ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ದಿನಗಳಲ್ಲಿ ದಾಖಲೆ ಇಲ್ಲದ ₹ 22 ಲಕ್ಷ ವಶ

ವಾಟ್ಸ್‌ಆ್ಯಪ್‌ ಮೂಲಕ ದೂರು ನೀಡಲು ಅವಕಾಶ, ಫೇಸ್‌ಬುಕ್‌, ಟ್ವಿಟರ್‌ ಪ್ರಕಟಣೆಗಳ ಮೇಲೆ ನಿಗಾ
Last Updated 20 ಏಪ್ರಿಲ್ 2018, 9:12 IST
ಅಕ್ಷರ ಗಾತ್ರ

ಮಂಡ್ಯ: ‘ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯ ವಿವಿಧೆಡೆ ದಾಖಲೆ ಇಲ್ಲದ ಒಟ್ಟು ₹ 22 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ಹೇಳಿದರು.

‘24 ದಿನಗಳಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಚುನಾವಣಾ ಪ್ರಕ್ರಿಯೆ ನಡೆಯಲು ಅಧಿಕಾರಿಗಳ ತಂಡ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು ದಾಖಲೆ ಇಲ್ಲದ ಹಣವನ್ನು ವಶಕ್ಕೆ ಪಡೆಯಲಾಗುತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಸಾರ್ವಜನಿಕರಿಗೆ ದೂರು ಸಲ್ಲಿಸಲು ಅವಕಾಶ ನೀಡಲಾಗಿದ್ದು ದೂರು ನಿರ್ವಹಣಾ ಸೆಲ್‌ ಆರಂಭಿಸಲಾಗಿದೆ. ಜನರು ನೀಡುವ ದೂರಿನ ಅನ್ವಯ ಕ್ರಮ ಜರುಗಿಸಲಾಗುತ್ತಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ 186 ಪ್ರಕರಣ ದಾಖಲು ಮಾಡಲಾಗಿದೆ. ಅವುಗಳಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮದ್ದೂರು ಕ್ಷೇತ್ರ 1, ಮಂಡ್ಯ 6, ಶ್ರೀರಂಗಪಟ್ಟಣ 3, ಮೇಲುಕೋಟೆ ಕ್ಷೇತ್ರದಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ 1,386 ಲೀಟರ್‌ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಗಳಲ್ಲಿ 168 ಜನರನ್ನು ಬಂಧಿಸಲಾಗಿದ್ದು ಒಟ್ಟು 23 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 19 ಬೈಕ್‌ಗಳು, 4 ಕಾರುಗಳು ಸೇರಿವೆ’ ಎಂದು ಹೇಳಿದರು.

70 ಅಧಿಕಾರಿಗಳ ವಿರುದ್ಧ ದೂರು: ‘ಸರ್ಕಾರಿ ನೌಕರರು ಚುನಾವಣಾ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂಬ 70 ದೂರುಗಳು ದಾಖಲಾಗಿವೆ. ದೂರಿನ ಅನ್ವಯ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಒಬ್ಬರನ್ನು ಅಮಾನತು ಮಾಡಲಾಗಿದೆ. ದೂರುಗಳ ಕುರಿತು ಚುನಾವಣಾ ಆಯೋಗಕ್ಕೆ ವರದಿ ನೀಡಲಾಗುವುದು. ಆಯೋಗದ ಸೂಚನೆಯಂತೆ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ದೂರಿಗಾಗಿ ವಾಟ್ಸ್‌ಆಪ್‌ ಸೇವೆ: ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌ ಮಾತನಾಡಿ ‘ಸಾರ್ವಜನಿಕರು ವಾಟ್ಸ್‌ಆ್ಯಪ್‌ ಮೂಲಕ ದೂರು ಸಲ್ಲಿಸಲು ಅವಕಾಶವಿದೆ. ಯಾರೇ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೂ ಜನರು ವಾಟ್ಸ್‌ಆ್ಯಪ್‌ ಸಂಖ್ಯೆ (9483662206) ಮೂಲಕ ಉಲ್ಲಂಘನೆ ಮಾಡುವವರ ಭಾವಚಿತ್ರ, ವಿಡಿಯೊ ಇನ್ನಿತರ ಮಾಹಿತಿ ನೀಡಬಹುದು. ಫ್ಲೈಯಿಂಗ್‌ ಸ್ಕ್ವಾಡ್‌ಗಳು ಎಲ್ಲೆಡೆ ನಿಗಾವಹಿಸಲಿದ್ದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲನೆ ನಡೆಸಲಿದ್ದಾರೆ’ ಎಂದು ಹೇಳಿದರು.

‘ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ರಚನೆ ಮಾಡಲಾಗಿದ್ದು ಸಮೂಹ ಮಾಧ್ಯಮಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಮತ್ತಿತರ ಸಮೂಹಿಕ ಮಾಧ್ಯಮಗಳ ಪ್ರಕಟಣೆಗಳ ಮೇಲೆ ಈ ಸಮಿತಿ ನಿಗಾ ಇಡುತ್ತದೆ. ಸಮೂಹ ಮಾಧ್ಯಮಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಸಮಿತಿಯ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಯಾವುದೇ ಪ್ರಕಟಣೆ ಹಾಕಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಅಲ್ಲದೇ ಯಾವುದೇ ಪೋಸ್ಟ್‌ಗಳನ್ನು ಷೇರ್‌ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮಿಂಚಿನ ಸಂಚಾರ: 12,079 ಅರ್ಜಿ ಸ್ವೀಕಾರ

‘ಜಿಲ್ಲೆಯ ವಿವಿಧೆಡೆ ಕೈಗೊಳ್ಳಲಾದ ಮಿಂಚಿನ ಸಂಚಾರ ಅಭಿಯಾನದಲ್ಲಿ ಒಟ್ಟು 12,079 ಅರ್ಜಿ ಸ್ವೀಕರಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ 9,160 ಅರ್ಜಿಗಳು ಬಂದಿವೆ. ಪಟ್ಟಿಯಿಂದ ಹೆಸರು ರದ್ದುಪಡಿಸಲು 955 ಅರ್ಜಿ ಸ್ವೀಕರಿಸಲಾಗಿದೆ. ಮಾಹಿತಿ ತಿದ್ದುಪಡಿಗೆ 1,679 ಜನರು ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರ ಬದಲಾವಣೆಗಾಗಿ 296 ಅರ್ಜಿ ಸ್ವೀಕರಿಸಲಾಗಿದೆ’ ಎಂದು ಎನ್‌.ಮಂಜುಶ್ರೀ ತಿಳಿಸಿದರು.

ಕರ್ತವ್ಯದಿಂದ ಕೈಬಿಡಲು 500 ಅರ್ಜಿ

‘ವಿವಿಧ ಇಲಾಖೆಗಳು, ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೆ ವಿವಿಧ ಕಾರಣಗಳಿಂದಾಗಿ ಚುನಾವಣಾ ಕರ್ತವ್ಯದಿಂದ ಕೈಬಿಡುವಂತೆ ಒತ್ತಾಯಿಸಿ 500 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರನ್ನು ಕೈಬಿಡುವ ಮೊದಲು ಕಾರಣಗಳನ್ನು ಪರಿಶೀಲಿಸಲಾಗುವುದು. ಗರ್ಭಿಣಿಯರು, ಬಾಣಂತಿಯರಿಗೆ ವಿನಾಯಿತಿ ನೀಡಲಾಗುವುದು. ಆರೋಗ್ಯ ಕಾರಣ ಕೊಟ್ಟು ಅರ್ಜಿ ಸಲ್ಲಿಸಿದ ನೌಕರರ ಆರೋಗ್ಯ ಪ್ರಮಾಣಪತ್ರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಜುಶ್ರೀ ಹೇಳಿದರು.

ದೂರು ನೀಡಲು ಕರೆ ಮಾಡಿ
08232239559
08232239560
08232239561
08232239562

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT