ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಚ್‌ಡಿಕೆ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ’

ಮಾಗಡಿ: ಎ.ಮಂಜುನಾಥ ನಾಮಪತ್ರ ಸಲ್ಲಿಕೆ l ಸಾವಿರಾರು ಕಾರ್ಯಕರ್ತರ ಮೆರವಣಿಗೆ
Last Updated 20 ಏಪ್ರಿಲ್ 2018, 10:00 IST
ಅಕ್ಷರ ಗಾತ್ರ

ಮಾಗಡಿ: ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ ಅವರು ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ, ಸಹಾಯಕ ಚುನಾವಣಾಧಿಕಾರಿ ಎನ್.ಶಿವಕುಮಾರ್ ಸಮ್ಮುಖದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.

ಪತ್ನಿ ಲಕ್ಷ್ಮಿಮಂಜುನಾಥ್ ಅವರೊಂದಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಳಿತದ ಅವಧಿಯಲ್ಲಿ ಕೈಗೊಂಡ ಜನೋಪಯೋಗಿ ಕೆಲಸಗಳ ಆಧಾರದಲ್ಲಿ ಮತಯಾಚಿಸುವುದಾಗಿ ತಿಳಿಸಿದರು.

‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜನರ ಸೇವೆಗಾಗಿ ದುಡಿಯುತ್ತಿದ್ದೇನೆ. ಶ್ರೀರಂಗ ಯೋಜನೆ ಮೂಲಕ ಹೇಮಾವತಿಯಿಂದ ತಾಲ್ಲೂಕಿನ 84 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ₹284 ಕೋಟಿ ಹಣ ಮಂಜೂರು ಮಾಡಿಸಿ ಕಾಮಗಾರಿ ಚಾಲನೆಯಲ್ಲಿದೆ’ ಎಂದು ಹೇಳಿದರು.

‌ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿಪಾಳ್ಯದ ಕೃಷ್ಣಮೂರ್ತಿ ಮಾತನಾಡಿ, ಕುದೂರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಜನರ ಮನ್ನಣೆಗೆ ಕಾರಣಿಭೂತರಾಗಿರುವ ಎ.ಮಂಜುನಾಥ್ ಶಾಸಕರಾಗುವುದು ಖಚಿತ. ಸ್ವಂತ ಹಣ ಬಳಸಿ ಕಳೆದ 10 ವರ್ಷಗಳಿಂದ ತಾಲ್ಲೂಕಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಬಡವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಸ್ತ್ರೀಶಕ್ತಿ ಸಂಘದ ಬಡ ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಿದ್ದಾರೆ. ನಿರುದ್ಯೋಗಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಹಣಕಾಸಿನ ನೆರವು ನೀಡಿದ್ದಾರೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬುಡಕಟ್ಟು ಸಮುದಾಯಗಳಿಗೆ ಆರ್ಥಿಕ ನೆರವು ನೀಡಿ ಅವರ ಸೇವೆ ಮಾಡಿದ್ದಾರೆ. ಬಹುಮತದಿಂದ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಮುಖಂಡರಾದ ಮತ್ತದ ಹನುಮಂತರಾಯಪ್ಪ, ಪಿ.ನಾಗರಾಜು, ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಮ್ಮ ನಂಜಯ್ಯ, ಗಿರಿಯಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ. ರಾಮಣ್ಣ ಮಾತನಾಡಿದರು.

ಗುರುವಾರ ಬೆಳಿಗ್ಗೆ 10ಕ್ಕೆ ಕಲ್ಯಾ ಬಾಗಿಲು ಜೆಡಿಎಸ್ ಕಚೇರಿಯಿಂದ ವಿಕಾಸವಾಹಿನಿ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನಾ ತಿರುಮಲೆ ರಂಗನಾಥಸ್ವಾಮಿ, ಸೋಮೇಶ್ವರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯಿಂದ ಒಂದು ಗಂಟೆಯ ಕಾಲ ಬಿ.ಕೆ.ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ‍ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.

ಮತದಾರರು ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಆಡಳಿತದ ವೈಖರಿ ಗಮನಿಸಿದ್ದು ಜೆಡಿಎಸ್‌ಗೆ ಮತ ನೀಡಲು ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ. ಮುಖ್ಯಮಂತ್ರಿಯಾದ ನಂತರ ತಾಲ್ಲೂಕಿನಲ್ಲಿ ಯುವಜನರಿಗಾಗಿ ಉದ್ಯೋಗ ನೀಡಲು ಕಾರ್ಖಾನೆ ಆರಂಭಿಸಲಾಗುವುದು ಎಂದು ಮಂಜುನಾಥ್‌ ಭರವಸೆ ನೀಡಿದರು.

ಮಹಿಳೆಯರಿಗೆ ಗಾರ್ಮೆಂಟ್ಸ್ ಆರಂಭಿಸಿ ಉದ್ಯೋಗ ಅನುಕೂಲ ಮಾಡಿಕೊಡಲಾಗುವುದು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕುದೂರು ಹೋಬಳಿಯಲ್ಲಿ ಕೈಗಾರಿಕಾ ನಗರ ಆರಂಭಿಸಿ ಅನುಕೂಲ ಮಾಡಿಕೊಡಲಾಗುವುದು ಎಂದರು.

‘ಬಡ ಕುಟುಂಬದಿಂದ ಬಂದಿರುವ ನನಗೆ ನಿಮ್ಮೆಲ್ಲರ ಅಮೂಲ್ಯವಾದ ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು’ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT