ ಇತ್ತೀಚೆಗೆ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT