ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಿದ ಚಾಕರಿಗೆ ಕೂಲಿ ಕೇಳುತ್ತಿರುವೆ

ಬಾಕಿ ಕೆಲಸ ಮಾಡುವ ಬದ್ಧತೆ ನನ್ನದು: ಸಚಿವ ಪ್ರಮೋದ್ ಮಧ್ವರಾಜ್
Last Updated 23 ಏಪ್ರಿಲ್ 2018, 13:12 IST
ಅಕ್ಷರ ಗಾತ್ರ

ಉಡುಪಿ: ‘ಕಳೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ನೀಡಿದ ನಂತರ ಐದು ವರ್ಷ ಹನ್ನೊಂದು ತಿಂಗಳು ಕ್ಷೇತ್ರದ ಜನರ ಚಾಕರಿ ಮಾಡಿದ್ದೇನೆ. ಇನ್ನು 20 ದಿನಗಳ ನನ್ನ ಪರವಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಜನಾಶೀರ್ವಾದ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಮತ್ತೊಂದು ಅವಕಾಶ ನೀಡಿದರೆ ಮತ್ತೆ ಐದು ವರ್ಷಗಳ ಕಾಲ ನಿರಂತರವಾಗಿ ನಿಮ್ಮ ಸೇವೆ ಮಾಡುತ್ತೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ನಾನು ಹೇಳುವುದಿಲ್ಲ. ಆದರೆ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇನೆ ಎಂದು ಧೈರ್ಯದಿಂದ ಹೇಳುತ್ತೇನೆ. ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಬಳಿ ಬೇಡಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ’ ಎಂದು ಅವರು ಹೇಳಿದರು.

‘ಬಡವರಿಗೆ ವಸತಿ ನೀಡಿ ಮನೆ ನಿರ್ಮಿಸಿಕೊಡುವ ಕೆಲಸವನ್ನು ಮಾಡಲು ಬದ್ಧವಾಗಿದ್ದೇನೆ. ಪರಿಭಾವಿತ ಅರಣ್ಯ ಸಮಸ್ಯೆಯನ್ನು ಬಗೆಹರಿಸಿ 94ಸಿ, 94ಸಿಸಿ ಅನ್ವಯ ಎಲ್ಲರಿಗೂ ಹಕ್ಕು ಪತ್ರಗಳನ್ನು ಎಲ್ಲರಿಗೂ ಕೊಡಿಸುತ್ತೇನೆ. ಉಡುಪಿ ನಗರದ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ನೀಡಲು ₹270 ಕೋಟಿ ಮೊತ್ತದ ವಾರಾಹಿ ಯೋಜನೆಯನ್ನು ಈಗಾಗಲೇ ಆರಂಭಿಸಲಾಗಿದ್ದು, ಅದನ್ನು ಪೂರ್ಣಗೊಳಿಸಲಾಗುವುದು. ಚಾಂತಾರು ಮತ್ತು ತೆಂಕನಿಡಿಯೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸಿ ಬ್ರಾಹ್ಮಾವರದ ಭಾಗದ ನೀರಿನ ಸಮಸ್ಯೆ ಸಹ ಬಗೆಹರಿ ಸಲಾಗುವುದು’ ಎಂದು ಭರವಸೆ ನೀಡಿದರು.

‘ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 213 ಬೂತ್‌ಗಳಿವೆ. ಇನ್ನೊಂದು ಅವಕಾಶ ನೀಡಿದರೆ. ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಪ್ರತಿ ಬೂತ್‌ಗೆ ಕರೆದುಕೊಂಡು ಬಂದು ಜನ ಸಂಪರ್ಕ ಸಭೆ ನಡೆಸಲಾಗುವುದು. ಇನ್ನಷ್ಟು ಪ್ರಾಮಾಣಿಕತೆಯಿಂದ ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ’ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕೆರೆ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಮುಖಂಡರಾದ ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಜನಾರ್ದನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು, ವಿಶ್ವಾಸ್ ಅಮಿನ್, ಕ್ರಿಸ್ಟನ್ ಅಲ್ಮೇಡ, ವೇರೋನಿಕ ಕರ್ನೇಲಿಯೊ, ಎಂ.ಎ. ಗಫೂರ್, ಉದಯ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು. ಕುಂದಾಪುರದ ಅಭ್ಯರ್ಥಿ ರಾಕೇಶ್ ಮಲ್ಲಿ, ಬೈಂದೂರು ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹಾಗೂ ಕಾರ್ಕಳದ ಅಭ್ಯರ್ಥಿ ಎಚ್‌. ಗೋಪಾಲ ಭಂಡಾರಿ ಸಮಾವೇಶದಲ್ಲಿ ಭಾಗವಹಿಸಲಿಲ್ಲ.

ಉಡುಪಿ ವಿಧಾನಸಭಾ ಕ್ಷೇತ್ರದ ಇತಿಹಾದಲ್ಲಿಯೇ ಪ್ರಮೋದ್ ಮಧ್ವರಾಜ್ ಚಾರಿತ್ರಿಕ ಎನ್ನುವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮೀನುಗಾರಿಕಾ ಸಚಿವರಾಗಿ ಮೀನುಗಾರರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕ್ರೀಡಾ ಇಲಾಖೆಗೂ ಹೊಸ ಚೈತನ್ಯ ನೀಡಿದ ಅವರು ಯುವಕರನ್ನು ಮುಟ್ಟುವಂತಹ ಯೋಜನೆ ಜಾರಿ ಮಾಡಿದ್ದಾರೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವಾರಾಹಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರ ಸಹಕಾರ ಹಾಗೂ ಸಿಎಂ ಮನವೊಲಿಸಿ ಅನುದಾನ ತಂದ ಪ್ರಮೋದ್ ಅವರು ಇದಕ್ಕೆ ಕಾರಣ. ಖಾಸಗಿ ಸಹ ಭಾಗಿತ್ವದಲ್ಲಿ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.

ನನ್ನ ಸಚಿವ ಸ್ಥಾನ ಕೈತಪ್ಪಿದಕ್ಕೂ ಹಾಗೂ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮಂತ್ರಿ ಪದವಿ ಸಿಕ್ಕಿದಕ್ಕೂ ಯಾವುದೇ ಸಂಬಂಧ ಇಲ್ಲ. ಕಾಗೋಡು ತಿಮ್ಮಪ್ಪ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಸ್ಥಾನ ತ್ಯಜಿಸಬೇಕಾಯಿತು. ಚಿಂಚನಸೂರ್ ಅವರ ಬದಲು ಪ್ರಮೋದ್‌ಗೆ ಸಚಿವ ಸ್ಥಾನ ನೀಡಲಾಯಿತು ಎಂದು ಸ್ಪಷ್ಟಪಡಿಸಿದರು.

**

ಜನರೊಂದಿಗೆ ವಿನಯದೊಂದಿಗೆ ವರ್ತಿಸುವ ಪ್ರಮೋದ್ ಅವರು ಸದಾಕಾಲ ಜನರ ಸಂಪರ್ಕಕ್ಕೆ ಸಿಗುವ ವ್ಯಕ್ತಿ. ಅವರು ಸಚಿವರಾಗಬೇಕು. ಜನರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿ ಗೆಲ್ಲಿಸಿ
– ರಾಜೇಂದ್ರಕುಮಾರ್,ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT