ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಿ ನೋಡಿ, ಇದು ಹಸೆ!

Last Updated 23 ಏಪ್ರಿಲ್ 2018, 20:28 IST
ಅಕ್ಷರ ಗಾತ್ರ

ಅದೊಂದು ಪುಟ್ಟ ಮನೆ. ಅದರೊಳಗೆ ಇಬ್ಬರು ಯುವತಿಯರು ಕನ್ನಡಿಯ ಮುಂದೆ ನಿಂತು ಸಿಂಗರಿಸಿಕೊಳ್ಳುತ್ತಿದ್ದಾರೆ. ಬಹುಶಃ ಎಲ್ಲಿಗೋ ಹೋಗುವುದಕ್ಕೆ ಅಣಿಯಾಗುವಂತಿದೆ. ಆ ಮನೆಯ ಸುತ್ತಲೂ ಬೇಲಿ ಹೊರಾಂಗಣವಂತೂ ಒಪ್ಪಓರಣ. ಹಜಾರದ ಹೊರಗೆ ನಾಲ್ಕೈದು ಪುಟ್ಟ ಮಕ್ಕಳು ಆಡುತ್ತಿದ್ದಾರೆ. ಅಲ್ಲೇ ಪಕ್ಕದಲ್ಲೊಂದು ಬಾವಿ. ಇನ್ನಿಬ್ಬರು ಮಹಿಳೆಯರು ಅಲ್ಲಿ ನೀರು ಸೇದುತ್ತಿದ್ದಾರೆ...

ಇಷ್ಟೆಲ್ಲ ವಿವರಣೆ ಕೇಳಿದ ಮೇಲೆ ಇದೊಂದು ಬೇಸಿಗೆಯ ರಜಾ ದಿನದ ಹಳ್ಳಿಯ ದೃಶ್ಯ ಅಂದ್ಕೊಂಡ್ರೆ ತಪ್ಪು. ಇತ್ತೀಚೆಗೆ ಸಾಗರಕ್ಕೆ ಭೇಟಿ ನೀಡಿದಾಗ ಹಳ್ಳಿಯೊಂದರ ಮನೆಯ ಗೋಡೆಯ ಮೇಲೆ ಕಂಡು ಬಂದ ಕುಸುರಿ ಚಿತ್ರದ ಸೂಕ್ಷ್ಮತೆಗಳಿವು.

ಅಪ್ಪಟ ಕನ್ನಡ ಮಣ್ಣಿನ ಈ ಕಲೆಯೇ ಹಸೆ ಚಿತ್ತಾರ. ಮಲೆನಾಡಿನ ಸಾಗರ, ಶಿರಸಿ, ಸಿದ್ದಾಪುರ, ಹೊಸನಗರ ಭಾಗದ ಹಳ್ಳಿಗಳಿಗೆ ಭೇಟಿ ನೀಡಿದರೆ ಇಲ್ಲಿನ ಗೋಡೆಗಳಲ್ಲಿ ಈ ಕಲೆ ಇನ್ನೂ ಜೀವಂತ. ಈ ಭಾಗದಲ್ಲಿ ಹೆಚ್ಚಿಗೆ ವಾಸವಾಗಿರುವ ದೀವರು ಮತ್ತು ಆದಿ ದ್ರಾವಿಡ ಸಮುದಾಯದವರು ಬೆಳೆಸಿ ಪೋಷಿಸಿದ ಈ ಕಲೆಯು ಮೂಲತಃ ಗೋಡೆ ಮೇಲೆ ಚಿತ್ರಿಸುವ ಚಿತ್ತಾರ.

ಹಸೆಚಿತ್ತಾರದಲ್ಲಿ ಬಳಸುವ ಬಣ್ಣಗಳು ಅಪ್ಪಟ ನೈಸರ್ಗಿಕ ಮೂಲ ದವಾಗಿದ್ದು ಅವುಗಳ ಆಧಾರದ ಮೇಲೆಯೇ ಇವುಗಳನ್ನು ಮೂರು ಪ್ರಕಾರಗಳನ್ನಾಗಿ ವಿಂಗಡಿಸಲಾಗಿದೆ. ಕೆಮ್ಮಣ್ಣನ್ನು ಪ್ರಮುಖವಾಗಿ ಹಿನ್ನೆಲೆಯಲ್ಲಿ ಬಳಸಿದರೆ ಕೆಂಪು ಹಸೆ, ಇದ್ದಿಲನ್ನು ಬಳಸಿದಲ್ಲಿ ಕಪ್ಪು ಹಸೆ, ಅಕ್ಕಿ ಹಿಟ್ಟು ಉಪಯೋಗಿಸಿದರೆ ಬಿಳಿಹಸೆ. ಇವುಗಳ ಜೊತೆಯಲ್ಲಿ ಹಸೆಯನ್ನು ರಂಗುಗೊಳಿಸಲು ಅರಿಸಿನ, ಹಾಲು, ಸುಣ್ಣ, ಕಾರೆಕಾಯಿ, ಗುರಗೆಕಾಯಿಗಳನ್ನು ಬಳಸಿ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ. ಹಸೆ ಚಿತ್ತಾರಗಳನ್ನು ಮೂಡಿಸಲು ಬಳಸುವ ಬ್ರಷ್ ಸಹ ಹುಲ್ಲು ಮತ್ತು ನಾರಿನದಾಗಿದೆ. ಆದರೆ, ಇದೀಗ ಹೊಸಪೀಳಿಗೆಯ ಕಲಾವಿದರು ಅಲ್ಲಲ್ಲಿ ಪೇಂಟಿಂಗ್‌ ಬ್ರಷ್‍ಗಳನ್ನು ಬಳಸತೊಡಗಿದ್ದಾರೆ.

ಹಸೆ ಚಿತ್ತಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಮಗೆ ಪ್ರಮುಖವಾಗಿ ಕಾಣುವುದು ರೇಖಾಗಣಿತದ ನಾಲ್ಕು ಆಕಾರಗಳಾದ ಗೋಲ, ತ್ರಿಕೋನ, ಲಂಬ ಮತ್ತು ಚೌಕ. ಈ ಆಕಾರಗಳನ್ನಿಟ್ಟುಕೊಂಡು ಆಗೆಲ್ಲ ಮಣ್ಣಿನ ಗೋಡೆಗಳ ಮೇಲೆ ಸೆಗಣಿಯನ್ನು ಸಾರಿಸಿ ನಿಜಜೀವನದ ವಿವಿಧ ಪಾತ್ರಗಳನ್ನೊಳಗೊಂಡ ಸುಂದರವಾದ ಹಸೆಗಳನ್ನು ಚಿತ್ರಿಸಲಾಗುತ್ತಿತ್ತು.

ಮನೆಯಲ್ಲಿ ಮದುವೆಯಂತಹ ಮಂಗಲಕಾರ್ಯಗಳಿದ್ದರಂತೂ ಹೊಸ ಹಸೆಚಿತ್ರ ಮೂಡಲೇಬೇಕು. ಆ ಪುಟ್ಟ ಸಾಲುಗಳ ನಡುವೆ ಒಂದಿನಿತೂ ಜಾಗ ಬಿಡದೇ ಈ ಆಕಾರಗಳಿಂದ ಒಂದು ಜೀವನಶೈಲಿಯನ್ನೇ ಚಿತ್ರಿಸುವ ಸೂಕ್ಷ್ಮತೆಗೆ ಎಂಥವರೂ ತಲೆಬಾಗಬೇಕು. ಕ್ರಮೇಣ ಕೂಡು ಕುಟುಂಬಗಳು ವಿಭಜನೆಯಾಗಿ ಮಣ್ಣಿನ ಮನೆಗಳಿಗೆಲ್ಲ ಕಾಂಕ್ರೀಟೀಕರಣವಾದಂತೆಲ್ಲ ಈ ಸಂಸ್ಕೃತಿ ನಶಿಸಲಾರಂಭಿಸಿತು. ಅದೃಷ್ಟವಶಾತ್ ಕೆಲ ಹಳೇ ತಲೆಮಾರಿನವರ ಜೊತೆಗೆ ಯುವ ಕಲಾವಿದರ ಆಸಕ್ತಿಯಿಂದ ಈ ಕಲೆಯಿನ್ನೂ ಬದುಕುಳಿದಿದೆ.

ಬದಲಾವಣೆ ಜಗದ ನಿಯಮವೆಂದ ಮೇಲೆ ಹಸೆಚಿತ್ತಾರವೂ ಇದಕ್ಕೆ ಹೊರತೇನಲ್ಲ. ಗೋಡೆಗಷ್ಟೇ ಅಂಟಿಕೊಂಡಿದ್ದ ಈ ಕಲೆಯು ಹೊಸತಲೆಮಾರಿನ ಕಲಾವಿದ ರಿಂದ ಕ್ಯಾನ್ವಾಸ್‌ಗೂ ಇಳಿದಿದೆ. ಮೂಲ ನಿಯಮಗಳನ್ನು ಹಾಗೆಯೇ ಇಟ್ಟು ಈ ಕಲೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿರುವವರಲ್ಲಿ ಸಾಗರದ ರಾಧಾಕೃಷ್ಣ ಬಂದಗದ್ದೆ ಪ್ರಮುಖರು.

‘ಬಾಲ್ಯದಲ್ಲಿ ನಮ್ಮ ಹಳ್ಳಿ ಮನೆಗಳಲ್ಲೆಲ್ಲ ಈ ಭಿತ್ತಿಚಿತ್ತಾರಗಳನ್ನು ನೋಡಿ ಬೆಳೆದವರು ನಾವು. ಓದಲು ಕೆಲಕಾಲ ಹೊರಗಿದ್ದು ನಂತರ ಮತ್ತೆ ಸಾಗರಕ್ಕೆ ವಾಪಸ್ಸಾದಾಗ ಎಲ್ಲೆಲ್ಲೂ ಕಾಂಕ್ರೀಟಿನ ಗೋಡೆಗಳು ಬಂದು, ಈ ಹಸೆಗಳು, ಮನೆಗಳಿಂದ ಮಾಯವಾಗಿದ್ದವು. ನಗರೀಕರಣದ ಪ್ರಭಾವದಲ್ಲಿ ಈ ನೆಲದ ಮೂಲ ಸಂಸ್ಕೃತಿಯೆಲ್ಲೋ ಕಳೆದುಹೋಗುತ್ತಿದೆ ಎಂದೆನಿಸಿತು. ಆದರೆ ಭೂಮಿ ಹುಣ್ಣಿಮೆ ಸಮಯದಲ್ಲಿ ಹೆಂಗಸರು ಮನೆಯಲ್ಲಿ ಬುಟ್ಟಿಗಳನ್ನು ಮಾಡಿ ಈ ಹಸೆಯಿಂದ ಚಿತ್ರಿಸುವ ಸಂಪ್ರದಾಯ ಮಾತ್ರ ಹಾಗೇ ಉಳಿದುಕೊಂಡಿತ್ತು. ಆಗಲೇ ಈ ಕಲೆಯನ್ನು ಉಳಿಸುವ ಬಗ್ಗೆ ಛಲ ಮೂಡಿದ್ದು’ ಎಂದು ಅವರು ಹೇಳುತ್ತಾರೆ.

‘ನಾನು ಈ ಕಲೆಯನ್ನು ಕಲಿತು ಕೆಲವು ಪ್ರಯೋಗಗಳನ್ನು ಮಾಡತೊಡಗಿದೆ. ಇಂಟರ್‌ನೆಟ್ ಮೂಲಕ ನನ್ನ ಚಿತ್ರಗಳನ್ನು ಗಮನಿಸಿದ ಹಲವು ಕಲಾವಿದರು ಸಂಪರ್ಕಕ್ಕೆ ಬಂದು ಇನ್ನಷ್ಟು ಮಾಹಿತಿ ವಿನಿಮಯ ಸಾಧ್ಯವಾಗಿ ಮೂಲ ಕಲೆಯ ಜೊತೆಗೆ ಮೆಕ್ಸಿಕೊ ಹಾಗೂ ಆಫ್ರಿಕಾದ ಕೆಲವು ಪಂಗಡಗಳ ಇಂತಹುದೇ ಕಲೆಗಳ ವಿನ್ಯಾಸಗಳನ್ನು ಸೇರಿಸಿದೆ’ ಎನ್ನುತ್ತಾರೆ ರಾಧಾಕೃಷ್ಣ.

ಇವರ ಬಳಿ ಈ ಕಲೆಯನ್ನು ಕಲಿಯಲು ಹಲವರು ಬರುತ್ತಿದ್ದು ಸಾಗರದಲ್ಲಿ ವರ್ಷಕ್ಕೆರಡು ಬಾರಿ ಶಿಬಿರಗಳನ್ನಿವರು ಆಯೋಜಿಸುತ್ತಾರೆ. ಇವರ ಶಿಷ್ಯವೃಂದದ ಸಂಖ್ಯೆ ಈಗಾಗಲೇ ಸಾವಿರ ದಾಟಿದೆ.

ವಿನ್ಯಾಸದಲ್ಲಿ ಮಹಾರಾಷ್ಟ್ರ ಮೂಲದ ವಾರ್ಲಿ ಕಲೆಯು ನಮ್ಮ ಹಸೆಚಿತ್ತಾರಗಳಿಗೆ ಬಹಳ ಹತ್ತಿರವಾಗಿದೆ. ಇಲ್ಲಿಯಂತೆಯೇ ಅಲ್ಲಿನ ಠಾಣೆ ಜಿಲ್ಲೆಯ ದಹನು ಮತ್ತು ಆಜೂಬಾಜು ಇರುವ ಕೆಲ ತಾಲ್ಲೂಕುಗಳ ಮೂಲ ಪಂಗಡಗಳ ಈ ಕಲೆಯನ್ನು ಅಲ್ಲಿನವರು ಮಾರ್ಕೆಟ್ ಮಾಡಿರುವ ರೀತಿ ಶ್ಲಾಘನೀಯ. ಈ ಕಾರಣದಿಂದ ವಾರ್ಲಿ ಕಲೆಯ ಕಲಾವಿದರಿಗೆ ಈಗ ಎಲ್ಲೆಡೆ ಸಖತ್ ಬೇಡಿಕೆ.

ಶಹರಗಳಲ್ಲಿ ಒಳಾಂಗಣ ವಿನ್ಯಾಸಕ್ಕಾಗಿ ಈ ಹಸೆಚಿತ್ತಾರಗಳಿಗೆ ಬೇಡಿಕೆ ಇದೆಯಾದರೂ ಎಲ್ಲೋ ಸಂವಹನ ಮತ್ತು ಸೂಕ್ತ ವ್ಯಾವಹಾರಿಕ ಜಾಣ್ಮೆಯನ್ನು ಪ್ರದರ್ಶಿಸಿ ಮಾರುಕಟ್ಟೆಯನ್ನು ಸೃಷ್ಟಿಸಲು ನಾವು ವಿಫಲರಾಗಿದ್ದೇವೆ ಎಂದೆನಿಸುತ್ತಿದೆ. ಪಕ್ಕಾ ಗ್ರಾಮೀಣ ಪ್ರದೇಶದ ಈ ಕಲಾವಿದರನ್ನು ಗುರುತಿಸಿ ಅವರಿಗೇ ಸೂಕ್ತ ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟು ಈ ಕಲೆಯನ್ನು ಉಳಿಸುವ ಜರೂರು ಇದೆ. ಈ ಕಲೆಯನ್ನೇ ನಂಬಿಕೊಂಡಿರುವ ಕಲಾವಿದರ ಮುಖದಲ್ಲಿ ಮಂದಹಾಸದ ಚಿತ್ತಾರ ಮೂಡಬೇಕು ಎಂಬುದಷ್ಟೇ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT