ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಬೇರರ’ ಆಸ್ತಿ ಭಾರಿ ಏರಿಕೆ

Last Updated 20 ಏಪ್ರಿಲ್ 2018, 4:08 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಆಸ್ತಿ ₹840 ಕೋಟಿ. ಹೊಸಕೋಟೆ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೂ ಆಗಿರುವ ಎಂ.ಟಿ.ಬಿ. ನಾಗರಾಜ್ ಅವರ ಆಸ್ತಿ ₹1,014 ಕೋಟಿ!

ಕನಕಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಿವಕುಮಾರ್‌ 2013ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಒಟ್ಟು ಕುಟುಂಬದ ಆಸ್ತಿ ₹251 ಕೋಟಿ ಇದೆ ಎಂದು ಘೋಷಿಸಿದ್ದರು. ಈ ಬಾರಿ ಅದು ಏಕಾಏಕಿ ₹840 ಕೋಟಿಗೆ ಏರಿಕೆಯಾಗಿದೆ. 2013ರಲ್ಲಿ ಅವರ ಕುಟುಂಬ ಸಾಲ ₹105ಕೋಟಿ ಇದ್ದರೆ, ಈಗ ಸಾಲ ₹228 ಕೋಟಿಗೆ ಮುಟ್ಟಿದೆ. ಅವರ ವೈಯಕ್ತಿಕ ಆಸ್ತಿಯ ಮೊತ್ತವೇ ₹651 ಕೋಟಿ.

ಎಂ.ಟಿ.ಬಿ. ನಾಗರಾಜ್‌ ಅವರು ವೈಯಕ್ತಿಕವಾಗಿ ₹708 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ ₹306 ಕೋಟಿ ಆಸ್ತಿ ಇರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 2013ರಲ್ಲಿ ಇವರ ಕುಟುಂಬದ ಆಸ್ತಿ ಮೌಲ್ಯ ₹470 ಕೋಟಿ. ಈಗ ಅದು ಸುಮಾರು ₹520 ಕೋಟಿಯಷ್ಟು ಹೆಚ್ಚಾಗಿದೆ. ಇವರು ಹೊಂದಿರುವ ಕೃಷಿಯೇತರ ಭೂಮಿಯ ಮೌಲ್ಯವೇ ₹370 ಕೋಟಿ. ಕುಟುಂಬದ ಒಟ್ಟು ಸಾಲ ₹233 ಕೋಟಿ.

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ‘ರಾಜಕೀಯ ಕುಬೇರ’ರು ಚುನಾವಣಾ ಆಯೋಗಕ್ಕೆ ತಾವು ಮತ್ತು ತಮ್ಮ ಅವಲಂಬಿತರು ಹೊಂದಿರುವ ಸ್ಥಿರ, ಚರ ಆಸ್ತಿಗಳ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಅದರಲ್ಲಿ ಈ ಮಾಹಿತಿ ಇದೆ. ಐದೇ ವರ್ಷಗಳಲ್ಲಿ ಕೆಲವರ ಆಸ್ತಿ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿದೆ.

ಬಿಜೆಪಿಯಿಂದ ಇತ್ತೀಚೆಗೆ ಕಾಂಗ್ರೆಸ್‌ಗೆ ಬಂದಿರುವ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆನಂದ್ ಸಿಂಗ್‌ ಆಸ್ತಿ ₹125 ಕೋಟಿ. 2013ರಲ್ಲಿ ಅವರ ಘೋಷಿತ ಆಸ್ತಿ ಮೌಲ್ಯ ₹104 ಕೋಟಿಯಷ್ಟಿತ್ತು.

ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ₹103 ಕೋಟಿ ಆಸ್ತಿ ಹೊಂದಿದ್ದಾರೆ. 2013ರಲ್ಲಿ ನಾಮಪತ್ರ ಸಲ್ಲಿಸಿದಾಗ ₹46 ಕೋಟಿ ಆಸ್ತಿ ಇದೆ ಎಂದು ಅವರು ಘೋಷಿಸಿದ್ದರು. ಈ ಅವಧಿಯಲ್ಲಿ ಅವರ ಆಸ್ತಿ ದುಪ್ಪಟ್ಟಾಗಿದೆ.

ಕಾಂಗ್ರೆಸ್‌ ನಾಯಕರಿಗೆ ಹೋಲಿಸಿದರೆ ಇಂದು ನಾಮಪತ್ರ ಸಲ್ಲಿಸಿರುವವರ ಪೈಕಿ ಬಿಜೆಪಿಯವರೇ ‘ಘೋಷಿತ’ ಲೆಕ್ಕಾಚಾರದಲ್ಲಿ ಕಡಿಮೆ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ(ಶಿಕಾರಿಪುರ) ಈಗ ₹7 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. 2013ರಲ್ಲಿ ಅವರ ಆಸ್ತಿ ₹5.96 ಕೋಟಿ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ₹6.97 ಕೋಟಿ ಇತ್ತು.

ಜೆಡಿಎಸ್‌ ಅಭ್ಯರ್ಥಿ ₹149 ಕೋಟಿ ಒಡೆಯ

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರವಲ್ಲದೇ ಜೆಡಿಎಸ್‌ನಲ್ಲಿ ಕೂಡ ಶತಕೋಟಿ ಆಸ್ತಿಯ ಒಡೆಯರಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಪಕ್ಷದ ಅಭ್ಯರ್ಥಿ ಮಹಮದ್ ಇಕ್ಬಾಲ್ ಹೊತೂರು ₹149 ಕೋಟಿ ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಗಣಿ ಉದ್ಯಮಿಯಾದ ಇವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.

**

ಡಿಕೆಶಿ ಕುಟುಂಬ ಇತ್ತೀಚೆಗೆ 1 ಕೆ.ಜಿ ಬಂಗಾರ ಹಾಗೂ 321 ಗ್ರಾಂ ವಜ್ರ ಖರೀದಿಸಿದೆ

ಆನಂದ್‌ ಸಿಂಗ್ ಬಳಿ ಬಿಎಂಡಬ್ಲ್ಯೂ ಸೇರಿದಂತೆ 18 ಐಷಾರಾಮಿ ಕಾರುಗಳಿವೆ

ಎಂ.ಟಿ.ಬಿ. ನಾಗರಾಜ್‌ ಅವರ ವಾರ್ಷಿಕ ಆದಾಯ ₹104 ಕೋಟಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT