ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಹಾಲಕ್ಷ್ಮಿ ಹಬ್ಬ: ಗಗನಕ್ಕೇರಿದ ಹೂ, ಹಣ್ಣುಗಳ ದರ, ಮಾರ್ಕೆಟ್‌ನಲ್ಲಿ ಜನಸಂದಣಿ

Last Updated 23 ಆಗಸ್ಟ್ 2018, 12:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಂಗಾರಿನಲ್ಲಿ ಅಸಮರ್ಪಕ ಮಳೆ, ಜಿಲ್ಲೆಯ ವಿವಿಧೆಡೆ ಬರದ ಛಾಯೆ, ಮಿತಿಮೀರಿದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜತೆಗೆ ಬಂದಿರುವ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕೋಟೆನಾಡಿನ ಅನೇಕ ಜನರು ಸಜ್ಜಾಗಿದ್ದಾರೆ.

ಪೂಜಾ ಸಾಮಗ್ರಿಗಳ ದರ ಗಗನಕ್ಕೇರಿದ್ದರೂ ಹಬ್ಬವನ್ನು ನಾಗರಿಕರು ಸ್ವಾಗತಿಸುವಂತಾಗಿದೆ. ಹಬ್ಬಕ್ಕಾಗಿ ಗುರುವಾರ ಗಾಂಧಿವೃತ್ತ, ಸಂತೆ ಹೊಂಡದ ಬಳಿ ಹಣ್ಣು, ಪೂಜಾ ಸಾಮಗ್ರಿ ಹಾಗೂ ಖಾಸಗಿ ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆಯಲ್ಲಿ ಹೂವುಗಳ ಖರೀದಿಗೆ ಕಿಕ್ಕಿರಿದ ಜನಸಂದಣಿ ಸೇರಿತ್ತು.

ಹೂವು:ಹಳದಿ ಹಾಗೂ ಬಣ್ಣದ ಸೇವಂತಿಗೆ ತಲಾ ₹ 1,000 ಕ್ಕೆ 12 ಮಾರು, ಬಿಳಿ ಸೇವಂತಿಗೆ ₹ 1,000 ಕ್ಕೆ 10 ಮಾರು, ಕನಕಾಂಬರ, ದುಂಡು ಮಲ್ಲೆ ಮಾರೊಂದಕ್ಕೆ ₹ 100, ಕಾಕಡ ಮಾರಿಗೆ ₹ 60, ವೆಲ್ವೆಟ್ ಮಾರಿಗೆ ₹ 50, ಡೇರೆ ಹೂ ₹ 20, ಗುಲಾಬಿ ಒಂದಕ್ಕೆ ₹ 10, ಬಟನ್ಸ್ ಕೆ.ಜಿಗೆ ₹ 200, ಪುಟ್ಟ ಹಾರಗಳು ₹ 50 ರಿಂದ 150, ಕಳಶದ ಹಾರಗಳು ₹ 200 ರಿಂದ 300 ರವರೆಗೂ ಮಾರಾಟವಾದವು.

ಹಣ್ಣು:ಸೇಬು ಕೆ.ಜಿಗೆ ₹ 100 ರಿಂದ 140, ಮೊಸಂಬೆ ₹ 50, ದ್ರಾಕ್ಷಿ, ದಾಳಿಂಬೆ, ಮರಸೇಬು ಹಾಗೂ ಪುಟ್ಟ ಬಾಳೆ ಕೆ.ಜಿಗೆ ₹ 80, ವೀಳ್ಯದ ಎಲೆ ಒಂದು ಕಟ್ಟಿಗೆ ₹ 80 ರಂತೆ ಮಾರಾಟವಾದವು.

ವರಮಹಾಲಕ್ಷ್ಮಿ ಹಬ್ಬ ಹೆಣ್ಣುಮಕ್ಕಳ ಹಬ್ಬವಾಗಿದ್ದು, ಮಾರುಕಟ್ಟೆಯ ತುಂಬಾ ಮಹಿಳೆಯರೆ ಹೆಚ್ಚಾಗಿ ಕಂಡು ಬಂದರು. ಬೆಲೆ ಎಷ್ಟಾದರೂ ಸರಿ ಶ್ರಾವಣದ ಎರಡನೇ ಶುಕ್ರವಾರ ಬರುವ ಲಕ್ಷ್ಮಿ ಹಬ್ಬದ ಆಚರಣೆ ಸಂಪ್ರದಾಯವಾಗಿದ್ದು, ಬಿಡಲು ಸಾಧ್ಯವಿಲ್ಲದೆ ಆಚರಿಸಲೇಬೇಕು ಎಂಬ ಮನಸ್ಥಿತಿಯಲ್ಲಿರುವ ಗ್ರಾಹಕರು ಕೊಳ್ಳುವ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಗೊಳಿಸಿ ಹಣ್ಣು, ಹೂಗಳನ್ನು ಕೊಂಡೊಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹಬ್ಬದ ಪ್ರಯುಕ್ತ ಚಿಕ್ಕಪೇಟೆ, ಆನೆಬಾಗಿಲು, ಗಾಂಧಿವೃತ್ತ, ಸಂತೆ ಹೊಂಡ, ಖಾಸಗಿ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT