ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳು ಮತಬ್ಯಾಂಕ್ ಆಗುವುದು ಬೇಡ

ರಾಜಕಾರಣ ಎಂಬ ಮಾರಿಯನ್ನು ಮಠ, ಮಸೀದಿ, ಚರ್ಚುಗಳಿಗೆ ಬಿಟ್ಟುಕೊಂಡರೆ ನೆಮ್ಮದಿಗೆ ಭಂಗ
Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗಾಂಧೀಜಿ ಸಲಹೆ ಮೇರೆಗೆ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ಜವಾಹರಲಾಲ್ ನೆಹರೂ ಆಯ್ಕೆ ಆಗುತ್ತಾರೆ. ನೆಹರೂ ಮನೆತನವನ್ನು ಕುರಿತು ಹೇಳಲೇಬೇಕಾದ ಒಂದು ಮಾತು, ‘ಕೆಲವರು ಬಾಯಲ್ಲಿ ಬೆಳ್ಳಿ ಚಮಚವನ್ನು ಇಟ್ಟುಕೊಂಡೇ ಹುಟ್ಟಿಬರುತ್ತಾರೆ’ ಎಂಬ ನುಡಿ. ಈ ನುಡಿಯು ನೆಹರೂ ಅವರಿಗೆ ಅತ್ಯಂತ ಅನ್ವರ್ಥಕ. ನೆಹರೂ ನೇತೃತ್ವದ ಸರ್ಕಾರವು ಬಂಡವಾಳಶಾಹಿಯನ್ನು ಪ್ರೋತ್ಸಾಹಿಸಿದ್ದರಲ್ಲಿ ಯಾವ ಸಂದೇಹವೂ ಇಲ್ಲ. ಅಂದಿನ ದಿನಗಳಲ್ಲಿ ಆ ಪಕ್ಷವನ್ನು ಬಂಡವಾಳಶಾಹಿಗಳು ಬೆಂಬಲಿಸುತ್ತಿದ್ದರು. ಅಂದು ಬಂಡವಾಳಶಾಹಿ ಮುಖಾಂತರ ಸಾಮಾನ್ಯರು, ಶೋಷಿತರು ಮತ್ತು ಮಧ್ಯಮ ವರ್ಗದವರನ್ನು ನಿಯಂತ್ರಿಸಲಾಗುತ್ತಿತ್ತು. ರಾಜಕೀಯದ ಎಲ್ಲ ಮಗ್ಗುಲುಗಳನ್ನು ನೆಹರೂ ಅವರ ಮಗಳಾದ ಇಂದಿರಾ ಅವರು ತಿಳಿದುಕೊಳ್ಳುತ್ತ ನಡೆದಿದ್ದರು.

ಭಾರತ ದೇಶದ ರಾಜಕೀಯ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಪ್ರಧಾನಮಂತ್ರಿಯಾಗಿದ್ದು ಕಡಿಮೆ ಸಾಹಸವೇನಲ್ಲ! ಮುತ್ಸದ್ದಿ ರಾಜಕಾರಣಕ್ಕೆ ಎಂಟೆದೆ, ಗಟ್ಟಿತನ, ಪ್ರಬುದ್ಧತೆ, ಬದ್ಧತೆ, ಜನರ ನಾಡಿಮಿಡಿತವನ್ನು ಅರಿಯಬಲ್ಲ ಚಾಕಚಕ್ಯತೆ, ಮೇಧಾವಿತನ ಮುಂತಾದ ಲಕ್ಷಣಗಳು ಬೇಕಾಗುತ್ತವೆ. ಈ ಎಲ್ಲ ಗುಣಗಳು ಇಂದಿರಾ ಗಾಂಧಿ ಅವರಲ್ಲಿ ಇದ್ದವು. ಆಂಗ್ಲಭಾಷೆಯಲ್ಲಿ ‘Man rules the world, woman rules the man’ ಎಂಬ ವಾಕ್ಯವಿದೆ. ಪುರುಷನು ಪ್ರಯತ್ನಿಸಿದರೆ ಜಗತ್ತನ್ನು ಆಳಬಲ್ಲನು; ಜಗತ್ತನ್ನು ಆಳಬಲ್ಲ ಪುರುಷನನ್ನು ಮಹಿಳೆ ಆಳುತ್ತಾಳೆ ಎಂಬ ಮಾತು ಅತ್ಯಂತ ಪ್ರಸ್ತುತ. ತಮ್ಮ ಸಚಿವ ಸಂಪುಟದಲ್ಲಿ ಎಂಥೆಂಥ ಪುರುಷ ದಿಗ್ಗಜರಿದ್ದರೂ ಇಂದಿರಾ ಅವರಿಗೆ ಎದುರಾಡುವಂತಹ ಪುರುಷ ಇರಲಿಲ್ಲ. ಒಮ್ಮೊಮ್ಮೆ ಏಕವ್ಯಕ್ತಿ ನಿರ್ಧಾರ; ಅನೇಕ ಸಲ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ತೆಗೆದುಕೊಳ್ಳುತ್ತಿದ್ದ ನಿರ್ಧಾರ. ಬಂಡವಾಳಶಾಹಿಯನ್ನು ರಕ್ಷಿಸುತ್ತ ಬಂದಿದ್ದ ತಮ್ಮ ಪಕ್ಷವು ನಂತರದ ದಿನಗಳಲ್ಲಿ ಜನಸಾಮಾನ್ಯರ ಆಗುಹೋಗುಗಳನ್ನು ಕುರಿತು ಚಿಂತಿಸಲು ಮುಂದಾದದ್ದು, ಅಲಕ್ಷಿತ ವರ್ಗಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುತ್ತ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನೇ ಬದಲಾಯಿಸಲಾಯಿತು. ‘ಉಳುವವನೇ ಒಡೆಯ’ ಕಾನೂನು, ಬಡವರ ಪರವಾಗಿ ಜಾರಿಗೊಂಡಿತು. ತನ್ಮೂಲಕ ಬಂಡವಾಳಶಾಹಿಗೆ ಆಘಾತ. ದೇಶದಲ್ಲಿ ಬಂಡವಾಳಶಾಹಿಗಳ ಸಂಖ್ಯೆ ಅತ್ಯಲ್ಪ; ಬಡವರು, ಶೋಷಿತರು ಮತ್ತು ಮಧ್ಯಮ ವರ್ಗದವರೇ ಸಂಖ್ಯೆಯಲ್ಲಿ ಹೆಚ್ಚು. ಅವರನ್ನು ಪ್ರೋತ್ಸಾಹಿಸಿದರೆ ಅವರು ತಮ್ಮನ್ನು ಬೆಂಬಲಿಸುತ್ತಾರೆಂಬ ತಂತ್ರ ಫಲ ನೀಡಿತು. ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತ ಹೋದರು.

ಬಂಡವಾಳಶಾಹಿಗಳ ಕೈಯಲ್ಲಿದ್ದ ಮತ್ತೊಂದು ಕ್ಷೇತ್ರವೆಂದರೆ, ಬ್ಯಾಂಕಿಂಗ್ ಕ್ಷೇತ್ರ. ಹಣ ಕೇಂದ್ರಿತವಾದ ಬ್ಯಾಂಕಿಂಗ್ ಕ್ಷೇತ್ರವು ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ಅರಿಯಲು ಇದರಿಂದಾಚೆಗೆ ತಡವಾಗಲಿಲ್ಲ. ಕಾರಣ ಮತ್ತೊಂದು ಆಘಾತಕಾರಿ ನಿರ್ಧಾರವೆಂದರೆ, ಬ್ಯಾಂಕ್‍ಗಳ ರಾಷ್ಟ್ರೀಕರಣ. ಕಠಿಣತರವಾದ ನಿಲುವುಗಳು ಬಂಡವಾಳಶಾಹಿಗಳಿಗೆ ಬಲವಾದ ಪೆಟ್ಟನ್ನು ನೀಡಿದವು. ಇಂಥ ಆಘಾತಗಳಿಂದ ಶ್ರೀಮಂತ ವರ್ಗವು ಸಾವರಿಸಿಕೊಂಡಿತು. ಮುಂದಿನ ಕಠಿಣತರವಾದ ನಿರ್ಣಯವೆಂದರೆ ಖಾಸಗಿ ಬಸ್‍ಗಳ ರಾಷ್ಟ್ರೀಕರಣ. ಹಂತಹಂತವಾಗಿ ಬಂಡವಾಳ ಶಾಹಿಯ ಮಗ್ಗುಲನ್ನು ಮುರಿಯುತ್ತ, ಜನಸಾಮಾನ್ಯರನ್ನು ಕೇಂದ್ರೀಕರಿಸುತ್ತ ಹೋದದ್ದರಿಂದ ಇಂದಿರಾ ಗಾಂಧಿಯಂಥ ಗಟ್ಟಿಹೃದಯದ ಮಹಿಳೆಯು ತನ್ನ ಗಟ್ಟಿ ನಿರ್ಧಾರಗಳಿಂದ ಹದಿನೈದು ವರ್ಷಗಳವರೆಗೆ ಪ್ರಧಾನಮಂತ್ರಿಯಾಗಿ ಮುಂದುವರೆಯಲು ಸಾಧ್ಯವಾಯಿತು.

ಇಂಥ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡವರಲ್ಲಿ ಮತ್ತೊಬ್ಬರ ಹೆಸರು ಕೇಳಿಬರುತ್ತದೆ. ಅವರೆಂದರೆ, ವಿ.ಪಿ.ಸಿಂಗ್. ಅವರು ಮಂಡಲ್ ವರದಿಯನ್ನು ಜಾರಿಗೊಳಿಸುವ ಮೂಲಕ ಸ್ಥಿತಿವಂತರಿಗೆ ಸಿಂಹಸ್ವಪ್ನವಾದರು. ಕೆಲವು ಯುವಜನರು ಅದನ್ನು ವಿರೋಧಿಸಿ ಸಾವಿಗೆ ಶರಣಾದರು. ತಮ್ಮ ನಿರ್ಧಾರವನ್ನು ಬದಲಿಸದೆ, ದೃಢತೆಯನ್ನು ತೋರಿದ ಕೀರ್ತಿಗೆ ಭಾಜನರಾದರು. ಕರ್ನಾಟಕದ ರಾಜಕೀಯ ಇತಿಹಾಸಕ್ಕೆ ಬಂದಾಗ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ತೆಗೆದುಕೊಂಡ ನಿರ್ಧಾರಗಳು ದಿಟ್ಟತನದಿಂದ ಕೂಡಿವೆ. ಹಾವನೂರು ವರದಿಯನ್ನು ತರುವುದರ ಮುಖಾಂತರ ಮುಂದುವರೆದ ವರ್ಗಕ್ಕೆ ಬೆಂಕಿಯ ಉಂಡೆಯಾದರು. ಮಾಯಾವತಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅತ್ಯಂತ ಅಲ್ಪಸಂಖ್ಯಾತರಾದ ನಿತೀಶ್‍ಕುಮಾರ್‌ ಅಂಥವರು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಅನುಭವಿಸುತ್ತಿದ್ದಾರೆ. ಇದರ ರಹಸ್ಯವೇನೆಂದರೆ ರಾಜಕೀಯ ಲೆಕ್ಕಾಚಾರ. ಹಿಂದುಳಿದ ವರ್ಗಗಳೊಂದಿಗೆ ಮುಂದುವರೆದ ಜಾತಿಗಳನ್ನು ಸೇರಿಸಿಕೊಂಡು ರಾಜಕಾರಣ ಮಾಡಿದ್ದು.

ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಪಕ್ಷದ ಆಡಳಿತವಿದ್ದು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಿದ್ದಾರೆ. ಇವರು ಆರಂಭದಿಂದಲೂ ‘ಅಹಿಂದ’ ಹೋರಾಟವನ್ನು ಮುಂದುವರೆಸುತ್ತ ಬಂದಿದ್ದು, ತಮ್ಮ ಅಧಿಕಾರದ ಅವಧಿಯಲ್ಲೂ ತಮ್ಮದು ‘ಅಹಿಂದ ಸರ್ಕಾರ’ವೆಂದು ಅಭಿಮಾನದಿಂದ ಹೇಳಿಕೊಳ್ಳುತ್ತ ಬಂದಿದ್ದಾರೆ. ಇತ್ತೀಚೆಗೆ ರಾಷ್ಟ್ರದ ಬೇರೆಬೇರೆ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಅಮಿತ್‍ ಶಾ ಅವರು ತಮ್ಮ ಪಕ್ಷವು ಗೆಲ್ಲಲು ಕೆಲವೊಂದು ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರವನ್ನು ಅನುಸರಿಸಿದ್ದಾರೆ. ಅದರಿಂದ ಅವರ ತಂತ್ರಗಳು ಪರಿಣಾಮಕಾರಿ ಆಗಿವೆ; ಫಲ ಕೊಟ್ಟಿವೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಏನೇ ಒಡಕು-ತೊಡಕು ಸಂಭವಿಸಿದರೂ ಅವನ್ನೆಲ್ಲ ಧೈರ್ಯವಾಗಿ ನಿರ್ವಹಿಸುತ್ತ, ಗುಂಪುಗಾರಿಕೆ ನುಸುಳದಂತೆ ನೋಡಿಕೊಂಡಿದ್ದಾರೆ. ಅಹಿಂದ ಜಾತಿಗಳಿಗೆ ಆದಷ್ಟು ಹೆಚ್ಚಿನ ಮಹತ್ವ ನೀಡುತ್ತ, ಅವರನ್ನು ಸೆಳೆಯುವ ಎಲ್ಲ ಪ್ರಯತ್ನವನ್ನು ಮಾಡಿದ್ದಾರೆ. ಜಾತಿ ಗಣತಿಯನ್ನು ಮಾಡಿಸಿದ್ದು, ಅದರ ಅಂಕಿ-ಅಂಶಗಳು ಸರ್ಕಾರಕ್ಕೆ ಲಭ್ಯವಿದ್ದು ಅದರ ಆಧಾರದ ಮೇಲೆ ಆಯಾ ಜಾತಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ. ತಮ್ಮ ಪಕ್ಷವು ಮುಂದೆಯೂ ಸರ್ಕಾರ ನಡೆಸುವಷ್ಟು ಜನಮತ ಗಳಿಸುತ್ತದೆಂಬ ವಿಶ್ವಾಸ.

ಬಹುತೇಕ ಶಿಕ್ಷಣ ಸಂಸ್ಥೆಗಳು ಖಾಸಗಿ ವ್ಯಕ್ತಿಗಳ ಕೈಯಲ್ಲಿದ್ದು, ವ್ಯವಸ್ಥೆಯನ್ನು ನಿರ್ವಹಿಸುತ್ತವೆಂಬ ಮಾಹಿತಿಯು ಸರ್ಕಾರಕ್ಕೆ ಇದೆ. ಖಾಸಗಿ ಸಂಸ್ಥೆಗಳ ಹಿಡಿತವನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲವೊಂದು ಕಠೋರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅನುದಾನವನ್ನು ತಡೆಯುವ, ಖಾಲಿಯಿರುವ ಹುದ್ದೆಗಳನ್ನು ತುಂಬಲು ಅವಕಾಶ ನೀಡದಿರುವ, ಮೆಡಿಕಲ್ ಮತ್ತಿತರ ಸೀಟುಗಳನ್ನು ಸೀಮಿತಗೊಳಿಸುವಂತಹ ಕ್ರಮಗಳು ಖಾಸಗಿ ಸಂಸ್ಥೆಗಳ ಮೂಳೆ ಮುರಿಯಲು ಸಾಕಲ್ಲವೇ? ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿಯಿಂದಾಗಿ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚಿಕೊಳ್ಳುತ್ತಿವೆ. ಮೊದಲಿನಿಂದಲೂ ಅಕ್ಷರ ಸಂಸ್ಕೃತಿಯನ್ನು ಬೆಳೆಸುತ್ತ ಬಂದಿರುವ ಖಾಸಗಿ ಒಡೆತನದ ಶಾಲಾ-ಕಾಲೇಜುಗಳನ್ನು ಉಳಿಸಲು ಸರ್ಕಾರವು ಸಂಸ್ಥೆಗಳವರಿಗೆ ಪ್ರೋತ್ಸಾಹ ಕೊಡಬಹುದಿತ್ತು. ರಾಜ್ಯದಾದ್ಯಂತ ವಿವಿಧ ಮಠಗಳು ಹರಡಿವೆ. ಅವುಗಳು ಪ್ರತ್ಯಕ್ಷವಾಗಿ ಹಾಗೂ ಅಪ್ರತ್ಯಕ್ಷವಾಗಿ ರಾಜಕಾರಣದಲ್ಲಿ ತಲೆ ತೂರಿಸುತ್ತಿವೆ ಎಂಬುದನ್ನು ಅರಿತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಎರಡು ವರ್ಷಗಳ ಹಿಂದೆ ಮಠಗಳನ್ನು ಸರ್ಕಾರಿ ನಿಯಂತ್ರಣಕ್ಕೆ ಒಳಪಡಿಸುವ ಅಭಿಪ್ರಾಯ ವ್ಯಕ್ತವಾಯಿತು. ಅಂದು ನಾವೆಲ್ಲ ಅದನ್ನು ಸಮರ್ಥವಾಗಿ ಪ್ರತಿಭಟಿಸುವಲ್ಲಿ ಯಶಸ್ವಿಯಾಗಿ, ಸಚಿವರಾಗಿದ್ದ ಮಹದೇವ ಪ್ರಸಾದರ ಮನೆಗೆ ಮುಖ್ಯಮಂತ್ರಿಯನ್ನು ಬರಮಾಡಿಕೊಂಡು ಒಂದು ಗಂಟೆವರೆಗೆ ಚರ್ಚಿಸಲಾಯಿತು. ‘ಯಾವುದೇ ಕಾರಣದಿಂದ ನೀವು ಮಠ ನಿಯಂತ್ರಣ ಮಸೂದೆ ತರಬಾರದು’ ಎಂದು ಆಗ್ರಹಿಸಿದಾಗ, ಸದ್ಯದಲ್ಲೇ ನಡೆಯುವ ಅಧಿವೇಶನದಲ್ಲಿ ಆ ಮಸೂದೆಯನ್ನು ಹಿಂಪಡೆಯುತ್ತೇವೆಂದು ಭರವಸೆ ನೀಡಿದರು. ಅದರಂತೆ ಮಸೂದೆಯನ್ನು ಹಿಂಪಡೆದರು.

ಫೆಬ್ರುವರಿ 5ರಿಂದ 12ರವರೆಗೆ ಎರಡು ದೇಶಗಳ ಪ್ರವಾಸಕ್ಕೆಂದು ಹೋದಾಗ ಮತ್ತೆ ಮಠ ನಿಯಂತ್ರಣ ಸಂಬಂಧದ ಸುತ್ತೋಲೆ ಕುರಿತು ಮುಜರಾಯಿ ಖಾತೆ ಸಚಿವರಿಂದ ಪ್ರಸ್ತಾಪವಾಯಿತು. ಆಗ, ಮಠಾಧೀಶರು ಪ್ರಬಲವಾಗಿ ವಿರೋಧಿಸಿದ್ದರಿಂದ- ‘ಜನಾಭಿಪ್ರಾಯವನ್ನು ಕೇಳಲು ಮಾತ್ರ ಈ ಸುತ್ತೋಲೆ ಬಗ್ಗೆ ಪ್ರಸ್ತಾಪಿಸಲಾಗಿತ್ತು’ ಎಂಬ ಜಾಣ್ಮೆಯ ಉತ್ತರ ಮುಖ್ಯಮಂತ್ರಿಯಿಂದ ಬಂತು. ಒಮ್ಮೆ ಸುತ್ತೋಲೆಯನ್ನು ಹಿಂಪಡೆದಿರುವಾಗ ಮತ್ತೆ ಅದರ ಪ್ರಸ್ತಾಪ ಆಗಬಾರದಿತ್ತಲ್ಲ? ಸಮಾಜ ಸೇವೆಯನ್ನು ಸಮರ್ಪಕವಾಗಿ ಮುಂದುವರಿಸುವಲ್ಲಿ ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನು ಮಾಡಬಹುದು. ಇಲ್ಲಿಯವರೆಗೆ ಸರ್ವಜನಾಂಗಗಳಿಗೆ ವಿದ್ಯೆ ನೀಡುತ್ತ ಬಂದಿದ್ದು, ಮಠಗಳ ಅಸಾಮಾನ್ಯ ಕೊಡುಗೆ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಸುತ್ತೋಲೆ ಕುರಿತು ಕಾರಣ ಹುಡುಕುವ ಕಾಲವಿದು. ಮಠಗಳು ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಬೇಕು. ಅದನ್ನು ಬದಿಗೊತ್ತಿ ಮಠಗಳು, ಮತಗಳನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾದರೆ, ಮಠ ನಿಯಂತ್ರಣ ಮಸೂದೆ ರೂಪಿಸುವಂತಹ ವಾತಾವರಣ ಸೃಷ್ಟಿಯಾಗಬಹುದೇನೋ? ಧರ್ಮ ಮತ್ತು ರಾಜಕಾರಣದ ನಡುವೆ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಧರ್ಮ ಮತ್ತು ರಾಜಕಾರಣಕ್ಕೆ ವ್ಯತ್ಯಾಸ ಕಾಣದಂತಾಗುತ್ತದೆ. ತನ್ಮೂಲಕ ಮಠಗಳು ಮತಬ್ಯಾಂಕ್ ಆಗುವುದು ಉತ್ತಮ ಲಕ್ಷಣವೇನೂ ಅಲ್ಲ. ಸಾಧ್ಯವಾದರೆ ಮಠಾಧೀಶರು ರಾಜಕಾರಣಕ್ಕೆ ಮಾರ್ಗದರ್ಶನ ಮಾಡಲಿ; ರಾಜಕೀಯ ಚಟುವಟಿಕೆಯ ಕೇಂದ್ರವಾದರೆ ಅನಾಹುತ ಕಟ್ಟಿಟ್ಟದ್ದು.

ಈ ಹಿಂದೆ ಕೇಂದ್ರದಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಇದ್ದಂತಹ ಸಂದರ್ಭ. ಬ್ಯಾಂಕ್, ಬಸ್ ಮತ್ತು ಉಳುವವನೇ ಒಡೆಯ ಕಾನೂನು ತಂದ ಸಂದರ್ಭದಲ್ಲೇ ಮಠಗಳನ್ನು ಸರ್ಕಾರಿ ನಿಯಂತ್ರಣಕ್ಕೆ ಒಳಪಡಿಸಬೇಕೆಂಬ ಅನಿಸಿಕೆ ವ್ಯಕ್ತವಾಯಿತು. ಈ ಸಂಬಂಧ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿರೋಧ ವ್ಯಕ್ತವಾಯಿತು. ಗುಂಡೂರಾವ್ ಮುಖಾಂತರವಾಗಿ ಕೆಲ ಮಠಾಧೀಶರು ಕೇಂದ್ರ ಸರ್ಕಾರಕ್ಕೆ ‘ನೀವು ಯಾವುದೇ ಕ್ಷೇತ್ರವನ್ನು ಬೇಕಾದರೂ ಸರ್ಕಾರಿ ಒಡೆತನಕ್ಕೆ ತೆಗೆದುಕೊಳ್ಳಿರಿ. ಆದರೆ ಧಾರ್ಮಿಕ ಮಠ-ಪೀಠಗಳ ತಂಟೆಗೆ ಬರಬೇಡಿರಿ. ಒಂದುಪಕ್ಷ ಮಠಗಳನ್ನು ಸರ್ಕಾರಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾದರೆ ರಾಷ್ಟ್ರದಾದ್ಯಂತ ಚಳವಳಿಯನ್ನು ಮಾಡಲಾಗುತ್ತದೆ’ ಎಂಬ ಸಂದೇಶವನ್ನು ರವಾನಿಸಿದ ಬಳಿಕ ಅದನ್ನು ಕೈಬಿಡಲಾಯಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

8-10 ವರ್ಷಗಳ ಹಿಂದೆ ಕರ್ನಾಟಕದ ಧಾರ್ಮಿಕ ನೇತಾರರು ಸ್ವತಃ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಕೆಲವರು ಕಾವಿ ತೊಟ್ಟುಕೊಂಡು ಮಠಾಧೀಶರಾಗಿದ್ದುಕೊಂಡು ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುತ್ತಾರೆ. ಕಾವಿಗೆ ತನ್ನದೇ ಆದ ಘನತೆಯಿದ್ದು, ಅದರಲ್ಲಿ ಖಾದಿಯನ್ನು ನೋಡಲು ಜನರು ಇಷ್ಟಪಡುವುದಿಲ್ಲ. ಕಾವಿ ಮತ್ತು ಖಾದಿ ಎರಡರ ನಡುವೆ ಬಹಳಷ್ಟು ಅಂತರವಿದೆ. ಖಾದಿ ತೊಟ್ಟು, ರಾಜ್ಯ-ರಾಷ್ಟ್ರ ರಾಜಕಾರಣ ಮಾಡಿದಂತಹ ಕೆಲವರು ಕಾವಿಯ ಆಶೀರ್ವಾದ ಪಡೆಯಲು ಮಠಕ್ಕೆ ಬರುತ್ತಾರೆ: ಈಗಲೂ ಅದನ್ನು ನೋಡಬಹುದಾಗಿದೆ. ಮುರುಘಾ ಪರಂಪರೆಯಲ್ಲಿ ಆಗಿಹೋಗಿರುವ ಜಯದೇವ ಮುರುಘರಾಜೇಂದ್ರರನ್ನು ರಾಷ್ಟ್ರಪಿತ ಗಾಂಧೀಜಿ ಭೇಟಿ ಮಾಡಿ ಅಸ್ಪೃಶ್ಯತಾ ನಿವಾರಣೆ ಕುರಿತು ಚರ್ಚಿಸಿದ್ದಾರೆ. ಇಂಥ ಉಜ್ವಲ ಉದಾಹರಣೆಗಳು ಇತಿಹಾಸದ ಪುಟದಲ್ಲಿ ನೋಡಲು ಸಿಗುತ್ತವೆ. ಮಾತ್ರವಲ್ಲದೆ, ಮೈಸೂರು ಮಹಾರಾಜರನ್ನೂ ಒಳಗೊಂಡಂತೆ 8-10 ರಾಜಮನೆತನಗಳು ಶ್ರೀಮಠಕ್ಕಲ್ಲದೆ ಇತರೆ ಮಠಗಳಿಗೂ ದಾನ, ದತ್ತಿ, ಉಂಬಳಿಯನ್ನು ನೀಡಿ ಗೌರವಿಸಿವೆ.

ಧಾರ್ಮಿಕ ಕೇಂದ್ರಗಳಿಗೆ ರಾಜಕೀಯ ಪ್ರಜ್ಞೆ ಬೆಳೆಸುವಂತಹ ಅವಕಾಶ ಇದೆ. ಮತದಾನ ಕುರಿತು ಜನರಲ್ಲಿ ಜಾಗೃತಿ ಉಂಟುಮಾಡುವುದು, ಪ್ರಜೆಗಳ ಹಕ್ಕು ಮತ್ತು ಕರ್ತವ್ಯ ಕುರಿತು, ಕಾನೂನು ಪ್ರಜ್ಞೆ, ಕರ್ತವ್ಯಪ್ರಜ್ಞೆ ಮುಂತಾದವುಗಳ ಬಗ್ಗೆ ಅರಿವನ್ನು ಮೂಡಿಸಬಹುದು. ಭ್ರಷ್ಟಾಚಾರ ನಿವಾರಣೆ ಬಗೆಗೆ ಕಾಳಜಿಯನ್ನು ವ್ಯಕ್ತಪಡಿಸುವುದು, ನೀರಾವರಿ ಮುಂತಾದ ಯೋಜನೆಗಳು ಜಾರಿ ಆಗುವಂತೆ ಹೋರಾಟ ಮಾಡುವುದು ಇತ್ಯಾದಿ. ರಾಜಕಾರಣ ಒಂದು ದೃಷ್ಟಿಯಲ್ಲಿ ಬೀದಿಯ ಮಾರಿ ಇದ್ದಂತೆ. ಅದನ್ನು ಮಠ, ಮಂದಿರ, ಮಸೀದಿ, ಚರ್ಚು, ಬಸದಿ ಇತ್ಯಾದಿಗಳಲ್ಲಿ ಹೊಗಿಸಿಕೊಂಡರೆ ವೈಯಕ್ತಿಕ ನೆಮ್ಮದಿ ಎಂಬುದು ಮರೀಚಿಕೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಬಹುದೇ ಹೊರತು, ರಾಜಕೀಯದ ದೂಳು ಮೆತ್ತಿಕೊಳ್ಳದಂತೆ ನೋಡಿಕೊಳ್ಳುವುದು ಜಾಣ್ಮೆಯ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT