ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆರೆಗಳಲ್ಲಿ ಮತದಾರರ ಜಾಗೃತಿ

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ಚಿತ್ರಕಲಾ ಪರಿಷತ್ತಿನ ನೆಲಮಹಡಿಯಲ್ಲಿ ಬಿಳಿ ಹಾಳೆಯ ಮೇಲೆ ಕರಿಯ ಗೆರೆಗಳ ಕಾರುಬಾರು; ಮತದಾರರ ಜಡ ಕಳೆದು ಬಡಿದೆಬ್ಬಿಸುವ ಮೊನಚು ಈ ರೇಖೆಗಳದ್ದು; ಮತದಾರರ ಜಾಗೃತಿಗೆ ವ್ಯಂಗ್ಯಚಿತ್ರಕಾರರ ಸಂಘ ಕಂಡುಕೊಂಡ ಹಾದಿ ಇದು.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಚಿತ್ರಕಲಾ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಮತದಾರರ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನ, ಪ್ರಚಾರ ಸಾಮಗ್ರಿಗಳ ಪ್ರದರ್ಶನ ಹಾಗೂ ವ್ಯಂಗ್ರಚಿತ್ರ ರಚನೆ ಕಾರ್ಯಾಗಾರದಲ್ಲಿ ವ್ಯಂಗ್ಯಚಿತ್ರಕಾರರ ಕೈಚಳಕ ಮತದಾರರು ಮುಂದಿನ ಚುನಾವಣೆಯಲ್ಲಿ ಮತಗಟ್ಟೆಗೆ ತೆರಳಿ ಮತಚಲಾಯಿಸಲು ಪ್ರೇರೇಪಿಸುವಂತಿತ್ತು. ಮತದಾನದ ಮಹತ್ವ, ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸುವ ಅಗತ್ಯವನ್ನು ಈ ವ್ಯಂಗ್ಯಚಿತ್ರಗಳು ಬಿಂಬಿಸಿದವು.

ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ವ್ಯಂಗ್ಯಚಿತ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಇವುಗಳಲ್ಲಿ ಕೆಲವು ಚಿತ್ರಗಳನ್ನು ಮತದಾರರ ಜಾಗೃತಿಯ ಪ್ರಚಾರಕ್ಕಾಗಿ ಬಳಸಿಕೊಳ್ಳುವುದಾಗಿ ತಿಳಿಸಿದರು.

ಎಲ್ಲರೂ ಮತದಾನ ಮಾಡಿದಾಗ ಪ್ರಜಾಪ್ರಭುತ್ವದಲ್ಲಿ ಜನರ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗುತ್ತದೆ. ಮತದಾರರು ಯಾವುದೇ ಒತ್ತಡ, ಆಮಿಷಕ್ಕೆ ಬಲಿಯಾಗದೆ ಮತದಾನ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಆಮಿಷ ಒಡ್ಡಿ ನೀಡಲಾಗಿದ್ದ ವಸ್ತುಗಳನ್ನು ಗ್ರಾಮಸ್ಥರು ಸುಟ್ಟು ಹಾಕಿದ ಪ್ರಕರಣವನ್ನು ಉಲ್ಲೇಖಿಸಿದ ಅವರು, ಸಾರ್ವಜನಿಕರು ಆಮಿಷಕ್ಕೆ ಬಲಿಯಾಗದಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ. ಬಿ.ಆರ್. ಮಮತಾ,ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT