ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಕುಟುಂಬ ಆಸ್ತಿ ಮೌಲ್ಯ ಹೆಚ್ಚಳ

ಕೇತಗಾನಹಳ್ಳಿಯಲ್ಲಿ 48 ಎಕರೆ ಜಮೀನು: ‘ಕಸ್ತೂರಿ’ ₨68 ಕೋಟಿ ಹೂಡಿಕೆ
Last Updated 21 ಏಪ್ರಿಲ್ 2018, 11:13 IST
ಅಕ್ಷರ ಗಾತ್ರ

ರಾಮನಗರ: ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ಸದ್ಯದ ಆಸ್ತಿಯ ಮೌಲ್ಯ ₹167 ಕೋಟಿ.

2013ರಲ್ಲಿ ಅವರ ಕುಟುಂಬದ ಆಸ್ತಿ ಮೌಲ್ಯವು ₹137 ಕೋಟಿಗಳಾಗಿದ್ದು, ಕಳೆದ ಐದು ವರ್ಷದಲ್ಲಿ ₹30 ಕೋಟಿಯಷ್ಟು ಸಂಪತ್ತು ವೃದ್ಧಿಯಾಗಿದೆ. ಆಸ್ತಿ ವಿಚಾರದಲ್ಲಿ ಎಚ್‌ಡಿಕೆಗಿಂತ ಅವರ ಪತ್ನಿ ಅನಿತಾ ಅವರೇ ಹೆಚ್ಚು ಶ್ರೀಮಂತರಾಗಿದ್ದಾರೆ.

ವೃತ್ತಿಯಲ್ಲಿ ರಾಜಕಾರಣಿ ಮತ್ತು ಕೃಷಿಕ ಎಂದು ಗುರುತಿಸಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಆಸ್ತಿ ಎಂದರೆ ಕೃಷಿ ಭೂಮಿ. ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ಒಟ್ಟು 48 ಎಕರೆಯಷ್ಟು ಕೃಷಿಯನ್ನು ಅವರು ಹೊಂದಿದ್ದು, ಅದರ ಈಗಿನ ಮಾರುಕಟ್ಟೆ ಮೌಲ್ಯವೇ ₹30.6 ಕೋಟಿಯಷ್ಟಿದೆ. ಇದರೊಂದಿಗೆ ಜಯನಗರದಲ್ಲಿ ₹4.5 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ.

ಕುಮಾರಸ್ವಾಮಿ ಬಳಿ ₹12 ಲಕ್ಷ ನಗದು ಇದ್ದು, ವಿವಿಧ ಬ್ಯಾಂಕುಗಳಲ್ಲಿ ₹22.25 ಲಕ್ಷ ಮೊತ್ತದ ಠೇವಣಿ ಇರಿಸಿದ್ದಾರೆ. ಪತ್ನಿ ಅನಿತಾಗೆ ₹6.51 ಕೋಟಿ ಸೇರಿದಂತೆ ಒಟ್ಟು ₹6.97 ಕೋಟಿ ಸಾಲ ಕೊಟ್ಟಿದ್ದಾರೆ. ₹2.94 ಕೋಟಿ ಸಾಲ ಮಾಡಿದ್ದಾರೆ. 750 ಗ್ರಾಂ ಚಿನ್ನಾಭರಣ, 12.5 ಕೆ.ಜಿ. ಬೆಳ್ಳಿ ಹಾಗೂ 4 ಕ್ಯಾರೆಟ್‌ನಷ್ಟು ವಜ್ರ ಸೇರಿದಂತೆ ₹24.52 ಲಕ್ಷ ಮೌಲ್ಯದ ಆಭರಣ ಇವರ ಬಳಿ ಇದೆ. ಓಡಾಟಕ್ಕೆ ಸ್ವಂತ ವಾಹನ ಇಲ್ಲ.

ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ್ಯೂ ಕುಮಾರಸ್ವಾಮಿ ಅವರು 2016–17ನೇ ಸಾಲಿನಲ್ಲಿ ವೇತನ ರೂಪದಲ್ಲಿ ಕೇವಲ ₹3.26 ಲಕ್ಷ ಮಾತ್ರ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದರೊಟ್ಟಿಗೆ ಕೃಷಿ ಆದಾಯವಾಗಿ ವಾರ್ಷಿಕ ₹41.63 ಲಕ್ಷ ಲೆಕ್ಕ ನೀಡಿದ್ದಾರೆ.

ಅನಿತಾ ಕುಮಾರಸ್ವಾಮಿ: ಅನಿತಾ ಅವರು ಸ್ಥಿರಾಸ್ತಿಗಿಂತ ಚರಾಸ್ತಿಗಳಲ್ಲಿಯೇ ಹೆಚ್ಚಿನ ಹೂಡಿಕೆಯನ್ನು ಮಾಡಿದ್ದಾರೆ. ಕಸ್ತೂರಿ ಮೀಡಿಯಾ ಕಂಪನಿಯಲ್ಲಿ ₹68.72 ಕೋಟಿ ಹೂಡಿಕೆ ಮಾಡಿರುವ ಇವರು ಅದರ ನಿರ್ದೇಶಕಿಯಾಗಿ ವಾರ್ಷಿಕ ₹1.02 ಕೋಟಿ ಗೌರವ ಸಂಭಾವನೆ ಪಡೆಯುತ್ತಿದ್ದಾರೆ. ಇದಲ್ಲದೆ ಒಟ್ಟು 94 ವ್ಯಕ್ತಿ, ಸಂಸ್ಥೆಗಳಿಗೆ ₹17.6 ಕೋಟಿ ಮೊತ್ತದ ಹಣಕಾಸು ನೆರವು ನೀಡಿದ್ದಾರೆ.

ಅನಿತಾ ₹42 ಲಕ್ಷ ನಗದು ಹೊಂದಿದ್ದು, ₹1.90 ಕೋಟಿ ಠೇವಣಿ ಇರಿಸಿದ್ದಾರೆ. ವಿವಿಧ ಹಣಕಾಸು ಸಂಸ್ಥೆಗಳಿಂದ ₹8.14 ಕೋಟಿ ಸಾಲ ಪಡೆದಿದ್ದಾರೆ. 2,660 ಗ್ರಾಂನಷ್ಟು ಚಿನ್ನ, 17 ಕೆ.ಜಿ. ಬೆಳ್ಳಿ ಹಾಗೂ 40 ಕ್ಯಾರೆಟ್‌ನಷ್ಟು ವಜ್ರ ಸೇರಿದಂತೆ ₹93,33 ಲಕ್ಷ ಮೌಲ್ಯದ ಆಭರಣ ಹೊಂದಿದ್ದಾರೆ. ಅವರ ಹೆಸರಿನಲ್ಲಿ ₹8.29 ಲಕ್ಷ ಮೌಲ್ಯದ ಹಾರ್ಲೆ ಡೇವಿಡ್ಸನ್ ಬೈಕ್ ಮತ್ತು ₹20 ಲಕ್ಷ ಮೌಲ್ಯದ ವ್ಯಾನಿಟಿ ವ್ಯಾನ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT