ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಐವರಿಂದ ನಾಮಪತ್ರ ಸಲ್ಲಿಕೆ

ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ರಂಗೇರಿದ ಚುನಾವಣಾ ಅಖಾಡ
Last Updated 24 ಏಪ್ರಿಲ್ 2018, 10:26 IST
ಅಕ್ಷರ ಗಾತ್ರ

ಕಾರವಾರ: ವಿಧಾನಸಭೆ ಚುನಾವಣೆಗೆ ಕಾರವಾರ– ಅಂಕೋಲಾ ಕ್ಷೇತ್ರದಿಂದ ಸೋಮವಾರ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಲ್ಲ ಅಭ್ಯರ್ಥಿಗಳೂ ಈ ಬಾರಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸತೀಶ್ ಸೈಲ್: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಕಾಪ್ರಿ ದೇವಸ್ಥಾನದಿಂದ ಕೋಡಿಬಾಗ್ ರಸ್ತೆಯ ಮೂಲಕ ಸಾಗಿಬಂದು ನಗರಸಭೆ ಆಯುಕ್ತ ಅಭಿಜಿನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕ್ಷೇತ್ರದ ಜನರು 2013ರಲ್ಲಿ ಮಾಡಿದಂತೆ ಈ ಬಾರಿಯೂ ಆಶೀರ್ವದಿಸುವ ವಿಶ್ವಾಸವಿದೆ. ಜನರ ಬಹುಬೇಡಿಕೆಯ ರಸ್ತೆಗಳು, ಸೇತುವೆಗಳು, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಜಾರಿ ಮಾಡಲು ಶ್ರಮಿಸಿದ್ದೇನೆ’ ಎಂದರು.

‘ಮುಂದಿನ ದಿನಗಳಲ್ಲಿಯೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಉದ್ಯೋಗಾವಕಾಶ ವೃದ್ಧಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡುತ್ತೇನೆ’ ಎಂದು ಹೇಳಿದರು.

ಅವರೊಂದಿಗೆ ಪತ್ನಿ ಕಲ್ಪನಾ ಸೈಲ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಮುಖಂಡರಾದ ಶಂಭುಶೆಟ್ಟಿ, ಸಮೀರ್ ನಾಯಕ್ ಅವರೂ ಇದ್ದರು.

ರೂಪಾಲಿ ನಾಯ್ಕ: ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರು ಮಾಲಾದೇವಿ ಮೈದಾನದಿಂದ ಮೆರವಣಿಗೆಯಲ್ಲಿ ಸಾಗಿಬಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಜತೆಗಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

‘ಭ್ರಷ್ಟ, ತಲೆಹಿಡುಕ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯಲು ಜನ ಮನಸ್ಸು ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಇದರಲ್ಲಿ ಅನುಮಾನ ಬೇಡ. ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ಮಹಿಳೆಯನ್ನು ಗೆಲ್ಲಿಸಬೇಕು ಎಂದು ಮಹಿಳೆಯರು ಉತ್ಸುಕರಾಗಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇವೇಳೆ ಮಾತನಾಡಿದ ರೂ‍ಪಾಲಿ ನಾಯ್ಕ, ‘ಮಹಿಳೆಗೆ ಬಿಜೆಪಿಯು ಅವಕಾಶ ನೀಡಿದೆ. ಮತದಾರರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು. ‌

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ವಕೀಲ ನಾಗರಾಜ ನಾಯ್ಕ, ಮುಖಂಡ ಗಣಪತಿ ಉಳ್ವೇಕರ್ ಅವರೂ ಇದ್ದರು.

ಆನಂದ್ ಅಸ್ನೋಟಿಕರ್: ಜೆಡಿಎಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಲು ಆನಂದ್ ಅಸ್ನೋಟಿಕರ್ ಕೂಡ ಮಾಲಾದೇವಿ ಮೈದಾನದಿಂದ ಮೆರವಣಿಗೆಯಲ್ಲಿ ಬಂದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,  ‘ಈ ಬಾರಿ ಕರಾವಳಿ ಭಾಗದಲ್ಲಿ ಜೆಡಿಎಸ್‌ನ ಮೊದಲ ಗೆಲುವು ಕಾರವಾರ– ಅಂಕೋಲಾ ಕ್ಷೇತ್ರದಿಂದ ಎಂದು ಘೋಷಿಸಬಹುದು. ಇದರಲ್ಲಿ ಸಂಶಯವಿಲ್ಲ. ಈ ಮೊದಲು ನಾವು ಮಾಡಿದ ಕೆಲಸಗಳನ್ನು ಮೆಚ್ಚಿರುವ ಜನರು ಮೆಚ್ಚಿಕೊಂಡಿದ್ದಾರೆ’ ಎಂದರು.

‘ನಾನು ಬೆಂಬಲ ಪಡೆಯುವ ಸಲುವಾಗಿ ಯಾರನ್ನೂ ಖರೀದಿ ಮಾಡಿಲ್ಲ. ಜನರ ಆಶೀರ್ವಾದ, ಎಚ್.ಡಿ.ಕುಮಾರಸ್ವಾಮಿ ಹಾಗೂ ಮಧು ಬಂಗಾರಪ್ಪ ಅವರ ಹಾರೈಕೆಯಿಂದ ಗೆಲುವು ಪಡೆಯಲಿದ್ದೇನೆ. ಕಾರವಾರದಲ್ಲಿ ಕನ್ನಡಮ್ಮನ ಗೆಲುವಿಗೆ ಕುಮಾರಣ್ಣನ ಗೆಲುವು ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮೋಹಿನಿ ಗೌಡ, ಚಂದ್ರಹಾಸ್ ಕೊಠಾರಕರ್, ರಾಜು ತಾಂಡೇಲ, ಆರ್.ಜಿ.ನಾಯ್ಕ ಅವರೂ ಇದ್ದರು.

ಮಾಧವ ನಾಯಕ: ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಧವ ನಾಯಕ ಅವರು ಮಾಲಾದೇವಿ ಮೈದಾನದಿಂದ ಮೆರವಣಿಗೆ ಹೊರಡುವ ಮೊದಲು ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು.

‘ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವ ಬಯಕೆಯಿಂದ ಎನ್‌ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ. ಇದು ನನಗೆ ಸವಾಲಾಗಿದೆ. ನಿಮ್ಮೆಲ್ಲರ ಹಾರೈಕೆ, ಬೆಂಬಲದಿಂದ ಪ್ರವಾಹದ ವಿರುದ್ಧ ಹೋಗುವ ಧೈರ್ಯ ಬಂದಿದೆ’ ಎಂದರು.

‘ನನ್ನನ್ನು ಕೂಡ ಕೆಲವು ಪಕ್ಷಗಳ ಮುಖಂಡರು ಖರೀದಿಸಲು ಯತ್ನಿಸಿದರು. ಆದರೆ, ಅದು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ನಾನು ಯಾವತ್ತೂ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ. ಸೋಲು, ಗೆಲುವು ದೇವರಿಗೆ ಬಿಟ್ಟಿದ್ದೇನೆ’ ಎಂದು ಹೇಳಿದರು.

ಕುಂದಾಬಾಯಿ ಪಾರುಳೇಕರ್: ಇದೇರೀತಿ, ರಾಷ್ಟ್ರೀಯ ಜನಸಂಭಾವನಾ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕೆ ಕುಂದಾಬಾಯಿ ಪಾರುಳೇಕರ್ ಕೂಡ ಕಣಕ್ಕೆ ಇಳಿದಿದ್ದು, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

**

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಸೋಲು ಅವರಿಗೆ ಕಟ್ಟಿಟ್ಟ ಬುತ್ತಿ 
– ಅನಂತಕುಮಾರ ಹೆಗಡೆ, ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT