ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಘಟಾನುಘಟಿಗಳು

ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ
Last Updated 24 ಏಪ್ರಿಲ್ 2018, 12:08 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ಸೋಮವಾರವೇ ಜಿಲ್ಲೆಯ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸೋಮವಾರ ಮತ್ತೊಮ್ಮೆ ಎರಡು ನಾಮಪತ್ರ ಸಲ್ಲಿಸಿದರು. ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಜೆಡಿಎಸ್‌ ಮಾಯಕೊಂಡ ಅಭ್ಯರ್ಥಿ ಶೀಲಾನಾಯ್ಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಪ್ರಮುಖರು.

ಮಾಯಕೊಂಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರೊ. ಲಿಂಗಣ್ಣ, ಸ್ವತಂತ್ರ ಅಭ್ಯರ್ಥಿಯಾಗಿ ಆನಂದಪ್ಪ, ದಾವಣಗೆರೆ ದಕ್ಷಿಣದಿಂದ ಎಚ್.ಎಸ್‌. ನಾಗರಾಜ್ ಅವರೂ ನಾಮಪತ್ರ ಸಲ್ಲಿಸಿದರು.

ಮೆರವಣಿಗೆ: ನಗರದ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಟ ಬೆಂಬಲಿಗರ ಮೆರವಣಿಗೆ ಪ್ರಮುಖ ವೃತ್ತಗಳನ್ನು ಹಾದು ಚುನಾವಣಾ ಕಚೇರಿಯನ್ನು ತಲುಪಿತು. ನಗರದ ಹಗೆದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ದೊಡ್ಡಪೇಟೆ, ಹೊಂಡದ ಸರ್ಕಲ್, ಜಾಲಿ ನಗರವನ್ನು ಹಾದು ಬರುವುದು ತಡವಾಗಿದ್ದರಿಂದ ಮೆರವಣಿಗೆ ವಾಹನದಿಂದ ಇಳಿದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮತ್ತೊಂದು ವಾಹನದ ಮೂಲಕ ನಾಮಪತ್ರ ಸಲ್ಲಿಸಲು ಪಾಲಿಕೆ ಕಚೇರಿಗೆ ಬಂದರು.

ಎಚ್‌.ಎಸ್‌. ನಾಗರಾಜ್‌ ಬಂಡಾಯ ನಾಮಪತ್ರ ಸಲ್ಲಿಕೆ: ‘ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದೇನೆ. ಮಂಗಳವಾರ 3 ಗಂಟೆಯವರೆಗೆ ಕಾಯುತ್ತೇನೆ.  ಪಕ್ಷ ನನಗೆ ‘ಬಿ’ ಫಾರಂ ನೀಡಲಿದೆ ಎಂಬ ವಿಶ್ವಾಸವಿದೆ. ಟಿಕೆಟ್‌ ಸಿಗದಿದ್ದರೆ ಮುಂದಿನ ನಿರ್ಧಾರ ತಿಳಿಸುತ್ತೇನೆ’ ಎಂದು ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎಚ್‌.ಎಸ್‌.ನಾಗರಾಜ್‌ ಹೇಳಿದರು. ಈಗಾಗಲೇ ಬಿಜೆಪಿಯಿಂದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ನಾಮಪತ್ರ ಸಲ್ಲಿಸಿದ್ದಾರೆ.

‘ಕ್ಷೇತ್ರದಲ್ಲಿ ಬದಲಾವಣೆ ಅಲೆ’

‘ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಅಲೆ ಬೀಸುತ್ತಿದ್ದು, ಗೆಲ್ಲುವ ವಿಶ್ವಾಸ ಇದೆ’ ಎಂದು ಜೆಡಿಎಸ್‌ ಅಭ್ಯರ್ಥಿ ಅಮಾನುಲ್ಲಾ ಖಾನ್‌ ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಪಾಲಿಕೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಕ್ಷೇತ್ರದಲ್ಲಿ ಸತತವಾಗಿ ಜಯ ಗಳಿಸಿದವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರಿಗೆ ಕನಿಷ್ಠ ಮೂಲಸೌಕರ್ಯಗಳನ್ನೂ ಕಲ್ಪಿಸಿಲ್ಲ. ಹಣದ ಆಮಿಷ ಹಾಗೂ ದಬ್ಬಾಳಿಕೆಯಿಂದ ಆಡಳಿತ ನಡೆಸುತ್ತಾ ಬಂದಿದ್ದಾರೆ ಎಂದು ದೂರಿದರು.

ಮತವನ್ನು ಮಾರಾಟ ಮಾಡಿಕೊಂಡರೆ ಅಭಿವೃದ್ಧಿಯಾಗದು ಎಂಬುದು ಕ್ಷೇತ್ರದ ಜನರಿಗೆ ಮನವರಿಕೆಯಾಗಿದೆ. ಅಭಿವೃದ್ಧಿಗೆ ಯಾರು ಒತ್ತು ಕೊಡುತ್ತಾರೇ ಅವರನ್ನು ಗೆಲ್ಲಿಸುವ ಬಗ್ಗೆ ಜನರ ಆಲೋಚಿಸುತ್ತಿದ್ದಾರೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಬಗ್ಗೆ ಜನರಿಗೆ ನಾವು ಮಾಹಿತಿ ನೀಡಿರಲಿಲ್ಲ. ಆದರೂ ಇಷ್ಟೊಂದು ಬೃಹತ್‌ ಸಂಖ್ಯೆಯಲ್ಲಿ ಜನ ಮೆರವಣಿಗೆಗೆ ಬಂದಿರುವುದು ನೋಡಿದರೆ ಆತ್ಮವಿಶ್ವಾಸ ಮೂಡಿದೆ ಎಂದರು.

ನಗರಕ್ಕೆ ಕುಡಿಯುವ ನೀರು ನೀಡುವ ಕಾರ್ಯ ಯಶಸ್ವಿಯಾಗಿದೆ. ರಸ್ತೆ, ಒಳಚರಂಡಿ, ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆ, ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗಿದೆ.  ಆಡಳಿತದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಈ ಬಾರಿಯೂ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಮತ್ತೆ ಜಯಗಳಿಸಲು ನೆರವಾಗಲಿವೆ ಎಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದರು.

ನಗರ ಸೇರಿದಂತೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಸುಮಾರು ₹ 3 ಸಾವಿರ ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ. ಈ ಹಿಂದಿನ ಯಾವ ಸರ್ಕಾರಗಳೂ ನೀಡದಷ್ಟು ಅನುದಾನವನ್ನು ಜಿಲ್ಲೆಗೆ ಸರ್ಕಾರ ನೀಡಿದೆ. ಅಭಿವೃದ್ಧಿಯಲ್ಲಿ ದಾವಣಗೆರೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.

**

ಜಗಳೂರು ಕ್ಷೇತ್ರದ ಗೊಂದಲ ಬಗೆಹರಿಸುವ ಪ್ರಯತ್ನ ನಡೆದಿದೆ. ಎಲ್ಲರೂ ತಾಳ್ಮೆಯಿಂದ ಇರಬೇಕು. ಪುಷ್ಪಾ ಲಕ್ಷ್ಮಣಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲು ಸಿದ್ಧ
– ಎಸ್‌.ಎಸ್.ಮಲ್ಲಿಕಾರ್ಜುನ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT