ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧುರ್ಯಕ್ಕೆ ಮತ್ತೊಂದು ಹೆಸರು ಪಿಬಿಎಸ್‌

ಪಿ.ಬಿ ಶ್ರೀನಿವಾಸ್‌ ಸ್ವರ ಸ್ಮರಣೆ ಕಾರ್ಯಕ್ರಮ: ಸಾಹಿತಿ ದೊಡ್ಡರಂಗೇಗೌಡ ಬಣ್ಣನೆ
Last Updated 23 ಏಪ್ರಿಲ್ 2018, 5:31 IST
ಅಕ್ಷರ ಗಾತ್ರ

ಇಳಕಲ್: ಗಾನ ಗಂಧರ್ವ ಪಿ.ಬಿ. ಶ್ರೀನಿವಾಸ ಅಸಾಮಾನ್ಯ ಗಾಯಕ. ಕರ್ನಾಟಕ ಮಾತ್ರವಲ್ಲ. ಇಡೀ ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಸಾಧಾರಣ ಸಾಧನೆ ಮಾಡಿ, ಛಾಪು ಮೂಡಿಸಿದ ಮೇರು ವ್ಯಕ್ತಿತ್ವ ಅವರದು' ಎಂದು ಸಾಹಿತಿ ದೊಡ್ಡರಂಗೇಗೌಡ ಹೇಳಿದರು.

ನಗರದ ಅನುಭವ ಮಂಟಪದಲ್ಲಿ ಸ್ನೇಹರಂಗ ಹಾಗೂ ಉದ್ಯಮಿ ರವೀಂದ್ರ ದೇವಗಿರಿಕರ ಹಮ್ಮಿಕೊಂಡಿದ್ದ ಡಾ.ಪಿ.ಬಿ. ಶ್ರೀನಿವಾಸರ 5ನೇ ಪುಣ್ಯಸ್ಮರಣೆ ಹಾಗೂ ಪಿ.ಬಿ ಶ್ರೀನಿವಾಸ ಸ್ವರ ಸ್ಮರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಮಾಧುರ್ಯಕ್ಕೆ ಮತ್ತೊಂದು ಹೆಸರು ಪಿಬಿಎಸ್. ಅವರು ಸಪ್ತ ಭಾಷೆಗಳ ಗಾಯಕರು ಮಾತ್ರವಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್‍ನಲ್ಲೂ ಕವನಗಳನ್ನು, ಉರ್ದುವಿನಲ್ಲಿ ಗಜಲ್‍ ಬರೆದು ಹಾಡಿದ ಮೇಧಾವಿ. ಸಂಗೀತ ಭಾಷಾತೀತ, ಜಾತ್ಯತೀತ, ಧರ್ಮಾತೀತ, ದೇಶಾತೀತ. ಇದಕ್ಕೆ ಮರುಳಾಗದವರೇ ಇಲ್ಲ, ಸಂಗೀತ ಒಂದು ಸಿದ್ಧ ಔಷಧ. ಯುದ್ಧದಾಹಿಗಳಿಗೆ ಪಿಬಿಎಸ್‍ ಅವರ ಕವನ ಕೇಳಿಸಿದರೇ ಅವರು ಯುದ್ಧವನ್ನೇ ಮರೆಯುತ್ತಾರೆ. ಖಿನ್ನತೆಯಿಂದ ಅತ್ಮಹತ್ಯೆಯ ಆಲೋಚನೆಯಲ್ಲಿ ಇರುವ ವ್ಯಕ್ತಿ ಪಿಬಿಎಸ್‍ ಹಾಡುಗಳನ್ನು ಆಲಿಸಿದರೆ ಆತ ಜೀವನ ಪ್ರೇಮಿಯಾಗುತ್ತಾನೆ’ ಎಂದು ಬಣ್ಣಿಸಿದರು.

‘ಪಿ.ಬಿ. ಶ್ರೀನಿವಾಸ್‍ ಅವರು ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ, ಅವರ ಹಾಡುಗಳ ಮೂಲಕ ಅಮರರಾಗಿದ್ದಾರೆ. ಜ್ಯೋತಿಷಿಗಳು 'ಇವನು ಮನೆಗೆ ಭಾರ, ಏನೂ ಮಾಡಲಾಗದ ಸೋಂಬೇರಿಯಾಗುತ್ತಾನೆ' ಎಂದು ಭವಿಷ್ಯ ನುಡಿದಿದ್ದರಂತೆ. ಆದರೆ, ಪಿಬಿಎಸ್‍ ಜ್ಯೋತಿಷಿಯ ಭವಿಷ್ಯವನ್ನು ಸುಳ್ಳುಮಾಡಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದರು’ ಎಂದು ಸ್ಮರಿಸಿದರು.

ಸಾನ್ನಿಧ್ಯ ವಹಿಸಿದ್ದ ಶಿರೂರ ಮಹಾಂತ ತೀರ್ಥದ ಡಾ.ಬಸವಲಿಂಗ ಶ್ರೀಗಳು ಮಾತನಾಡಿ, 'ಪಿ.ಬಿ.ಎಸ್‌ ಹಾಡುಗಳು ಕೇಳುಗರ ಮನಸ್ಸನ್ನು ಉದ್ವೇಗಗೊಳಿಸದೇ, ಮನಸನ್ನು ಅರಳಿಸುತ್ತವೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಗುಣ ಹೊಂದಿವೆ. ಬದುಕಿಗೆ ಪ್ರೇರಣೆ, ಸ್ಫೂರ್ತಿ ನೀಡುತ್ತವೆ’ ಎಂದು ಶ್ಲಾಘಿಸಿದರು.

ನಗರದ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಗಂಗಮ್ಮ ಆರೇರ ಅವರಿಗೆ ರವೀಂದ್ರ ದೇವಗಿರಿಕರ್‌ ಅವರು ₹ 25 ಸಾವಿರ ನಗದು ನೀಡಿ ಗೌರವಿಸಿದರು. ಹಿರಿಯ ನಟಿ ಜಯಲಕ್ಷ್ಮಿ, ಸಾಹಿತಿ ದೊಡ್ಡರಂಗೇಗೌಡ, ನಾಡಪ್ರಭು ಕೆಂಪೆಗೌಡ ಪ್ರಶಸ್ತಿ ಪುರಸ್ಕೃತ ಆರ್. ಶ್ರೀನಾಥ ಅವರನ್ನು ಗೌರವವಿಸಿ ಸನ್ಮಾನಿಸಿದರು.

ನಗರದ ಗೋವಿಂದ ಕರವಾ, ಗೋಪಿ ಕಠಾರೆ, ಪರುಶುರಾಮ ಪವಾರ, ಕೋಮಲಾ ರಾಯಭಾಗಿ, ವಿದ್ಯಾಶ್ರೀ ಗಂಜಿ, ಆರ್‍. ಶ್ರೀನಿವಾಸ ಮತ್ತಿತರರು ಪಿಬಿಎಸ್‍ ಅವರ ಹಾಡುಗಳನ್ನು ಹಾಡಿ ಸ್ವರ ಸ್ಮರಣೆ ಕಾರ್ಯಕ್ರಮ ನಡೆಸಿಕೊಟ್ಟರು. ರವೀಂದ್ರ ದೇವಗಿರಿಕರ್‍ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಢಗಳಚಂದ ಪವಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT