ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಕ್ರೀಟ್ ಕಾಡಿನಲ್ಲಿ ಹಸಿರಿನ ಬೀಡು

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ಇದೊಂದು ಬೆಂಗಳೂರಿನ ದೃಶ್ಯ ಎಂದರೆ ನಂಬುವುದು ಕಷ್ಟ ಅಲ್ಲವೇ? ಮಹಾನಗರದ ಎಲ್ಲ ರಸ್ತೆಗಳೂ ಇಂತೆಯೇ ಇರಬಹುದಾದ ಕನಸು ನನಸಾದರೆ ಅದೆಷ್ಟು ಚೆನ್ನ !.. ನಗರದ ಮಧ್ಯಭಾಗದಲ್ಲೇ 1909 ರಲ್ಲಿ ಸುಮಾರು ನಾಲ್ಕುನೂರು ಎಕರೆ ಜಾಗದಲ್ಲಿ ಸ್ಥಾಪಿತಗೊಂಡ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಇಂದಿಗೂ ಪರಿಸರ ಪ್ರೇಮಿಗಳ ನೆಚ್ಚಿನ ತಾಣ. ನೂರಾರು ವೈವಿಧ್ಯಮಯ ಸಸ್ಯ ಪ್ರಭೇದಗಳು ಅಲ್ಲಿ ಜೀವಂತವಾಗಿವೆ.

ಅವುಗಳ ಮಧ್ಯೆಯೇ ಅನೇಕ ಬಗೆಯ ಪಕ್ಷಿಗಳು, ವನ್ಯಜೀವಿಗಳು, ಜೇನು ಇತ್ಯಾದಿ ಜಂತುಗಳು, ಸ್ವಚ್ಛಂದವಾಗಿ ಬದುಕುತ್ತಿವೆ. ಸಂಸ್ಥೆಯ ವ್ಯವಸ್ಥಾಪಕರು ಇಂತಹ ತಾಣವೊಂದನ್ನು ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಬಚಾವು ಮಾಡಿರುವುದನ್ನು ಮೆಚ್ಚಲೇಬೇಕು. ಅಲ್ಲಿ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೆ ಸೈಕಲ್ಲು ತುಳಿಯಲು ಅನುಮತಿ ಇದೆ. ಆ ಚೊಕ್ಕ ರಸ್ತೆಗಳಲ್ಲಿ ಇಳಿಸಂಜೆಯೂ ಸಲೀಸಾಗಿ ಸಂಚರಿಸಲು ಅನುಕೂಲವಾಗಲು ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲಿನ ಸಸ್ಯಗಳ, ಹಕ್ಕಿಗಳ ಚಿಲಿಪಿಲಿ ನಾದದ ಮಧ್ಯೆ ಮತ್ತು ಬೃಹತ್ ಮರಗಳ ಆಸರೆಯಲ್ಲಿ ಸುತ್ತಾಡಿದಾಗ, ಸುಂದರ ವನದಲ್ಲಿ ವಿಹರಿಸಿದಷ್ಟೇ ಮನೋಲ್ಲಾಸ ನೀಡುವ ಅನುಭವ ಎಲ್ಲರದೂ. ಅಂತಹ ದೃಶ್ಯವೊಂದನ್ನು, ಕುಂದಾಪುರ ತಾಲ್ಲೂಕಿನ ಹೊಸಂಗಡಿ ವಾಸಿ ಎಚ್.ಎಸ್.ರೋಹಿಣಿ ಬೆಂಗಳೂರಿಗೆ ಈ ತಿಂಗಳು ಭೇಟಿ ನೀಡಿದ್ದಾಗ ಕ್ಯಾಮೆರಾದಲ್ಲಿ ಸೆರೆಹಿಡಿದದ್ದು ಔಚಿತ್ಯ ಪೂರ್ಣವಾಗಿದೆ.

ಗೃಹಿಣಿ ಆಗಿರುವ ಅವರು ಆರು ವರ್ಷಗಳಿಂದ ಕ್ಯಾಂಡಿಡ್, ಕಪ್ಪು-ಬಿಳುಪು , ಪೋರ್ಟ್ರೈಟ್, ಪ್ರಕೃತಿ ಛಾಯಾಗ್ರಹಣ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಬಳಸಿದ ಕ್ಯಾಮೆರಾ, ನಿಕಾನ್ ಡಿ 3300, ಜೊತೆಗೆ 55 – 200 ಎಂ.ಎಂ. ಜೂಂ ಲೆನ್ಸ್ . ಕ್ಯಾಮೆರಾದ ಎಕ್ಸ್ ಪೋಶರ್ ವಿವರ ಇಂತಿವೆ: ಅಪರ್ಚರ್ ಎಫ್‌ 6.3 ಎಂ.ಎಂ., ಶಟರ್ ವೇಗ 1/160 ಸೆಕೆಂಡ್, ಐ.ಎಸ್.ಒ 400 . ಫ್ಲಾಶ್, ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

*ಓರೆಯಾಗಿ ಬೀಳುತ್ತಿದ್ದ ಸಂಜೆಯ ಸೂರ್ಯನ ತಿಳಿ ಬೆಳಕು, ಮರಗಿಡಗಳ ರೆಂಬೆ ಕೊಂಬೆಗಳ ಮಧ್ಯೆ ನುಸುಳಿ ಸೈಕಲ್ ಸವಾರನನ್ನೂ ಸವರಿರುವ ಈ ಚಿತ್ರ ತಾಂತ್ರಿಕವಾಗಿ ಸಮಾಧಾನಕರವಾಗಿಯೇ ಸೆರೆಹಿಡಿಯಲಾಗಿದೆ. ಸೈಕಲ್ ಚಲನೆಯಲ್ಲಿರುವುದರಿಂದ, ಹೆಚ್ಚಿನ ಶಟರ್ ವೇಗವನ್ನು ಅಳವಡಿಸಿರುವುದು ಸೂಕ್ತವಾಗಿದೆ. ಸಂಜೆಯ ಸಮಯವಾಗಿದ್ದರಿಂದ ನೆರಳಿನ ಭಾಗಗಳೇ ಹೆಚ್ಚು. ಇದಕ್ಕೆ ಹೆಚ್ಚು ತೆರದ ಅಪರ್ಚರ್ ಎಫ್‌ 6.3 ಉಪಯುಕ್ತವಾಗಿದೆ. ಚೌಕಟ್ಟಿನ ಬಲಭಾಗದಿಂದ ಬೃಹತ್ ಮರಗಳ ಕಾಂಡ, ರೆಂಬೆ ಕೊಂಬೆ, ಸೈಕಲ್ ಸವಾರ ಇತ್ಯಾದಿ ವಸ್ತುಗಳ ಮೇಲೆ ಬೀಳುತ್ತಿರುವ ಓರೆ ಬೆಳಕು ಅವುಗಳ ವಿರುದ್ಧ ಭಾಗದಲ್ಲಿ ಗಾಢವಾದ ನೆರಳುಂಟುಮಾಡುವುದು ಸಹಜವೆ. ಆ ಭಾಗಗಳನ್ನೂ ಸಮರ್ಪಕವಾಗಿ, ಕಡು ಕಪ್ಪಾಗಿಸದೇ ಚಿತ್ರದಲ್ಲಿ ಸೆರೆಹಿಡಿಯುವುದಕ್ಕೆ, ಐ.ಎಸ್.ಒ ಸೆನ್ಸಿಟಿವಿಟಿ 400, ಅನ್ನು ಇಟ್ಟಿರುವುದು ಛಾಯಾಚಿತ್ರಗಾರ್ತಿಯ ಸಮಯ ಪ್ರಜ್ಞೆಗೆ ಸಾಕ್ಷಿಯಾಗಿದೆ.

*ಚಿತ್ರವನ್ನು ಗಮನಿಸಿದಾಗ ಥಟ್ಟನೆ ಹೊಳೆಯುವುದು, ಇದು ಯಾವುದೋ ಸುಂದರ ಉದ್ಯಾನ, ಇಲ್ಲಿ ಹೇಗೆ ಸೈಕಲ್ ಸವಾರ…? ಎಂದು. ನಗರದ ಮಧ್ಯೆಯ ವಿದ್ಯಾ ಕೇಂದ್ರವಿದು ಎಂದೊಡನೆ, ಸೈಕಲ್‌ನಲ್ಲಿ ಸವಾರಿ ಮಾಡುತ್ತಿರುವ ವಿದ್ಯಾರ್ಥಿ ದೃಶ್ಯ ಮನಸ್ಸಿಗೆ ಮುದ ಕೊಡುತ್ತದೆ. ಆತನೊಡನೆ ಮನತಣಿಸುವ ಮರ ಗಿಡ, ಇತ್ಯಾದಿಗಳೆಲ್ಲದರೊಂದಿಗಿನ ಚಿತ್ರ ಸಂಯೋಜನೆಯಾಗಿದೆ.

*ಚಿತ್ರದ ಮುನ್ನಲೆಯಲ್ಲಿನ ಗಿಡಗಳ ಮೇಲಿನ ಸಣ್ಣ ಪುಟ್ಟ ಕೆಂಪು ಹೂವುಗಳು, ಹಿನ್ನೆಲೆಯಲ್ಲಿ ಪಸರಿಸಿರುವ ಹಚ್ಚ ಹಸಿರು ಎಲೆ ದಂಟುಗಳು ಮತ್ತು ಇಡೀ ದೃಶ್ಯದಲ್ಲೇ ಹಾಸು ಹೊಕ್ಕಾಗಿರುವ ತೆಳ್ಳಗಿನ ಮರ ಗಿಡಗಳ ಬಳುಕಾದ ಕಾಂಡ- ರೆಂಬೆಗಳ ಮಾಟ ಇಡೀ ಚೌಕಟ್ಟಿನ ವರ್ಣ ಛಾಯಾಂತರದ ಮೆರಗನ್ನು ಹೆಚ್ಚಿಸಿವೆ.

*ಕಲಾತ್ಮಕವಾಗಿ ಮತ್ತೊಂದು ಅಂಶ ಇಲ್ಲಿ ಗಮನಾರ್ಹ. ಇಡೀ ಚೌಕಟ್ಟಿನ ಎಡ ಒಂದು ಮೂರಾಂಶದ ಬಿಂದುವಿನಲ್ಲಿ ಹಳದಿ ಅಂಗಿ ತೊಟ್ಟ ಸೈಕಲ್ ಸವಾರನು ಮೊದಲು ನೋಡುಗನ ಕಣ್ ಸೆಳೆಯುತ್ತಾನೆ. ಅಂದರೆ, ಚಿತ್ರದ ಎಂಟ್ರಿ ಪಾಯಿಂಟ್ ‘ರೂಲ್ ಆಫ್ ಥರ್ಡ್ಸ್’ ಗೆ ಅನ್ವಯವಾಗಿದೆ.

*ಸೈಕಲ್ ಚಾಲನೆಗೆ ಇಂಬು ಕೊಡುವ ಅದರ ಮುಂದಿನ ಭಾಗ (ರಿಲೀಫ್) ಹಾಗೂ ಓರೆಯಾದ ದೊಡ್ಡ ರಸ್ತೆಯ ದೆಸೆಯಿಂದ, ನೋಡುಗ ಕಣ್ಣನ್ನು ಒಂದೆಡೆಯೇ ( ಸೈಕಲ್ ಮೇಲೆಯೇ) ನಿಲ್ಲಿಸದೇ, ಮುಂದೆ ಆ ರಸ್ತೆಯ ಮೇಲೂ ಎಡ ಮೂಲೆಯೆಡೆಗೂ (ಒಬ್ಲಿಕ್ ಆಗಿ) ಹಾಯಿಸುತ್ತಾನೆ. ಅದರ ಬದಿಯ ಮರಗಿಡಗಳ ಮೇಲೂ ಸೆಳೆಯಲ್ಪಟ್ಟು ಪುನಃ ಮುನ್ನೆಲೆಯ ಹೂಗಿಡಗಳ ಕಡೆ ಬಂದು ಪುನಃ ಸೈಕಲ್ ನೆಡೆಗೇ ನೋಟವನ್ನು ಹಿಂದಿರುಗಿಸುವ ರೀತಿಯ ಅನುಭವ ಇಲ್ಲಿ ಸಾಧ್ಯವಾಗುವುದು ಈ ಚೌಕಟ್ಟಿನ ವಿಶೇಷವೇ!

ಛಾಯಾಚಿತ್ರಗಾರ್ತಿ: ಎಚ್.ಎಸ್.ರೋಹಿಣಿ

ಇಮೇಲ್:hsrihiniharegoppa@fmail.com

ಸಂಪರ್ಕ: 9449291661

–ಕೆ.ಎಸ್.ರಾಜಾರಾಮ್

ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸ ಬಹುದು.ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್ : metropv@prajavani.co.in, ದೂರವಾಣಿ- 25880636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT