ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಮೈದಾನ

‌ಕಾರವಾರದ ಮಾಲಾದೇವಿ ದೇವಸ್ಥಾನದ ಎದುರಿನಿಂದಲೇ ಸಾಗಿದ ಅಭ್ಯರ್ಥಿಗಳ ಮೆರವಣಿಗೆ
Last Updated 24 ಏಪ್ರಿಲ್ 2018, 10:20 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಮಾಲಾದೇವಿ ಮೈದಾನವು ವಿವಿಧ ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಜೆಡಿಎಸ್, ಬಿಜೆಪಿ ಹಾಗೂ ಎನ್‌ಸಿಪಿ ಅಭ್ಯರ್ಥಿಗಳು ನಗರಸಭೆಯಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಲು ಇಲ್ಲಿಂದಲೇ ಮೆರವಣಿಗೆ ಆರಂಭಿಸಿದರು.

ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಪಕ್ಷದ ಟೋಪಿ, ಶಾಲು ಮತ್ತು ಅವರು ಹಿಡಿದಿದ್ದ ಧ್ವಜಗಳಿಂದ ಮೈದಾನದ ಒಂದು ಭಾಗದಲ್ಲಿ ಕೇಸರಿ ಬಣ್ಣ ರಾರಾಜಿಸುತ್ತಿತ್ತು. ಮೈದಾನದ ಮತ್ತೊಂದು ಜೆಡಿಎಸ್ ಕಾರ್ಯಕರ್ತರಿಂದಾಗಿ ಭಾಗ ಹಸಿರು ಬಣ್ಣಕ್ಕೆ ತಿರುಗಿತ್ತು.

ಮೈದಾನದ ಅಂಚಿನಲ್ಲಿರುವ ರಂಗಮಂದಿರದ ಎದುರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ಮಾಧವ ನಾಯಕ ಮತ್ತು ಅವರ ಬೆಂಬಲಿಗರು ಬೆಳಿಗ್ಗೆ 9ರಿಂದಲೇ ಜಮಾಯಿಸಿದ್ದರು. ಇದಕ್ಕೂ ಮೊದಲು ಅವರು ಮೈದಾನದಲ್ಲಿರುವ ಮಾಲಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ 10 ಗಂಟೆ ಸುಮಾರಿಗೆ ಕೋಡಿಬಾಗ ರಸ್ತೆಯ ಮೂಲಕ ಮೆರವಣಿಗೆ ಸಾಗಿದರು.

ದೇವಸ್ಥಾನದ ಎಡಭಾಗದಲ್ಲಿ ಮೈದಾನದ ತುದಿಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಪಕ್ಷದ ಧ್ವಜ, ಟೋಪಿ, ಶಾಲು ಧರಿಸಿ ಡೋಲಿನ ಸದ್ದಿಗೆ ಹೆಜ್ಜೆ ಹಾಕುತ್ತಿದ್ದರು. ಮಧ್ಯಾಹ್ನ 12ರ ಸುಮಾರಿಗೆ ಮೈದಾನಕ್ಕೆ ಬಂದ ಅಭ್ಯರ್ಥಿ ರೂಪಾಲಿ ನಾಯ್ಕ ಅವರು ಮಾಲಾದೇವಿಗೆ ಪೂಜೆ ಸಲ್ಲಿಸಿದರು. 12.15ಕ್ಕೆ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಹೊರಟರು.

ಅಷ್ಟರಲ್ಲಿ ಗಂಟೆ ಮಧ್ಯಾಹ್ನ 12.30 ಆಗಿತ್ತು. ಆಗ ಕಾಪ್ರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಹೊರಟಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರ ನೇತೃತ್ವದ ಮೆರವಣಿಗೆಯು ಮೈದಾನದ ಎದುರು ಸಾಗಿಬಂತು. ರಸ್ತೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮೈದಾನದಲ್ಲಿದ್ದ ಜೆಡಿಎಸ್ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಜೈಕಾರ ಕೂಗಿದರು.

ಜೆಡಿಎಸ್ ಪಕ್ಷದವರು ಮೈದಾನದಿಂದ ಕೊನೆಯದಾಗಿ ಮೆರವಣಿಗೆ ಹೊರಟರು. ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರು ತೆರೆದ ಜೀಪ್‌ನಲ್ಲಿ 12.45ರ ಸುಮಾರಿಗೆ ನಗರಸಭೆ ಕಚೇರಿಯತ್ತ ಸಾಗಿದರು. ಪಕ್ಷದ ಚಿಹ್ನೆಯಂತೆ ತೆನೆಹೊತ್ತ ಮಹಿಳೆಯರು, ಯಕ್ಷಗಾನ, ಜಾನಪದ ಶೈಲಿಯ ಗೊಂಬೆಗಳು ಗಮನ ಸೆಳೆದವು.

ವಿವಿಧ ರಾಜಕೀಯ ಪಕ್ಷಗಳ ಸುಮಾರು 3,000 ಕಾರ್ಯಕರ್ತರು ತಲೆಸುಡುವ ಬಿಸಿಲನ್ನೂ ಲೆಕ್ಕಿಸದೇ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಾಲಾದೇವಿ ಮೈದಾನದ ಸುತ್ತಮುತ್ತ ಇರುವ ಬೇಕರಿಗಳ ಮಾಲೀಕರು ಒಂದೇ ದಿನ ಭರ್ಜರಿ ವ್ಯಾಪಾರವಾದ ಸಂತಸ ವ್ಯಕ್ತಪಡಿಸಿದರು.

ಸಂಚಾರ ವ್ಯತ್ಯಯ: ವಿವಿಧ ಪಕ್ಷಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದ ಕಾರಣ ಕೋಡಿಬಾಗ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಚಲಾಯಿಸಲಾಗದೇ ಚಾಲಕರು ಪರದಾಡಿದರು.

ಮೈದಾನದ ತುಂಬ ಬಾಟಲಿಗಳು

ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿ ಮಾಲಾದೇವಿ ಮೈದಾನದಲ್ಲಿ ಸೇರಿದ್ದ ಸಾವಿರಾರು ಬೆಂಬಲಿಗರು ಬಿಸಿಲಿನೇಟಿಗೆ ಬಾಯಾರಿ ಬೆಂಡಾಗಿದ್ದರು. ಸಮೀಪದ ಅಂಗಡಿಗಳಿಂದ ಖರೀದಿಸಿದ್ದ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಕ್ಷಣಮಾತ್ರದಲ್ಲಿ ಖಾಲಿಯಾಗುತ್ತಿದ್ದವು. ಆದರೆ, ಅವುಗಳನ್ನು ಮೈದಾನದಲ್ಲಿ ಎಲ್ಲೆಂದರಲ್ಲಿ ಎಸೆದಿರುವುದು ಕಾರ್ಯಕರ್ತರು ಚದುರಿದ ನಂತರ ಕಂಡಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT