ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯದ ಸದುಪಯೋಗಕ್ಕೆ ಮಕ್ಕಳಿಗೆ ಸಲಹೆ

ಅಣ್ಣಿಗೇರಿಯಲ್ಲಿ ‘ಚಿಗುರು’ ಮಕ್ಕಳ ಬೇಸಿಗೆ ಶಿಬಿರ
Last Updated 23 ಏಪ್ರಿಲ್ 2018, 8:49 IST
ಅಕ್ಷರ ಗಾತ್ರ

ಅಣ್ಣಿಗೇರಿ: ರಜೆಯಲ್ಲಿ ಸಮಯವನ್ನು ಹಾಳು ಮಾಡದೇ ಇಂತಹ ವಿಶೇಷ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿ ವೈ.ಎಲ್.ಶೀಗಿಹಳ್ಳಿ ಹೇಳಿದರು.

ಸ್ಥಳೀಯ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್, ಆದಿಕವಿ ಪಂಪ ಕನ್ನಡ ಬಳಗ ಮತ್ತು ಜ್ಯೋತಿ ಮಹಿಳಾ ಮಂಡಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ‘ಚಿಗುರು’ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಅಷ್ಟೇ ಮುಖ್ಯ. ಮಕ್ಕಳು ಬೇಸಿಗೆ ರಜೆಯಲ್ಲಿ ಸಮಯವನ್ನು ಹಾಳು ಮಾಡದೇ ಇಂತಹ ವಿಶೇಷ ಶಿಬಿರಗಳಲ್ಲಿ ಭಾಗವಹಿಸಿ ಕಲೆ, ನೃತ್ಯ, ಭಾಷಣ, ಸಂಗೀತ, ಯೋಗ, ವ್ಯಕ್ತಿತ್ವ ವಿಕಸನದಂತಹ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವೀರೇಶ ಕುಬಸದ ಮಾತನಾಡಿ ಪ್ರತಿ ವರ್ಷವೂ ನಮ್ಮ ಸಂಸ್ಥೆಯಲ್ಲಿ ಇಂತಹ ಹಲವಾರು ವಿಶೇಷ ಶಿಬಿರಗಳನ್ನು ಉಚಿತವಾಗಿ ಹಮ್ಮಿಕೊಂಡು ಬರುತ್ತಿದ್ದೇವೆ. ಪಾಲಕರು ತಮ್ಮ ಮಕ್ಕಳನ್ನು ಇಂತಹ ವಿಶೇಷ ಶಿಬಿರಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು ಎಂದರು.

ಒಂದು ತಿಂಗಳ ಕಾಲ ನಿರಂತರವಾಗಿ ನಡೆಯುವ ಈ ಶಿಬಿರದಲ್ಲಿ ವಿಶೇಷ ವ್ಯಕ್ತಿಗಳನ್ನು ಕರೆಸಿ ಅವರಿಂದ ಬೋಧನೆ ಮಾಡಿಸಲಾಗುವುದು. ಪ್ರತಿದಿನ ಶಿಬಿರದ ನಂತರ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿರುತ್ತದೆ ಎಂದರು.

ಮುಖ್ಯ ಅತಿಥಿ ಸ್ಥಾನ ವಹಿಸಿದ ಜಗದೀಶ ಗಾಣಿಗೇರ ಮಾತನಾಡಿ ಪ್ರತಿಯೊಬ್ಬ ಮಕ್ಕಳಲ್ಲಿಯೂ ಒಂದೊಂದು ವಿಶೇಷ ಪ್ರತಿಭೆ ಅಡಗಿದೆ. ಇಂತಹ ಪ್ರತಿಭೆಯನ್ನು ಹೊರಹಾಕಲಿಕ್ಕೆ ಇಂತಹ ಸಂಸ್ಥೆಗಳು ಮುಂದಾಗಿರುವುದು ಶ್ಲಾಘನೀಯ. ಮಕ್ಕಳಲ್ಲಿಯ ಪ್ರತಿಯೊಂದು ಪ್ರತಿಭೆಯನ್ನು ಗುರುತಿಸಿ ಬೆಳಗಿಸಲು ಮುಂದಾಗಿರುವ ಆದಿಕವಿ ಪಂಪ ಕನ್ನಡ ಬಳಗದ ಸೇವೆ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಶಿಕ್ಷಕ ಪ್ರಕಾಶ ಶಂಖೋ ಮಾತನಾಡಿ ಉಭಯ ಸಂಸ್ಥೆಗಳ ಬಗ್ಗೆ ಪರಿಚಯ ಮಾಡುವ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದರು.

ಶಿಕ್ಷಕ ಮಹ್ಮದ್‌ ರಫಿ ಮುಳಗುಂದ, ಪ್ರಿಯಾಂಕಾ, ಆನಂದ ಮೊದಲಾದವರು ಭಕ್ತಿಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.
ದಾನೇಶ್ವರಿ ಅಂಗಡಿ ಸ್ವಾಗತಿಸಿದರು. ಸೃಷ್ಟಿ ಹುಣಸಿಮರದ ನಿರೂಪಿಸಿದರು. ಪ್ರಿಯಾಂಕಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT