ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆವಿಮೆ ಪರಿಹಾರ ಬಾಕಿ ಮೊತ್ತ 72 ಗಂಟೆಗಳಲ್ಲಿ ರೈತರಿಗೆ ಪಾವತಿಸಿ: ಕಂದಾಯ ಸಚಿವ

ಡಿಸಿಸಿ ಬ್ಯಾಂಕ್‌
Last Updated 23 ಆಗಸ್ಟ್ 2018, 12:35 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನಲ್ಲಿ ಉಳಿದಿರುವ 2016–17ನೇ ಸಾಲಿನ ಬೆಳೆ ವಿಮೆ ಮೊತ್ತ ₹9.21 ಕೋಟಿಯನ್ನು ಮುಂದಿನ 72 ಗಂಟೆಯಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಬೆಳೆ ಹಾನಿಗೀಡಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ನಂತರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು,ಬೆಳೆ ವಿಮೆ ಪರಿಹಾರ ನೀಡಿಕೆ ವಿಚಾರದಲ್ಲಿ ವಿಮಾ ಕಂಪೆನಿಗಳು ರೈತರ ದಾರಿ ತಪ್ಪಿಸಿವಂಚಿಸದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರ ಮಾತಿಗೆ ದನಿಗೂಡಿಸಿದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ’ಬೆಳೆ ವಿಮೆ ನೀಡಿಕೆಯಲ್ಲಿ ತಾರತಮ್ಯ ಮಾಡಿರುವ ಬಗ್ಗೆ ತಾಲ್ಲೂಕಿನ ಹಳ್ಳೂರು ಹಾಗೂ ಬೇವೂರಿನ ರೈತರಿಂದ ದೂರುಗಳು ಬಂದಿದ್ದವು. ಹಾಗಾಗಿ ರೈತರು ಹಾಗೂ ವಿಮಾ ಕಂಪೆನಿ ಪ್ರತಿನಿಧಿಗಳನ್ನು ಮುಖಾಮುಖಿಯಾಗಿಸಿ ಸಭೆ ಮಾಡಲಾಯಿತು. ಆಗ ರೈತರು ಕೇಳುತ್ತಿರುವುದರಲ್ಲಿ ತರ್ಕವಿದೆ ಎಂಬುದು ಗೊತ್ತಾಯಿತು. ಕೂಡಲೇ ಬಾಕಿ ಮೊತ್ತ ಪಾವತಿಸುವಂತೆ ವಿಮಾ ಕಂಪೆನಿಯವರಿಗೆ ಸೂಚಿಸಿದ್ದಾಗಿ’ ಹೇಳಿದರು.

’ಬೆಳೆವಿಮೆ ವಿಚಾರದಲ್ಲಿ ರೈತರಿಗೆ ಕೃಷಿ ಇಲಾಖೆಯಿಂದ ನೀಡಲಾದ ಕೈಪಿಡಿ ಬಹಳಷ್ಟು ಸಂಕೀರ್ಣವಾಗಿದೆ. ಅದನ್ನು ಅವರು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿದೆ. ಅದರಲ್ಲಿನ ಮಾಹಿತಿಯನ್ನು ಸಾಧ್ಯವಾದಷ್ಟು ಸರಳವಾಗಿಸಬೇಕಿದೆ’ ಎಂಬುದನ್ನು ಜಿಲ್ಲಾಧಿಕಾರಿ ಸಚಿವರ ಗಮನಕ್ಕೆ ತಂದರು.

’ಬೆಳೆ ವಿಮೆ ನೀಡಿಕೆ ಸಂಪೂರ್ಣ ಪಾರದರ್ಶಕವಾಗಿರಬೇಕು. ವಿಮಾ ಮೊತ್ತ ನಿಗದಿಗೆ ಸಂಬಂಧಿಸಿದ ನಿಯಮಾವಳಿಗಳು ಹಾಗೂ ಷರತ್ತುಗಳನ್ನು ರೈತರಿಗೆ ಸ್ಪಷ್ಟವಾಗಿ ತಿಳಿಸಬೇಕು. ವಿಮಾ ಕಂಪೆನಿಯವರು ಈ ವಿಚಾರದಲ್ಲಿ ಯಾವುದೇ ಆಟಾಟೋಪ ನಡೆಸದಂತೆ ನಿಗಾ ವಹಿಸಿ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಪಿ.ರಮೇಶಕುಮಾರ ಅವರಿಗೆ ಸಚಿವರು ಹೇಳಿದರು.

ಈ ಬಾರಿ ಬೆಳೆ ವಿಮೆ ನೀಡಿಕೆಯಲ್ಲಿ ಹಿಂದೆ ಆದ ತಪ್ಪುಗಳು ಮರುಕಳಿಸಬಾರದು. ರೈತರು ಹಾಗೂ ವಿಮಾ ಕಂಪೆನಿ ಇಬ್ಬರ ನಡುವೆ ಸಮನ್ವಯ ಸಾಧಿಸಿಬೆಳೆ ಮಾದರಿ ಹಾಗೂ ಇಳುವರಿ ಪ್ರಮಾಣದ ಬಗ್ಗೆ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ದೇಶಪಾಂಡೆ ಕಿವಿಮಾತು ಹೇಳಿದರು.

ಶಾಸಕರ ನಿಧಿ ಬಳಸಿ:
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಇರುವ 19 ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಂಜಿನಿಯರ್ ಸಭೆಗೆ ತಿಳಿಸಿದರು. ಕುಡಿಯುವ ನೀರು ಪೂರೈಕೆಗೆ ಹೊಸದಾಗಿ ಕೊಳವೆ ಬಾವಿ ಕೊರೆಸಲು ಪ್ರತ್ಯೇಕ ಅನುದಾನದ ವ್ಯವಸ್ಥೆ ಕಲ್ಪಿಸಿಲ್ಲ. ನೂತನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೊದಲ ಕಂತು ಶೀಘ್ರ ಬಿಡುಗಡೆಯಾಗಲಿದೆ. ಕೊಳವೆಬಾವಿ ಕೊರೆಸಲು ಅದರಲ್ಲಿಯೇ ಒಂದಷ್ಟು ಅನುದಾನ ಬಳಕೆ ಮಾಡಿಕೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕೇಳಿದ ತಕ್ಷಣ ಕೆಲಸ ಕೊಡಿ:
ಬರ ಪರಿಹಾರ ಕಾಮಗಾರಿ ಕೂಡಲೇ ಆರಂಭಿಸುವಂತೆ ಸಿಇಒ ಗಂಗೂಬಾಯಿ ಮಾನಕರ್ ಅವರಿಗೆ ಸೂಚಿಸಿದ ದೇಶಪಾಂಡೆ, ಉದ್ಯೋಗ ಖಾತರಿಯಡಿ ಕ್ರಿಯಾ ಯೋಜನೆ ನೆಪದಲ್ಲಿ ಕೆಲಸ ನೀಡುವುದಕ್ಕೆ ವಿಳಂಬ ಮಾಡುವಂತಿಲ್ಲ. ಕೇಳಿದ ತಕ್ಷಣ ಕೆಲಸ ಕೊಡಬೇಕು. ಜಿಲ್ಲೆಯ ಜನ ಉದ್ಯೋಗ ಅರಸಿ ಗೋವಾ, ಮಂಗಳೂರು, ಮಹಾರಾಷ್ಟ್ರಕ್ಕೆ ಗುಳೇ ಹೋಗುವ ಪ‍ರಿಸ್ಥಿತಿ ಬಾರದಂತೆ ನೋಡಿಕೊಳ್ಳಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT