ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಪಟ್ಟಿ ಅಂತಿಮ: ಬಿಜೆಪಿ ನಡೆ ನಿಗೂಢ

11ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟಿಸದ ಕಮಲ ಪಕ್ಷ
Last Updated 23 ಏಪ್ರಿಲ್ 2018, 5:20 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಇರುವಾಗ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಆದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿ 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಖೈರುಗೊಳಿಸಿಲ್ಲ.

ಭಾನುವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಅಂತಿಮ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರಕ್ಕೂ ಟಿಕೆಟ್‌ ನೀಡಿದೆ. ಆದರೆ, ಮುಖ್ಯಮಂತ್ರಿ ವಿರುದ್ಧ ಇಲ್ಲಿ ಯಾರನ್ನು ಕಣಕ್ಕೆ ಇಳಿಸಿ, ಪ್ರತಿ ಸವಾಲು ಒಡ್ಡಲಿದೆ ಎಂಬ ಗುಟ್ಟನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ.

‘ಅಮಿತ್ ಶಾ ಅವರು ಹೇಳಿದರೆ ಬಾದಾಮಿಯಲ್ಲಿ ಕಣಕ್ಕೆ ಇಳಿಯಲು ಸಿದ್ಧ’ ಎಂದು ಬಿ.ಎಸ್‌.ಯಡಿಯೂರಪ್ಪ ಮತ್ತು ಶ್ರೀರಾಮುಲು ಘೋಷಿಸಿದ್ದಾರೆ. ಅಲ್ಲದೆ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್, ಲಂಡನ್‌ನ ಮಾಜಿ ಮೇಯರ್ ನೀರಜ್ ಪಾಟೀಲ್ ಹೆಸರೂ ಬಿಜೆಪಿ ವರಿಷ್ಠರ ಮುಂದಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡದಂತೆ ಕಟ್ಟಿ ಹಾಕಬೇಕಾದರೆ, ಬಾದಾಮಿಯಲ್ಲಿ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಬೇಕು ಎಂಬುದು ವರಿಷ್ಠರ ಚಿಂತನೆಯಾಗಿದೆ ಎಂದೂ ಮೂಲಗಳು ಹೇಳಿವೆ.

ಜೆಡಿಎಸ್ ಈಗಾಗಲೇ 184 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, 20 ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿದೆ.

ಹ್ಯಾರಿಸ್‌ಗೆ ಮಣೆ: ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ.ಹ್ಯಾರಿಸ್‌ ಹೆಸರು ಇರಲಿಲ್ಲ. ಅನೇಕ ಊಹಾಪೋಹಗಳಿಗೆ ಇದು ಕಾರಣವಾಗಿತ್ತು. ಟಿಕೆಟ್ ಗಿಟ್ಟಿಸುವಲ್ಲಿ ಅವರು ಕೊನೆಗೂ ಯಶಸ್ವಿಯಾಗಿದ್ದಾರೆ.

ಆರು ಕ್ಷೇತ್ರಗಳಲ್ಲಿ ಈ ಹಿಂದೆ ಪ್ರಕಟಿಸಿದ್ದ ಅಭ್ಯರ್ಥಿಗಳ ಬದಲು ಬೇರೆಯವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಟಿಕೆಟ್‌ ಕೈತಪ್ಪಿದ್ದ ಮೂವರು ಶಾಸಕರು ಬಿಗಿ ಪಟ್ಟು ಹಿಡಿದು ಈ ಬಾರಿಯೂ ಪಕ್ಷದ ಅಭ್ಯರ್ಥಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದಲ್ಲಿ ಎ.ಎಲ್‌. ಪುಷ್ಪಾ ಅವರ ಬದಲು ಶಾಸಕ ಎಚ್‌.ಪಿ. ರಾಜೇಶ್‌ಗೆ, ತಿಪಟೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ನಂಜಾಮರಿ ಬದಲು ಶಾಸಕ ಕೆ.ಷಡಕ್ಷರಿಗೆ ಟಿಕೆಟ್‌ ನೀಡಲಾಗಿದೆ.

ಪದ್ಮನಾಭ ನಗರ ಕ್ಷೇತ್ರದಲ್ಲಿ ಬಿ.ಗುರಪ್ಪ ನಾಯ್ಡು ಬದಲು ಮಾಜಿ ಶಾಸಕ ಎಂ.ಶ್ರೀನಿವಾಸ, ಮಲ್ಲೇಶ್ವರದಲ್ಲಿ ಸಚಿವ ಎಂ.ಆರ್‌. ಸೀತಾರಾಂ ಬದಲು ಕೆಂಗಲ್‌ ಶ್ರೀಪಾದ ರೇಣು ಅವರನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ.

ಮಡಿಕೇರಿಯಲ್ಲಿ ವಕೀಲ ಎಚ್‌.ಎಸ್‌. ಚಂದ್ರಮೌಳಿ  ಅವರನ್ನು ಕಣಕ್ಕೆ ಇಳಿಸುವುದಾಗಿ ಪಕ್ಷ ಹೇಳಿತ್ತು. ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಪರವಾಗಿ ಚಂದ್ರಮೌಳಿ ವಕಾಲತ್ತು ವಹಿಸಿದ್ದರು ಎಂದು ಪಕ್ಷದ ಮುಖಂಡರೇ ಟೀಕಿಸಿದ್ದರು. ಕೊನೆ ಪಟ್ಟಿಯಲ್ಲಿ ಅವರನ್ನು ಕೈಬಿಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾಗೆ ಪಕ್ಷ ಟಿಕೆಟ್‌ ನೀಡಿದೆ.

ಕಿತ್ತೂರಿನಲ್ಲಿ ಶಾಸಕ ಡಿ.ಬಿ.ಇನಾಂದಾರ್, ಸಿಂದಗಿಯಲ್ಲಿ ಮಲ್ಲಣ್ಣ ನಿಂಗಣ್ಣ ಸಾಲಿ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್ ಅವರು ತಮ್ಮ ಮೊಮ್ಮಗ ಅಬ್ದುಲ್ ರಹಮಾನ್ ಷರೀಫ್‌ ಅವರಿಗೆ ಹೆಬ್ಬಾಳ ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದರು. ಆದರೆ, ಷರೀಫ್ ಅಳಿಯ ಸೈಯದ್‌ ಯಾಸಿನ್ ಅವರನ್ನು ರಾಯಚೂರು ಟಿಕೆಟ್ ನೀಡಿರುವ ಪಕ್ಷ, ಹಿರಿಯ ನಾಯಕನನ್ನು ಸಮಾಧಾನ ಪಡಿಸಲು ಮುಂದಾಗಿದೆ.

ಪಕ್ಷ ಸೇರಿದ ಮರುದಿನವೇ ಟಿಕೆಟ್‌: ಶನಿವಾರವಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ವಿಠಲ ದೋಂಡಿಬ ಕಟಕದೊಂಡ ಅವರಿಗೆ ನಾಗಠಾಣ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.

ಈ ಕ್ಷೇತ್ರದಲ್ಲಿ ಬಿಜೆಪಿಯು ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಅವರಿಗೆ ಟಿಕೆಟ್‌ ನೀಡಿತ್ತು. ಇದು ವಿಜಯಪುರ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ವಿಠಲ ಕಟಕದೊಂಡ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ನಾಗಠಾಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಅಲಗೂರ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ತಿಳಿಸಿದ್ದರು.

ಬೆಳಮಗಿ ಜೆಡಿಎಸ್‌ಗೆ, ಬೇಳೂರು ಕಾಂಗ್ರೆಸ್‌ಗೆ

ಕಲಬುರ್ಗಿಯ ಬಿಜೆಪಿ ಮುಖಂಡ ರೇವುನಾಯಕ್ ಬೆಳಮಗಿ ಜೆಡಿಎಸ್‌ಗೆ ಭಾನುವಾರ ಸೇರ್ಪಡೆಯಾದರು.

ಕಲಬುರ್ಗಿ ಗ್ರಾಮಾಂತರ ಕ್ಷೇತ್ರದಿಂದ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬೆಳಮಗಿ ಅವರಿಗೆ ಬಿ–ಫಾರಂ ಹಸ್ತಾಂತರಿಸಿದರು.

‘ಈ ಕ್ಷೇತ್ರವನ್ನು  ಬಿಎಸ್‌ಪಿಗೆ ಬಿಟ್ಟುಕೊಟ್ಟಿದ್ದೆವು. ಬೆಳಮಗಿ ಅವರು ಸ್ಪರ್ಧಿಸುವುದಕ್ಕೆ ಬಿಎಸ್‌ಪಿಯೂ ಸಮ್ಮತಿಸಿದೆ.  ಇದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ದೇವೇಗೌಡ ಸ್ಪಷ್ಟಪಡಿಸಿದರು.  ಬಿಜೆಪಿ ತ್ಯಜಿಸಿರುವ ಗೋಪಾಲಕೃಷ್ಣ ಬೇಳೂರು ಅವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT