ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುತ್ತಣ್ಣನಿಗೆ ಅನ್ನವೂ ದೇವರು’

Last Updated 23 ಏಪ್ರಿಲ್ 2018, 20:25 IST
ಅಕ್ಷರ ಗಾತ್ರ

ನಿಮ್ಮ ಫಿಟ್‌ನೆಸ್‌ ಮಂತ್ರ ಏನು? ನಿಮಗೆ ಯಾವ ತಿಂಡಿ ಇಷ್ಟ? ಇದು ಸೆಲೆಬ್ರಿಟಿಗಳ ಸಂದರ್ಶನ ಮಾಡುವಾಗ ಕೇಳುವ ಸಾಮಾನ್ಯ ಪ್ರಶ್ನೆ. ಆದರೆ ರಾಜ್‌ಕುಮಾರ್‌ಗೆ ಡಯೆಟ್‌, ಫಿಟ್‌ನೆಸ್‌ ಅಂದರೆ ಬಹಳ ದೂರ. ಅದರ ಅಗತ್ಯವೂ ಅವರಿಗೆ ಬರಲೇ ಇಲ್ಲ. ಅವರು ಸದಾ ಫಿಟ್‌.

‘ಅವರಿಗೆ ಊಟ ಮಾಡುವುದೆಂದರೆ ಅದೊಂದು ಸಂಭ್ರಮದ ಗಳಿಗೆ. ಯಾವುದೇ ಊಟವನ್ನು ಅವರು ಇಷ್ಟಪಟ್ಟು ಚಪ್ಪರಿಸಿ ತಿನ್ನುತ್ತಿದ್ದರು. ಊಟದ ವಿಚಾರದಲ್ಲಿ ಒಂದು ದಿನವೂ ಪಾರ್ವತಮ್ಮ ಅವರನ್ನು ಗೋಳು ಹೊಯ್ದುಕೊಂಡವರಲ್ಲ. ಸಾಮಾನ್ಯ ಅನ್ನ–ಸಾಂಬಾರ್ ಕೊಟ್ಟರೂ ಬಾಡೂಟ ಮಾಡಿದಷ್ಟೇ ಸಂತೋಷದಿಂದ ಊಟ ಮಾಡುತ್ತಿದ್ದರು’ ಎಂದು ರಾಜ್‌ ಅಳಿಯ ಗೋವಿಂದರಾಜು ಹೇಳುತ್ತಾರೆ.

ಗೋವಿಂದರಾಜು ಅವರು ರಾಜ್‌ಕುಮಾರ್‌ ಅವರ ಮೊದಲ ಪುತ್ರಿ ಲಕ್ಷ್ಮಿ ಅವರ ಪತಿ ಮತ್ತು ಪಾರ್ವತಮ್ಮನವರ ತಮ್ಮ ಕೂಡಾ. ನಲವತ್ತು ವರ್ಷ ರಾಜ್‌ ಜೊತೆಗೇ ಇದ್ದವರು. ಅವರ ನಿರ್ಮಾಣ ಸಂಸ್ಥೆಯ ಜವಾಬ್ದಾರಿ ಹೊತ್ತವರು. ‘ರಾಜ್‌ಕುಮಾರ್‌ ಅವರು ಮಾಂಸಾಹಾರದಷ್ಟೇ ತರಕಾರಿಗಳನ್ನೂ ಇಷ್ಟಪಡುತ್ತಿದ್ದರು. ಅವರಿಗೆ ಮೂಲಂಗಿ, ನುಗ್ಗೆಕಾಯಿ ಸಾಂಬಾರು ಬಹಳ ಇಷ್ಟ. ಮಾಂಸಾಹಾರ ಇಷ್ಟವಾದರೂ ಸೋಮವಾರ, ಗುರುವಾರ, ಶನಿವಾರ ಮನೆಯಲ್ಲಿ ಮಾತ್ರವಲ್ಲ ಪ್ರೊಡಕ್ಷನ್‌ ಹೌಸ್‌ನಲ್ಲೂ ನಿಷಿದ್ಧ. ಆದರೆ ಉಳಿದ ನಾಲ್ಕು ದಿನ ಪ್ರೊಡಕ್ಷನ್‌ ಹೌಸ್‌ನಲ್ಲಿ ಮಾಂಸಾಹಾರ ಇರಲೇ ಬೇಕು. ಸಸ್ಯಾಹಾರ ಊಟದಲ್ಲಿ ಒಂದು ಸಿಹಿತಿಂಡಿ ಇರಲೇಬೇಕು. ಅದು ಅವರಿಗೆ ಇಷ್ಟ ಎಂದಲ್ಲ, ಅವರ ಸಂಸ್ಥೆಯಲ್ಲಿ ದುಡಿಯುವ ಎಲ್ಲರಿಗೂ ಹೊಟ್ಟೆ ತುಂಬ, ರುಚಿಯಾದ ಊಟ ಹಾಕಬೇಕು ಎಂಬುದು ಅವರ ಆಸೆ. ಪ್ರತಿ ಹುಡುಗರನ್ನು ಕರೆದು ಸರಿಯಾಗಿ ಊಟ ಹಾಕಿದ್ದಾರಾ ಎಂದು ವಿಚಾರಿಸದೇ ಇರುತ್ತಿರಲಿಲ್ಲ’

ಬಿಡದಿ ತಟ್ಟೆ ಇಡ್ಲಿ: ಬಿಡದಿ ಬಳಿಯ ಅವರ ತೋಟದ ಮನೆಗೆ ಹೋಗುವಾಗಲೆಲ್ಲ  ಬಿಡದಿ ರಸ್ತೆಯಲ್ಲಿರುವ ‘ರೇಣುಕಾ ಹೋಟೆಲ್‌’ಗೆ ಹೋಗಿ ಅಲ್ಲೇ ಕೂತು ತಟ್ಟೆ ಇಡ್ಲಿ ತಿನ್ನುತ್ತಿದ್ದರು. ಕೆಲವು ಸಲ ತೋಟದ ಮನೆಗೆ ಪಾರ್ಸೆಲ್‌ ತರಿಸುತ್ತಿದ್ದರು. ತುಮಕೂರು ರಸ್ತೆಯ  ಕ್ಯಾತಸಂದ್ರದ ‘ರವಿ ಇಡ್ಲಿ ಹೋಟೆಲ್‌’ನ ತಟ್ಟೆ ಇಡ್ಲಿ ಬಹಳ ಇಷ್ಟ. ಅಲ್ಲಿಂದ ಹಾಟ್‌ಕೇಸ್‌ನಲ್ಲಿ ಇಡ್ಲಿ ತರಿಸಿ ತಿನ್ನುತ್ತಿದ್ದರು. ರಾಜ್ಯದ ಎಲ್ಲಾ ಭಾಗಗಳ ಊಟವೂ ಇಷ್ಟ. ಉತ್ತರ ಕರ್ನಾಟಕದ  ರಾಜ್ ಚಿತ್ರಗಳ ವಿತರಕರೊಬ್ಬರು ಕಂಪ್ಲಿಯಿಂದ ಜೋಳದ ರೊಟ್ಟಿ, ಚಟ್ನಿ ಪುಡಿ ತಂದು ಕೊಡುತ್ತಿದ್ದರು’ ಎನ್ನುತ್ತಾರೆ ಗೋವಿಂದರಾಜು.  

ಒಬ್ಬಟ್ಟು ಇಷ್ಟ: ಹಬ್ಬದ ದಿನ ಮಾಡುವ ಒಬ್ಬಟ್ಟು ಮತ್ತು ಸಾರು ರಾಜಣ್ಣ ಅವರಿಗೆ ಬಹಳ ಇಷ್ಟ.ಮನೆಯಲ್ಲಿ ಪಾರ್ವತಮ್ಮನವರು ಅವರ ಮುಂದೆ ಕೂತು ಊಟ ಬಡಿಸಬೇಕು. ಯಾವತ್ತೂ ಯಾರೇ ಮಾಡಿದ ಅಡುಗೆಯಾಗಲಿ ಅಸಮಾಧಾನಪಟ್ಟುಕೊಂಡು ಉಂಡಿದ್ದು ನಾನು ಕಂಡಿಲ್ಲ’ ಅಂತಾರೆ ಗೋವಿಂದರಾಜು.

ಮಟನ್‌ಗೆ ತರಕಾರಿ ಬೆರಕೆ

ನಾಟಿ ಕೋಳಿ ಸಾರು– ಮುದ್ದೆ ಅಂದರೆ ರಾಜಣ್ಣ ಅವರಿಗೆ ಬಹಳ ಇಷ್ಟ. ಮಟನ್‌ ಸಾರಿಗೆ ಮಾತ್ರ ನುಗ್ಗೆಕಾಯಿ, ಮೂಲಂಗಿ, ನೂಕೋಲು ಹಾಕಲೇಬೇಕು. ಮೀನೂಟ ಕೂಡಾ ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT