ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಹಾಳ ಬೆಂಬಲಿಗರ ಪ್ರತಿಭಟನೆ

ಚನ್ನಮ್ಮನ ಕಿತ್ತೂರು: ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಆಕ್ರೋಶ
Last Updated 21 ಏಪ್ರಿಲ್ 2018, 5:28 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ಕ್ಷೇತ್ರದಿಂದ ಮಾಜಿ ಶಾಸಕ ಸುರೇಶ ಮಾರಿಹಾಳ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವ ಕ್ರಮ ಖಂಡಿಸಿ, ಅವರ ಬೆಂಬಲಿಗರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಮಹಾಂತೇಶ ದೊಡಗೌಡರಿಗೆ ಟಿಕೆಟ್ ಸಿಕ್ಕಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ, ಸುರೇಶ ಅವರ ಬೆಂಬಲಿಗರು ಬಸಾಪುರ ಕ್ರಾಸ್ ಬಳಿಯಿರುವ ತೋಟದ ಮನೆಯಲ್ಲಿ ಜಮಾಯಿಸಿ ಪ್ರತಿಭಟನೆಗೆ ಸಜ್ಜಾದರು.

ಅಲ್ಲಿಂದ ಘೋಷಣೆ ಕೂಗುತ್ತ ಅರಳಿಕಟ್ಟೆ ವೃತ್ತಕ್ಕೆ ಬಂದ ಪ್ರತಿಭಟನಾಕಾರರು, ಅಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಆನಂತರ ರಾಷ್ಟ್ರೀಯ ಹೆದ್ದಾರಿ ಬಳಿಯ ಅಶ್ವಾರೂಢ ಚನ್ನಮ್ಮ ಪ್ರತಿಮೆ ಬಳಿ ಬಂದು ಅಲ್ಲಿಯೂ ಟೈರ್ ಸುಟ್ಟರು.

‘ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿ ನೆಲೆಯೂರಲು ಸುರೇಶ ಮಾರಿಹಾಳ ಅವರೇ ಕಾರಣ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಅನೇಕ ಜನಪರ ಕೆಲಸಗಳನ್ನು ಮಾಡಿ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಪಕ್ಷಕ್ಕೆ ನೆಲೆ ಒದಗಿಸಿದವರಿಗೆ ನೆಲೆ ಇಲ್ಲದಂತೆ ಮಾಡಿರುವುದು ಸರಿಯಾದ ಕ್ರಮವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಾರಿಹಾಳ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಬಿಜೆಪಿ ಇಲ್ಲಿ ಗೆಲುವು ಸಾಧಿಸುತ್ತದೆ. ಇಲ್ಲದಿದ್ದರೆ ಒಂದು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಬಿಜೆಪಿ ನಾಯಕ ಬಾಲಚಂದ್ರ ಜಾರಕಿಹೊಳಿ ಅವರು ಟಿಕೆಟ್ ಕೊಡಿಸುವುದಾಗಿ ಎಂದು ಆಶ್ವಾಸನೆ ನೀಡಿದ್ದಾರೆ. ನಾಳೆವರೆಗೆ ಕಾಯ್ದು ನೋಡಿ, ಆನಂತರ ಪ್ರತಿಭಟನೆಯ ಸ್ವರೂಪವನ್ನು ನಿರ್ಧರಿಸುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ವಕ್ಕುಂದ, ವಿಶ್ವನಾಥ ಶೆಟ್ಟರ, ನಗರ ಬಿಜೆಪಿ ಘಟಕದ ಅಧ್ಯಕ್ಷ ಉಮಾಕಾಂತ ಭಾರತಿ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದಿನೇಶ ವಳಸಂಗ, ಶ್ಯಾಮ್ ಶಿಲೇದಾರ, ಅಪ್ಪಣ್ಣ ಮುಷ್ಟಗಿ, ಸುರೇಶ ಕುರಗುಂದ, ಅಬ್ದುಲ್ ರಜಾಕ್ ಗಡಕಾರಿ, ಪಟ್ಟಣ ಪಂಚಾಯ್ತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT